ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ: ಕುಮಾರಸ್ವಾಮಿ

ಇಗ್ಗಲೂರು ಜಲಾಶಯ: ಸಿ ಬಿಂದು ಪುನಶ್ಚೇತನ ಕಾಮಗಾರಿಗೆ ಚಾಲನೆ
Last Updated 17 ಜೂನ್ 2019, 14:46 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ‘ಸತ್ತೇಗಾಲದಿಂದ ಇಗ್ಗಲೂರು ಬ್ಯಾರೇಜ್ ಮೂಲಕ ಜಿಲ್ಲೆಯ ಕೆರೆಗಳಿಗೆ ಕಾವೇರಿ ನದಿ ನೀರು ತುಂಬಿಸುವ ₨540 ಕೋಟಿ ಮೊತ್ತದ ಯೋಜನೆಯು ಪ್ರಗತಿಯಲ್ಲಿದೆ. ಇದರಿಂದ ಜಿಲ್ಲೆಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರು ಬ್ಯಾರೇಜ್‌ ಬಳಿ ₹1.2 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆಯ ಸಿ ಬಿಂದುವಿನ ಪುನಶ್ಚೇತನ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಪತ್ರಕರ್ತರ ಜೊತೆ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಹಾಲಿ ಚಾಲ್ತಿಯಲ್ಲಿ ಇರುವ, ಶಿಂಷಾ ನದಿಯ ಸೋರಿಕೆ ನೀರನ್ನು ಬಳಸಿಕೊಂಡು ಇಗ್ಗಲೂರು ಜಲಾಶಯದಿಂದ ಕೆರೆಗಳನ್ನು ತುಂಬಿಸುವ ಯೋಜನೆಯು ಶಾಶ್ವತ ಪರಿಹಾರವಲ್ಲ. ಇದಕ್ಕೆ ಕೆಲ ತಾಂತ್ರಿಕ ಸಮಸ್ಯೆಗಳಿರುವುದನ್ನು ಅರ್ಥ ಮಾಡಿಕೊಂಡಿದ್ದೇನೆ. ಹೀಗಾಗಿ ಜಿಲ್ಲೆಯ ಮೂರು ತಾಲೂಕಿಗೆ ನೀರಾವರಿ ಕಲ್ಪಿಸುವ ಶಾಶ್ವತ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಮೊದಲ ಹಂತದಲ್ಲಿ ₹340 ಕೋಟಿ ವೆಚ್ಚದಲ್ಲಿ ಸತ್ತೆಗಾಲದಿಂದ ಇಗ್ಗಲೂರು ಜಲಾಶಯಕ್ಕೆ ಕಾವೇರಿ ನೀರು ತುಂಬಿಸಲಾಗುವುದು. ಎರಡನೇ ಹಂತದಲ್ಲಿ ಇಗ್ಗಲೂರು ಜಲಾಶಯದಿಂದ ಕಣ್ವ, ಮಂಚನಬೆಲೆ ಮತ್ತು ವೈ.ಜಿ.ಗುಡ್ಡ ಜಲಾಶಯಗಳನ್ನು ತುಂಬಿಸಿ ಅಲ್ಲಿಂದ ಕೆರೆಗಳಿಗೆ ನೀರು ತುಂಬಿಸಲಾಗುವುದು’ ಎಂದು ತಿಳಿಸಿದರು. ಚನ್ನಪಟ್ಟಣ ಹಾಗು ರಾಮನಗರವನ್ನು ಅವಳಿ ನಗರವನ್ನಾಗಿಸುವ ಕನಸು ಇದೆ. ಅದಕ್ಕಿನ್ನು ಸಮಯ ಬೇಕಿದೆ ಎಂದರು.

ವಾರದೊಳಗೆ ಚಾಲನೆ: ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ₹700 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣಕ್ಕೆ ಇನ್ನೊಂದು ವಾರದಲ್ಲಿ ಚಾಲನೆ ನೀಡಲಾಗುವುದು ಎಂದರು.

ಜನತೆಯ ಕ್ಷಮೆಯಾಚನೆ: ‘ಕಳೆದೊಂದು ವರ್ಷದಿಂದ ಅಭಿವೃದ್ಧಿ ಕಾರ್ಯಗಳ ಜತೆಗೆ ಸರ್ಕಾರ ಉಳಿಸಿಕೊಳ್ಳಲು ಸಮಯ ಮೀಸಲಿಡಬೇಕಾಯಿತು. ಚನ್ನಪಟ್ಟಣ ಹೆದ್ದಾರಿಯಲ್ಲಿಯೇ ಓಡಾಡಿದರೂ ಕ್ಷೇತ್ರಕ್ಕೆ ಬರಲಾಗಿಲ್ಲ. ಇದಕ್ಕಾಗಿ ಕ್ಷೇತ್ರದ ಜನರ ಕ್ಷಮೆಯಾಚಿಸುತ್ತೇನೆ. ಜನರಿಗೆ ನನ್ನ ಮೇಲೆ ಸಾಕಷ್ಟು ಪ್ರೀತಿ , ಮಮಕಾರ ಇದೆ. ಕ್ಷೇತ್ರಕ್ಕೆ ಬರಲಾಗದ ಕಾರಣ ಸಹಜವಾಗಿ ಸಿಟ್ಟು ಹೊರ ಹಾಕಿದ್ದಾರೆ. ಅವರನ್ನು ಭೇಟಿ ಮಾಡಿ, ಹಳ್ಳಿಗಳ ಹಂತದಲ್ಲಿಯೇ ಜನತ ಸಮಸ್ಯೆಗೆ ಪರಿಹಾರ ಒದಗಿಸುವ ಸಲುವಾಗಿ ಎರಡು ದಿನ ಜನತಾ ದರ್ಶನ ಹಮ್ಮಿಕೊಂಡಿದ್ದೇನೆ’ ಎಂದರು.

ಕಾರ್ಯಕ್ರಮಕ್ಕೆ ಬಂದ ಮುಖ್ಯಮಂತ್ರಿಗಳನ್ನು ಪೊಲೀಸರು ಗೌರವ ರಕ್ಷೆ ನೀಡಿ ಸ್ವಾಗತಿಸಿದರು. ಡೊಳ್ಳು, ವೀರಗಾಸೆ ಹಾಗೂ ಪೂಜಾ ಕುಣಿತದ ಕಲಾವಿದರು ಪ್ರದರ್ಶನ ನೀಡಿದರು.

**
ನಾಲ್ಕೂವರೆ ಗಂಟೆ ತಡ
ಇಗ್ಗಲೂರು ಜಲಾಶಯದ ಬಳಿಯ ಕಾರ್ಯಕ್ರಮವು ನಾಲ್ಕೂವರೆ ಗಂಟೆ ಕಾಲ ತಡವಾಗಿ ಆರಂಭವಾಯಿತು. ಬೆಳಿಗ್ಗೆ 9ಕ್ಕೆ ಕಾರ್ಯಕ್ರಮವು ನಿಗದಿಯಾಗಿದ್ದು, ಆರಂಭಗೊಂಡಾಗ ಮಧ್ಯಾಹ್ನ 1.30 ಆಗಿತ್ತು. ಮುಖ್ಯಮಂತ್ರಿ ಬೆಳಿಗ್ಗೆ 11.30ರ ಸುಮಾರಿಗೆ ಚನ್ನಪಟ್ಟಣಕ್ಕೆ ಬಂದರು. ಆದರೆ ಇಗ್ಗಲೂರಿಗೆ ಬರುವ ಮಾರ್ಗಮಧ್ಯದಲ್ಲಿ ಹಳ್ಳಿಗಳ ಜನರು ಅವರನ್ನು ಸ್ವಾಗತಿಸಿ, ಅಹವಾಲು ಸಲ್ಲಿಸಿದರು. ಎಲ್ಲರನ್ನೂ ಸಂತೈಸಿ ಬರುವ ವೇಳೆಗೆ ಮಧ್ಯಾಹ್ನವಾಗಿತ್ತು. ಅಧಿಕಾರಿಗಳು, ಪೊಲೀಸರು, ಮಾಧ್ಯಮದವರು ಹಾಗೂ ಕಲಾವಿದರು ಮುಂಜಾನೆಯಿಂದಲೇ ಅವರಿಗಾಗಿ ಕಾದಿದ್ದರು.

ದೇಗುಲದಲ್ಲೂ ಜನತಾ ದರ್ಶನ
ಇಗ್ಗಲೂರಿನ ಸೋಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಮುಖ್ಯಮಂತ್ರಿಗಳು ಅಲ್ಲಿಯೇ ಜನರಿಂದ ಅಹವಾಲು ಸ್ವೀಕಾರ ಮಾಡಿದರು.

‘ಹೆಸರಿಗಷ್ಟೇ ಬ್ಯಾರೇಜ್‌ ಇದ್ದು, ಸುತ್ತಲಿನ ಗ್ರಾಮಗಳಿಗೆ ನೀರು ಸಿಗುತ್ತಿಲ್ಲ’ ಎಂದು ಸ್ಥಳೀಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೊಬ್ಬರು ದೇವಸ್ಥಾನ ಅಭಿವೃದ್ಧಿಗೆ, ಇನ್ನೊಬ್ಬರು ಊರಿನ ಆಸ್ಪತ್ರೆಗೆ ಅಭಿವೃದ್ಧಿಗೆ ಕುಮಾರಸ್ವಾಮಿ ಮುಂದೆ ಬೇಡಿಕೆ ಇಟ್ಟರು.

ಈಡುಕಾಯಿ ಸೇವೆ
ಬ್ಯಾರೇಜ್‌ ನಿರ್ಮಾಣದ ಸವಿನೆನಪಿಗಾಗಿ ಇಗ್ಗಲೂರು ಬಳಿ ಗ್ರಾಮಸ್ಥರು ನಿರ್ಮಾಣ ಮಾಡಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಪ್ರತಿಮೆಯನ್ನು ಕುಮಾರಸ್ವಾಮಿ ವೀಕ್ಷಿಸಿದರು. ಈ ಸಂದರ್ಭ ಗ್ರಾಮಸ್ಥರು 1001 ಈಡುಗಾಯಿ ಒಡೆದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT