ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ ಉಪ ಚುನಾವಣೆ | ಸ್ವಾಭಿಮಾನದ ಕಣ; ರಾಜಕೀಯ ಅಸ್ತಿತ್ವದ ಪಣ

ಉಪ ಚುನಾವಣೆ: ಬೊಂಬೆ ನಗರಿಯಲ್ಲಿ ದಿನದಿಂದ ದಿನಕ್ಕೆ ರಂಗೇರುತ್ತಿದೆ ಟಿಕೆಟ್ ರಾಜಕಾರಣ
Published : 30 ಆಗಸ್ಟ್ 2024, 4:15 IST
Last Updated : 30 ಆಗಸ್ಟ್ 2024, 4:15 IST
ಫಾಲೋ ಮಾಡಿ
Comments

ರಾಮನಗರ: ಉಪ ಚುನಾವಣೆ ಎದುರು ನೋಡುತ್ತಿರುವ ಚನ್ನಪಟ್ಟಣದಲ್ಲಿ ಅಭಿವೃದ್ಧಿ, ಅಸ್ವಿತ್ವ ಹಾಗೂ ಸ್ವಾಭಿಮಾನದ ರಾಜಕಾರಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಒಂದೆಡೆ, ಮೈತ್ರಿ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟವಿದೆ. ಮತ್ತೊಂದೆಡೆ, ಕಾಂಗ್ರೆಸ್‌ ಪಕ್ಷವು ಡಿಕೆಶಿ ಅವರೇ ಅಭ್ಯರ್ಥಿ ಎಂದು ಮೇಲ್ನೋಟಕ್ಕೆ ಬಿಂಬಿಸುತ್ತಾ, ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ಕ್ಷೇತ್ರವು ಕಳೆದೆರಡು ಚುನಾವಣೆಗಳಿಂದ ಜೆಡಿಎಸ್‌ ಕೈವಶವಾಗಿದ್ದು, ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರೇ ಪ್ರತಿನಿಧಿಸುತ್ತಾ ಬಂದಿದ್ದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಅವರು ಕೇಂದ್ರ ಸಚಿವರಾಗಿದ್ದಾರೆ. ಇದರಿಂದಾಗಿ, ಜಿಲ್ಲೆಯಲ್ಲಿ ಜೆಡಿಎಸ್‌ ಗೆದ್ದಿದ್ದ ಏಕೈಕ ಕ್ಷೇತ್ರ ತೆರವಾಗಿದೆ.

ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆ: ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೇ ಹಿಡಿತ ಹೊಂದಿರುವ ಎಚ್‌ಡಿಕೆಗೆ, ಈ ಚುನಾವಣೆ ಗೆಲುವು ಪ್ರತಿಷ್ಠೆ ಜೊತೆಗೆ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ. ಬಿಜೆಪಿ ಜೊತೆಗಿನ ಮೈತ್ರಿಯು, ಕ್ಷೇತ್ರಕ್ಕೆ ತಮ್ಮವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗದ ಸಂದಿಗ್ಧ ಸ್ಥಿತಿಗೆ ಎಚ್‌ಡಿಕೆಯನ್ನು ದೂಡಿದೆ. ಕ್ಷೇತ್ರದ ಪ್ರಭಾವಿ ಬಿಜೆಪಿ ರಾಜಕಾರಣಿ ಹಾಗೂ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿರುವ ಸಿ.ಪಿ. ಯೋಗೇಶ್ವರ್ ಎಚ್‌ಡಿಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ.

ಹಿಂದೆ ಜಿಲ್ಲೆಯಲ್ಲಿ ಕನಿಷ್ಠ ಇಬ್ಬರು ಜೆಡಿಎಸ್‌ ಶಾಸಕರು ಇರುತ್ತಿದ್ದರು. ಕಳೆದ ಚುನಾವಣೆಯಲ್ಲಿ ಆ ಸಂಖ್ಯೆ ಒಂದಕ್ಕಿಳಿದಿದೆ. ಈಗ ಅದನ್ನು ಉಳಿಸಿಕೊಳ್ಳಬೇಕಾದರೆ ಜೆಡಿಎಸ್‌ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಬೇಕು. ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಮನಸ್ಸಿದ್ದರೂ, ಕ್ಷೇತ್ರದಲ್ಲಾಗುತ್ತಿರುವ ರಾಜಕೀಯ ಧ್ರುವೀಕರಣವು ಎಲ್ಲಿ ತಿರುಗುಬಾಣವಾಗುತ್ತದೊ ಎಂಬ ಆತಂಕಕ್ಕೆ ದೂಡಿದೆ.

ಈಗಾಗಲೇ ಎರಡು ಚುನಾವಣೆಯಲ್ಲಿ ಸತತ ಸೋಲು ಕಂಡಿರುವ ಪುತ್ರನಿಂದ ಚನ್ನಪಟ್ಟಣ ಚಕ್ರವ್ಯೂಹ ಬೇಧಿಸುವ ಪ್ರಯೋಗಕ್ಕೆ ಮುಂದಾಗಿ, ವೈಫಲ್ಯ ಕಂಡರೆ ಪುತ್ರನ ಮುಂದಿನ ರಾಜಕೀಯ ಭವಿಷ್ಯದ ಗತಿ ಏನು? ಎಂಬ ಚಿಂತೆಯೂ ಎಚ್‌ಡಿಕೆ ಅವರನ್ನು ಕಾಡುತ್ತಿದೆ. ಇದರ ನಡುವೆಯೇ ಮೂರು ದಿನಗಳಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ.

‘ಕೈ’ ಹಿಡಿಯುವುದೇ ಅಭಿವೃದ್ಧಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿರ ಸಹೋದರ ಡಿ.ಕೆ. ಸುರೇಶ್ ಸೋಲಿನಿಂದ ಕಂಗೆಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಚುನಾವಣೆಯಲ್ಲಿ ಚನ್ನಪಟ್ಟಣವನ್ನು ‘ಕೈ’ ವಶ ಮಾಡಿಕೊಂಡು ಎಚ್‌ಡಿಕೆ ವಿರುದ್ಧ ಸೋಲಿನ ಸೇಡು ತೀರಿಸಿಕೊಳ್ಳಲು ಡಿಕೆಶಿ ಹವಣಿಸುತ್ತಿದ್ದಾರೆ.

‘ನಾನೇ ಅಭ್ಯರ್ಥಿ’ ಎಂದು ಹೇಳಿಕೊಂಡು ಮೂರು ತಿಂಗಳ ಹಿಂದೆಯೇ ಟೆಂಪಲ್ ರನ್ ಮಾಡಿ ಚುನಾವಣಾ ಕಹಳೆ ಊದಿರುವ ಡಿಕೆಶಿ, ಅಭಿವೃದ್ಧಿ ರಾಜಕಾರಣದ ಅಸ್ತ್ರ ಪ್ರಯೋಗಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತಪ್ರಮಾಣ ಗಣನೀಯವಾಗಿ ಏರಿಕೆಯಾಗಿರುವುದು ಡಿಕೆಶಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಪೂರಕವಾಗಿ ಅಭಿವೃದ್ಧಿ ಮೂಲಕ ಜನಮನ ಗೆಲ್ಲಲು ಮುಂದಾಗಿದ್ದಾರೆ.

ಕ್ಷೇತ್ರಕ್ಕೆ ₹100 ಕೋಟಿ ವಿಶೇಷ ಅನುದಾನ, ನಿವೇಶನ ಹಂಚಿಕೆಗೆ ಭೂಮಿ ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿರುವ ಅವರು, ಇದೀಗ ಬೃಹತ್ ಉದ್ಯೋಗ ಮೇಳವನ್ನು ಸಹ ಚನ್ನಪಟ್ಟಣದಲ್ಲೇ ಆಯೋಜಿಸಿದ್ದಾರೆ. ಇದೆಲ್ಲವೂ ಉಪ ಚುನಾವಣೆ ಗೆಲುವಿಗಾಗಿ ಎಂಬುದು ಗುಟ್ಟೇನಲ್ಲ. ಡಿಕೆಶಿ ಅಭಿವೃದ್ಧಿ ರಾಜಕಾರಣಕ್ಕೆ ಜನ ಮಣೆ ಹಾಕುವರೇ ಎಂಬುದನ್ನು ಕಾದು ನೋಡಬೇಕಿದೆ.

ಸಿಪಿವೈ ದಡ ಸೇರಿಸುವುದೇ ಸ್ವಾಭಿಮಾನ?

ಬಿಜೆಪಿ–ಜೆಡಿಎಸ್ ಮೈತ್ರಿಕೂಟದಲ್ಲಿ ಟಿಕೆಟ್ ಬೇಗುದಿ ಹೆಚ್ಚಿಸಿರುವ ಯೋಗೇಶ್ವರ್‌ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡರೂ ಮೈತ್ರಿ ನಾಯಕರು ಇದುವರೆಗೆ ಅಧಿಕೃತ ಮೊಹರು ಒತ್ತಿಲ್ಲ. ತಮ್ಮನ್ನು ಕಣಕ್ಕಿಳಿಸಲು ಒಲ್ಲದ ಎಚ್‌ಡಿಕೆ ಜೊತೆ ಅಂತರ ಕಾಯ್ದುಕೊಂಡಿರುವ ಸಿಪಿವೈ ಯಾವ ಹಂತದಲ್ಲೂ ಟಿಕೆಟ್ ತನ್ನ ಕೈ ತಪ್ಪಬಾರದೆಂಬ ಕಾರಣಕ್ಕೆ ಸ್ವಾಭಿಮಾನದ ಅಸ್ತ್ರ ಪ್ರಯೋಗಿಸಿ ಸ್ವತಂತ್ರ ಸ್ಪರ್ಧೆಯ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಡಿಕೆಶಿ ಜೊತೆ ವೇದಿಕೆ ಹಂಚಿಕೊಂಡು ಟಿಕೆಟ್ ಕೊಡದಿದ್ದರೆ ಪಕ್ಷಾಂತರಕ್ಕೂ ಸೈ ಎಂಬ ಸುಳಿವು ನೀಡಿದ್ದಾರೆ. ಡಿ.ಕೆ ಸಹೋದರರ ವಿರುದ್ಧ ಕೆಂಡ ಕಾರುತ್ತಿದ್ದ ಅವರೀಗ ಮೌನಕ್ಕೆ ಜಾರಿದ್ದಾರೆ. ಈ ನಡುವೆ ದೆಹಲಿ ಯಾತ್ರೆ ಕೈಗೊಂಡು ಬಿಜೆಪಿ ಅಥವಾ ಜೆಡಿಎಸ್‌ ಟಿಕೆಟ್‌ ಸಿಕ್ಕರೂ ಸ್ಪರ್ಧಿಸುವೆ ಎಂದಿದ್ದಾರೆ. ಈಗೀಗ ಪಕ್ಷದ ಕೆಲ ನಾಯಕರು ಅವರ ಬೆನ್ನಿಗೆ ನಿಲ್ಲತೊಡಗಿದ್ದಾರೆ. ಕ್ಷೇತ್ರದಲ್ಲಿ ಸಿಪಿವೈ ಕಡೆಗಣಿಸಿ ಚುನಾವಣೆ ಗೆಲ್ಲಲಾಗದು ಎಂಬ ಸತ್ಯ ಅರಿತಿರುವ ಮೈತ್ರಿ ನಾಯಕರು ಟಿಕೆಟ್ ಗೊಂದಲವನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಗೆಲುವು ನಿಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT