ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ‘ತೆನೆ’ ಅಧಿಕಾರಕ್ಕೆ ಕುತ್ತು

‘ಕೈ’ ಹಿಡಿದ ಚನ್ನಪಟ್ಟಣ ನಗರಸಭೆಯ ಒಂಬತ್ತು ಜೆಡಿಎಸ್ ಸದಸ್ಯರು
Published 6 ಏಪ್ರಿಲ್ 2024, 6:00 IST
Last Updated 6 ಏಪ್ರಿಲ್ 2024, 6:00 IST
ಅಕ್ಷರ ಗಾತ್ರ

ಚನ್ನಪಟ್ಟಣ: ಇಲ್ಲಿನ ನಗರಸಭೆಯ ಅಧ್ಯಕ್ಷ ಜೆಡಿಎಸ್‌ನ ಪಿ.ಪ್ರಶಾಂತ್ ಸೇರಿದಂತೆ ಒಂಬತ್ತು ಜೆಡಿಎಸ್ ಸದಸ್ಯರು, ಒಬ್ಬ ಪಕ್ಷೇತರ ಸದಸ್ಯೆ ಗುರುವಾರ ಕಾಂಗ್ರೆಸ್ ಪಕ್ಷ ಸೇರಿದ್ದು, ನಗರಸಭೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಕುತ್ತು ಎದುರಾಗಿದೆ.

ಸದಸ್ಯರ ಸಾಮೂಹಿಕ ಪಕ್ಷಾಂತರದಿಂದ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ನಗರಸಭೆಯ ಒಟ್ಟು ಬಲ 31. ಇದರಲ್ಲಿ ಜೆಡಿಎಸ್‌ 16, ಕಾಂಗ್ರೆಸ್‌, ಬಿಜೆಪಿ ತಲಾ ಏಳು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಇದ್ದರು. ಒಂಬತ್ತು ಮಂದಿ ಜೆಡಿಎಸ್‌ ಸದಸ್ಯರ ಕಾಂಗ್ರೆಸ್‌ ಸೇರ್ಪಡೆಯಿಂದ ಜೆಡಿಎಸ್‌ ಸದಸ್ಯರ ಸಂಖ್ಯೆ 7ಕ್ಕೆ ಕುಸಿದಿದೆ. ಹತ್ತು ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದರಿಂದ ಕಾಂಗ್ರೆಸ್‌ ಬಲ 17ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನ ಸದಾಶಿವ ನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದಲ್ಲಿ ಗುರುವಾರ ರಾತ್ರ ಒಂಬತ್ತು ಮಂದಿ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಪ್ರಶಾಂತ್, ರೇವಣ್ಣ ಎಂ.ಜೆ, ಸತೀಶ್ ಬಾಬು, ಶ್ರೀನಿವಾಸ್ ಮೂರ್ತಿ, ನಾಗೇಶ್, ಸಿ.ಜೆ. ಲೋಕೇಶ್, ಸಯ್ಯದ್ ರಫೀಕ್, ಅಭಿದಾ ಬಾನು, ಭಾನುಪ್ರಿಯ ಹಾಗೂ ಪಕ್ಷೇತರ ಸದಸ್ಯೆ ಉಮಾ ಕಾಂಗ್ರೆಸ್‌ ಸೇರ್ಪಡೆಯಾದವರು.

ಜೆಡಿಎಸ್‌ನ ಮೂರನೇ ಒಂದರಷ್ಟು ಸದಸ್ಯರು ಪಕ್ಷ ತೊರೆದಿದ್ದಾರೆ. ತಮ್ಮನ್ನು ಕಾಂಗ್ರೆಸ್ ಸದಸ್ಯರೆಂದು ಪರಿಗಣಿಸಿ ನಗರಸಭೆಯಲ್ಲಿ ಅವರ ಜೊತೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇನ್ನೂ ಎರಡು ಮೂರು ದಿನಗಳಲ್ಲಿ ಜೆಡಿಎಸ್‌ನ ಇನ್ನೂ ಮೂವರು ಸದಸ್ಯರು ಕಾಂಗ್ರೆಸ್ ಸೇರಲಿದ್ದಾರೆ. ಹಾಗಾಗಿ, ನಗರಸಭೆಯಲ್ಲಿ ತೆನೆ ಪಕ್ಷ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಎದುರಾಳಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರನ್ನು ತನ್ನತ್ತ ಸೆಳೆಯುತ್ತಿದ್ದು, ಈಗ ಇಲ್ಲಿನ ನಗರಸಭೆ ಜೆಡಿಎಸ್ ಸದಸ್ಯರಿಗೆ ಗಾಳ ಹಾಕಿದೆ. ಇದರೊಂದಿಗೆ ಕ್ಷೇತ್ರ ಪ್ರತಿನಿಧಿಸುವ ಜೆಡಿಎಸ್ ಅಧ್ಯಕ್ಷರೂ ಆಗಿರುವ ಶಾಸಕ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರಿಗೆ ಭಾರೀ ಹಿನ್ನಡೆಯಾದಂತಾಗಿದೆ.

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT