ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರಸಭೆಯ ಕ್ರಮ ಖಂಡಿಸಿ ಪ್ರತಿಭಟನೆ

Published 26 ಜೂನ್ 2024, 5:07 IST
Last Updated 26 ಜೂನ್ 2024, 5:07 IST
ಅಕ್ಷರ ಗಾತ್ರ

ಚನ್ನಪಟ್ಟಣ: ನಗರದಲ್ಲಿ ಸಂಗ್ರಹವಾಗುವ ಕಸವನ್ನು ನಗರಸಭೆಯು ನಗರದ ಎಲೆಕೇರಿಯ ಕುಂಬಾರಗುಂಡಿ ಜಾಗದಲ್ಲಿ ಸುರಿಯುತ್ತಿದ್ದು, ಇದರಿಂದ ನಮಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದು ನಗರದ ಎಲೇಕೇರಿ ಬಳಿಯ ನಿವಾಸಿಗಳು ಮಂಗಳವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಟನ್ ಗಟ್ಟಲೇ ಕಸ ಸಂಗ್ರಹವಾಗುತ್ತಿದ್ದು, ಇದನ್ನು ನಗರಸಭೆ ಸಿಬ್ಬಂದಿ ಕೆಲವು ದಿನಗಳಿಂದ ಲಾರಿಗಳಲ್ಲಿ ಸಾಗಿಸಿ ಕುಂಬಾರಗುಂಡಿ ಪ್ರದೇಶದಲ್ಲಿ ಸುರಿಯುತ್ತಿದ್ದಾರೆ. ಇಲ್ಲಿ ರಾಶಿರಾಶಿ ಕಸ ಬೀಳುತ್ತಿದ್ದು, ಗಬ್ಬು ವಾಸನೆ ಬೀರುತ್ತಿದೆ. ಇದರಿಂದ ನಮಗೆ ಹಾಗೂ ನಮ್ಮ ಮಕ್ಕಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಪ್ರತಿಭಟನನಿರತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆಯು ಕಸ ಸುರಿಯಲು ದೂರದ ಜಾಗವನ್ನು ಆಯ್ಕೆ ಮಾಡಿಕೊಳ್ಳುವುದನ್ನು ಬಿಟ್ಟು ನಗರಕ್ಕೆ ಸಮೀಪದ ಜನವಸತಿ ಪ್ರದೇಶಕ್ಕೆ ತೀರಾ ಹತ್ತಿರವಾದ ಜಾಗವನ್ನು ಆಯ್ಕೆ ಮಾಡಿಕೊಂಡಿದೆ. ಮನೆಯ ಸುತ್ತಮುತ್ತ ಸೊಳ್ಳೆ ನೊಣಗಳ ಕಾಟ ಹೆಚ್ಚುತ್ತಿದೆ. ನಮ್ಮ ಮಕ್ಕಳಿಗೆ ಕೆಮ್ಮು, ಜ್ವರ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂದು ವಿವರಿಸಿದರು.

ಕಸದಿಂದ ಆಗುತ್ತಿರುವ ತೊಂದರೆಯ ಬಗ್ಗೆ ನಗರಸಭಾ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿದಿನ ಅನುಭವಿಸುತ್ತಿರುವ ನೋವು ತಾಳಲಾರದೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಗರಸಭೆ ಅಧಿಕಾರಿಗಳು ಈ ಬಗ್ಗೆ ಶೀಘ್ರ ಗಮನ ಹರಿಸಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಂದಾಯ ಅಧಿಕಾರಿ ಶಿವಕುಮಾರ್ ಪ್ರತಿಭಟನಕಾರರ ಮನವೊಲಿಸಿ ಈ ಬಗ್ಗೆ ಶೀಘ್ರ ಗಮನ ಹರಿಸುವ ಭರವಸೆ ನೀಡಿದರು. ನಂತರ ಮಹಿಳೆಯರು ಪ್ರತಿಭಟನೆ ಕೈಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT