ಮಾಗಡಿ: ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ನೆಲೆಯಾದ ಮಾಗಡಿ ತಾಲ್ಲೂಕಿನ ಅಭಿವೃದ್ಧಿಗೆ ನಮ್ಮ ಸರ್ಕಾರ ಎಲ್ಲಾ ಸಹಕಾರ ನೀಡಲಿದೆ. ಇಲ್ಲಿನ ಶಾಸಕ ಬಾಲಕೃಷ್ಣ ಅವರು ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಪಟ್ಟಣದ ಹೊಸಪೇಟೆ ವೃತ್ತದಲ್ಲಿ ಶುಕ್ರವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಮಾಗಡಿಗೆ ಹಿಂದೆ ಹಲವು ಸಲ ಭೇಟಿ ನೀಡಿ, ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಕೆಂಪೇಗೌಡರ ಮಾಗಡಿ ಅಭಿವೃದ್ಧಿಯಾಗಬೇಕು ಎನ್ನುವುದಕ್ಕೆ ನನ್ನ ಸಹಮತವಿದೆ’ ಎಂದರು.
‘ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಹಣವಿಲ್ಲದೆ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎನ್ನುವ ವಿರೋಧ ಪಕ್ಷದವರಿಗೆ ಈ ಕಾರ್ಯಕ್ರಮವೇ ಉತ್ತರ. ಮಾಗಡಿ ತಾಲ್ಲೂಕಿನಲ್ಲಿ ₹120 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಇದ್ಯಾವುದೂ ಆರೋಪಿಸುವವರಿಗೆ ಕಾಣುತ್ತಿಲ್ಲವೆ?’ ಎಂದು ತಿರುಗೇಟು ನೀಡಿದರು.
‘ಗ್ಯಾರಂಟಿಗಳಿಂದಾಗಿ ರಾಜ್ಯದ ಸುಮಾರು 1.20 ಲಕ್ಷ ಕುಟುಂಬಗಳಿಗೆ ವಾರ್ಷಿಕವಾಗಿ ಸುಮಾರು ₹50 ಸಾವಿರ ಆರ್ಥಿಕ ಸಹಾಯ ಒದಗಿಸಲಾಗುತ್ತಿದೆ. ಕಾಂಗ್ರೆಸ್ ನಾಯಕರು ದೇಶ ಕಟ್ಟಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಆದರೂ, ಜನ ಸುಳ್ಳು ಹೇಳುವ ಮೋದಿಗೆ ಮತ ಹಾಕುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮೋದಿ ಉದ್ಯಮಿಗಳ ಪರವೇ ಹೊರತು, ಎಂದಿಗೂ ರೈತರ ಪರವಾಗಿಲ್ಲ. ಅದೇ ಕಾರಣಕ್ಕೆ ಉದ್ಯಮಿಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಅವರ ಸಹಾಯದಿಂದಾಗಿಯೇ ಅಂಬಾನಿ ಮತ್ತು ಅದಾನಿ ದೇಶದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸುಳ್ಳು ಹೇಳುವ ಬಿಜೆಪಿಯವರನ್ನು ನಂಬಿ ಮತ ಹಾಕಬೇಡಿ’ ಎಂದರು.
‘ಪರಿಶಿಷ್ಟರ ಅನುದಾನವನ್ನು ಬೇರೆಯವರಿಗೆ ನೀಡಲಾಗಿದೆ ಎಂದು ವಿರೋಧಪಕ್ಷದವರು ಸುಳ್ಳು ಹೇಳಿದರು. ಪರಿಶಿಷ್ಟರ ಹಣವನ್ನು ಅವರ ಹೊರತಾಗಿ ಬೇರಾರಿಗೂ ಬಳಸುವುದಿಲ್ಲ. ಅವರ ಜನಸಂಖ್ಯೆಗೆ ಅನುಗುಣವಾಗಿ ₹34 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಪರಿಶಿಷ್ಟರಿಗಾಗಿ ನಾವು ರೂಪಿಸಿರುವ ಎಸ್‌ಇಪಿ ಮತ್ತು ಟಿಎಸ್‌ಪಿ ಕಾಯ್ದೆಯನ್ನು ಬಿಜೆಪಿಯವರು ತಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾರಿಗೆ ತರಲಿ’ ಎಂದು ಸವಾಲು ಹಾಕಿದರು.
ಅಧಿಕಾರಿ ಮುಜುಗರ: ಶಾಸಕ ಬಾಲಕೃಷ್ಣ ಮಾತನಾಡುವಾಗ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಸರೋಜಾ ದೇವಿ ಅವರು ವೇದಿಕೆ ಏರಿ ಮುಖ್ಯಮಂತ್ರಿ ಭೇಟಿಗಾಗಿ ಅವರತ್ತ ಹೊರಟರು. ಕೂಡಲೇ, ಬಾಲಕೃಷ್ಣ ಸಹೋದರ ಎಚ್.ಎನ್. ಅಶೋಕ್ ಹಾಗೂ ಸಿ.ಎಂ ಬೆಂಗಾವಲು ಅಧಿಕಾರಿಗಳು ತಡೆದು ಹಿಂದಕ್ಕೆ ಹೋಗುವಂತೆ ಸೂಚಿಸಿದರು. ಅಧಿಕಾರಿ ನಡೆಯನ್ನು ಜಿಲ್ಲಾಧಿಕಾರಿ ಗಮನಕ್ಕೂ ತಂದರು. ಆದರೂ, ಕದಲದ ಸರೋಜಾ ದೇವಿ ವೇದಿಕೆಯಲ್ಲಿದ್ದ ಕುರ್ಚಿಯಲ್ಲಿ ಕಡೆವರೆಗೆ ಕುಳಿತು ಸಿ.ಎಂ ಭೇಟಿಗೆ ಕಸರತ್ತು ನಡೆಸಿದರು. ಆದರೂ, ಸಾಧ್ಯವಾಗಲಿಲ್ಲ.
ನಿಗಮದಲ್ಲಿ ಸರಿಯಾಗಿ ಕೆಲಸ ಮಾಡಿಲ್ಲವೆಂದು ಕೆಲ ತಿಂಗಳ ಹಿಂದೆ ಸರೋಜಾ ದೇವಿ ಅಮಾನತುಗೊಂಡಿದ್ದರು. ಇತ್ತೀಚೆಗೆ ನಡೆದಿದ್ದ ಕೆಡಿಪಿ ಸಭೆಯಲ್ಲೂ ಶಾಸಕರ ಕೆಂಗಣ್ಣಿಗೆ ಗುರಿಯಾಗಿದ್ದ ಅವರನ್ನು, ಜಿಲ್ಲೆಯಿಂದ ವರ್ಗಾವಣೆ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಸಿ.ಎಂ ಭೇಟಿಗೆ ಅವರು ಪ್ರಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್. ಅಶೋಕ್ ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಸಚಿವರಾದ ಮಧು ಬಂಗಾರಪ್ಪ, ಬಿ.ಝಡ್. ಜಮೀರ್ ಅಹಮದ್ ಖಾನ್, ಡಾ. ಎಂ.ಸಿ. ಸುಧಾಕರ್, ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ರಾಮೋಜಿ ಗೌಡ, ಸುಧಾಮ್ ದಾಸ್, ಎಸ್. ರವಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ಜಿಲ್ಲಾ ಅಧ್ಯಕ್ಷ ಕೆ. ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಎಚ್.ಎಂ. ಕೃಷ್ಣಮೂರ್ತಿ, ಬಮೂಲ್ ಅಧ್ಯಕ್ಷ ರಾಜಕುಮಾರ್, ಉಪಾಧ್ಯಕ್ಷ ಮಂಜುನಾಥ್, ವ್ಯವಸ್ಥಾಪಕ ನಿರ್ದೇಶಕ ಸುರೇಶ್, ನಿರ್ದೇಶಕರಾದ ಪಿ. ನಾಗರಾಜ್, ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಉಪ ವಿಭಾಗಾಧಿಕಾರಿ ಬಿನೋಯ್, ಮಾಗಡಿ ತಹಶೀಲ್ದಾರ್ ಶರತ್‌ಕುಮಾರ್ ಹಾಗೂ ಇತರರು ಇದ್ದರು.
ಕಡೆ ಗಳಿಗೆಯಲ್ಲಿ ಬಮೂಲ್ ನಿರ್ದೇಶಕರೂ ಆಗಿರುವ ಚನ್ನಪಟ್ಟಣ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಗಾಯಕ ಕಡಬಗೆರೆ ಮುನಿರಾಜು ಪ್ರಸ್ತುತಪಡಿಸಿದ ಗೀತೆಗಳು ಮುದ ನೀಡಿದವು.
ಹಸುಗಳ ದರ ಮತ್ತು ಆಹಾರ ದುಬಾರಿಯಾಗಿದ್ದು ಹಾಲು ಉತ್ಪಾದಕರಿಗೆ ಲಾಭವಾಗುತ್ತಿಲ್ಲ. ಲೀಟರ್ ನೀರಿಗಿಂತಲೂ ಹಾಲಿನ ದರ ಕಡಿಮೆ ಇದೆ. ಹಾಗಾಗಿ ಹಾಲಿನ ದರವನ್ನು ಕನಿಷ್ಠ ₹5ರಷ್ಟು ಹೆಚ್ಚಿಸಬೇಕುಕೆ.ಎನ್. ರಾಜಣ್ಣ ಸಹಕಾರ ಸಚಿವ
ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎನ್ನುವವರಿಗೆ ಈ ಕಾರ್ಯಕ್ರಮವೇ ಉತ್ತರ. ಬಿಜೆಪಿಯವರು ಹರಕಲು ಸೀರೆ ಮತ್ತು ಮುರುಕಲು ಸೈಕಲ್ ಕೊಟ್ಟರು. ಜೆಡಿಎಸ್‌ನವರು ಸ್ವಹಿತಾಸಕ್ತಿ ನೋಡಿಕೊಂಡರುಎಚ್.ಎಂ. ರೇವಣ್ಣ ರಾಜ್ಯಾಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
‘ಸಚಿವನಾಗುವ ಅರ್ಹತೆ ಬಾಲಕೃಷ್ಣಗಿದೆ’ ‘ಶಾಸಕ ಬಾಲಕೃಷ್ಣ ಅವರಿಗೆ ಸಚಿವರಾಗುವ ಅರ್ಹತೆಗಳಿವೆ. ಆದರೆ 32 ಮಂದಿಗಷ್ಟೇ ಸಚಿವರಾಗುವ ಅವಕಾಶವಿದೆ. ಸಚಿವನಾಗಲಿಲ್ಲವಲ್ಲ ಎಂದು ವ್ಯಥೆಪಡದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಉತ್ತಮ ವ್ಯಕ್ತಿಯನ್ನು ನೀವು ಆಯ್ಕೆ ಮಾಡಿಕೊಂಡಿದ್ದೀರಿ. ಇಂತಹ ಕಳಕಳಿ ಇರುವವರು ಸಾರ್ವಜನಿಕ ಜೀವನದಲ್ಲಿರಬೇಕು. ಅವರ ತಂದೆ ಚನ್ನಪ್ಪ ನಾನು ಆತ್ಮೀಯರಾಗಿದ್ದು ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದೆವು. ಹಾಗಾಗಿ ಬಾಲಕೃಷ್ಣ ಅವರನ್ನು ಚನ್ನಪ್ಪ ಎಂದೇ ಕರೆಯುತ್ತೇನೆ. ತಂದೆಯಷ್ಟು ಮಗ ಆತ್ಮೀಯನಾಗಿಲ್ಲದಿದ್ದರೂ ಅವರ ಕ್ಷೇತ್ರದ ಕೆಲಸಗಳನ್ನು ಮಾಡಿ ಕೊಟ್ಟಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು. ‘ನಿಮ್ಮೊಂದಿಗೆ ಬಂದಿದ್ದರೆ ಸಚಿವನಾಗುತ್ತಿದ್ದೆ’ ‘ನಿಮ್ಮೊಂದಿಗೆ (ಸಿದ್ದರಾಮಯ್ಯ) ನಾನೂ ಸಹ ಕಾಂಗ್ರೆಸ್‌ಗೆ ಬಂದಿದ್ದರೆ ಇಷ್ಟೊತ್ತಿಗಾಗಲೇ ಸಚಿವನಾಗಿರುತ್ತಿದ್ದೆ. ತಡವಾಗಿ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬಂದ ನಾನೂ ಸೇರಿದಂತೆ ಕೆಲವರು ಪರಾಭವಗೊಂಡಿದ್ದೆವು. ನಮ್ಮ ರಾಜಕೀಯ ಭವಿಷ್ಯ ಮುಗಿದು ಹೋಯಿತು ಎಂಬ ಸ್ಥಿತಿ ನಿರ್ಮಾಣವಾಗಿತ್ತು. ನೀವು ಮೊದಲ ಸಲ ಮುಖ್ಯಮಂತ್ರಿಯಾದಾಗ ಜಾರಿಗೆ ತಂದ ಜನಪರ ಯೋಜನೆಗಳನ್ನು ಮೆಚ್ಚಿದ ಜನ ಮತ್ತೆ ಜನಸೇವೆ ಮಾಡಲು ನಮಗೆ ಅವಕಾಶ ಕೊಟ್ಟರು’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಮ್ಮ ಭಾಷಣದಲ್ಲಿ ಹೇಳಿದರು.
ಬೇಡಿಕೆಗಳ ಪಟ್ಟಿ ಮುಂದಿಟ್ಟ ಬಾಲಕೃಷ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ದೊಡ್ಡ ಪಟ್ಟಿಯನ್ನೇ ಮುಖ್ಯಮಂತ್ರಿ ಮುಂದಿಟ್ಟರು. * ಪಟ್ಟಣಕ್ಕೆ 24X7 ಕುಡಿಯುವ ನೀರು ಯೋಜನೆಯ ಪುರಸಭೆ ವಂತಿಕೆ ಹಾಗೂ ಬಡ್ಡಿ ಮನ್ನಾ ಮಾಡಬೇಕು.* ಶ್ರೀರಂಗ ಏತ ನೀರಾವರಿ ಯೋಜನೆಯಡಿ ಮಾಗಡಿಗೆ 0.7 ಟಿಎಂಸಿ ಅಡಿ ನೀರು ಬರಬೇಕು. ಆದರೆ ನೀರು ಬಂದಿಲ್ಲ. ಈಗಿನ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿವಾದದ ಸುಳಿಯಲ್ಲಿದೆ. ತುಮಕೂರಿನ ಸಚಿವರಾದ ರಾಜಣ್ಣ ಮತ್ತು ಜಿ. ಪರಮೇಶ್ವರ್ ಅವರು ನಮಗೆ ನಿಗದಿಯಾಗಿರುವ 3.5 ಟಿಎಂಸಿ ಅಡಿ ನೀರು ಬಿಡುಗಡೆ ಮನಸು ಮಾಡಬೇಕು.* ಬೆಂಗಳೂರಿನಿಂದ ಮಾಗಡಿಗೆ ಸಂಪರ್ಕ ಕಲ್ಪಿಸಲು ಎಲಿವೇಟೆಡ್ ರಸ್ತೆ ನಿರ್ಮಿಸಬೇಕು.* ಮಾಗಡಿಗೆ ನಮ್ಮ ಮೆಟ್ರೊ ವಿಸ್ತರಿಸಲು ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು.* ತಾಲ್ಲೂಕಿನಲ್ಲಿ ನಂದಿನಿ ಹಾಲಿನ ಟೆಟ್ರಾ ಪ್ಯಾಕ್ ತಯಾರಿಕೆ ಘಟಕ ಸ್ಥಾಪಿಸಬೇಕು.* ಪಟ್ಟಣದಲ್ಲಿ ತಾಯಿ–ಮಗು ಆಸ್ಪತ್ರೆ ನೂತನ ಆಡಳಿತ ಸೌಧ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು.* ತಿಪ್ಪಸಂದ್ರ ಹೋಬಳಿಗೆ ಪದವಿ ಕಾಲೇಜು ಮಂಜೂರು ಮಾಡಬೇಕು. ಎಚ್.ಎಂ. ರೇವಣ್ಣ ಅವರು ಓದಿರುವ ಮಾಗಡಿಯಲ್ಲಿರುವ 70 ವರ್ಷ ಹಳೆಯ ಶಾಲೆಯನ್ನು ನವೀಕರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.