ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರಕ್ಕೆ ಸಿ.ಎಂ ವಿಶೇಷ ಅನುದಾನ ಭರವಸೆ: ಇಕ್ಬಾಲ್ ಹುಸೇನ್

ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ: ಅಭಿವೃದ್ಧಿ ಕಾಮಗಾರಿಗೆ ಚಾಲನೆ
Published 1 ಮಾರ್ಚ್ 2024, 7:43 IST
Last Updated 1 ಮಾರ್ಚ್ 2024, 7:43 IST
ಅಕ್ಷರ ಗಾತ್ರ

ರಾಮನಗರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮನಗರ ಕ್ಷೇತ್ರಕ್ಕೆ ವಿಶೇಷ ಅನುದಾನ ಕೊಡುವ ಭರವಸೆ ನೀಡಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ₹ 500 ಕೋಟಿ ನೀಡುವಂತೆ ನಾನು ಬೇಡಿಕೆ ಇಟ್ಟಿದ್ದೇನೆ. ಅಷ್ಟೂ ಸಿಗದಿದ್ದರೂ ಕಡೆಗೆ ₹ 300 ಕೋಟಿಯಾದರೂ ಕೊಡುತ್ತಾರೆಂಬ ಭರವಸೆ ಇದೆ’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಅರ್ಕೇಶ್ವರ ಕಾಲೊನಿ, ಅರಳಿಮರ ವೃತ್ತ, ಯಾರಬ್ ನಗರ ಹಾಗೂ ಬಾಲಗೇರಿ ವೃತ್ತದಲ್ಲಿ ಗುರುವಾರ ಚರಂಡಿ ನಿರ್ಮಾಣ ಹಾಗೂ ಕವರಿಂಗ್ ಸ್ಲ್ಯಾಬ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಅಭಿವೃದ್ಧಿಯಿಂದ ವಂಚಿತವಾಗಿರುವ ನಗರದ ಚಿತ್ರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ಸಹ ಸ್ಪಂದಿಸಿದರು’ ಎಂದರು.

‘ನಗರದ ಸ್ಥಿತಿ ನೋಡಿದ ಅವರು ಮುಖ್ಯಮಂತ್ರಿಯ ವಿಶೇಷ ಅಭಿವೃದ್ಧಿ ಯೋಜನೆಯಡಿ ₹ 82 ಕೋಟಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ₹12 ಕೋಟಿಯನ್ನು ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆಕೊಟ್ಟಿದ್ದಾರೆ. ನಗರದ ಗಡಿ ಭಾಗವಾದ ಹುಣಸನಹಳ್ಳಿಯಿಂದ ಟಿಪ್ಪು ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಜೋಡಿ ರಸ್ತೆಯನ್ನಾಗಿ ₹ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಎರಡು ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ’ ಎಂದು ಹೇಳಿದರು.

‘ಅರ್ಕಾವತಿ ನದಿ ದಡದಲ್ಲಿ ವಾಕಿಂಗ್ ಪಾತ್ ನಿರ್ಮಾಣಕ್ಕಾಗಿ ₹ 157 ಕೋಟಿ ಮತ್ತು ಭಕ್ಷಿ ಕೆರೆ ಒಡೆದಿದ್ದರಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಮೂಲಸೌಕರ್ಯಕ್ಕಾಗಿ ₹ 5.50 ಕೋಟಿ ಬಿಡುಗಡೆಯಾಗಿದೆ., ನೆರೆ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಹಿಂದಿನ ಬಿಜೆಪಿ ಸರ್ಕಾರ ₹ 200 ಕೋಟಿ ಕೊಡಬೇಕಿತ್ತು. ಆದರೆ, ಇದು ಮುಸ್ಲಿಮರು ಮತ್ತು ತಮಿಳರಿರುವ ಪ್ರದೇಶವೆಂದು ಕೇವಲ
₹ 5.50 ಕೋಟಿ ನೀಡಿ ಕೈ ತೊಳೆದುಕೊಂಡರು’ ಎಂದು ಬೇಸರ ವ್ಯಕ್ತಪಡಿಸಿದರು.

‘ಬರ ಮತ್ತು ಬೇಸಿಕೆ ಕಾರಣಕ್ಕಾಗಿ ನಗರದಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಸದ್ಯ ನಗರದಲ್ಲಿ 8 ಟ್ಯಾಂಕ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಸದ್ಯದಲ್ಲೇ 20 ಟ್ಯಾಂಕ್‌ಗಳಲ್ಲಿ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ಕೊಳವೆ ಬಾವಿಗಳಿಂದಲೂ ನೀರು ಕೊಡಲಾಗುವುದು. ಅದಕ್ಕಾಗಿ, ಕೆಟ್ಟಿರುವ ಕೊಳವೆ ಬಾವಿಗಳನ್ನು ದುರಸ್ತಿಗೊಳಿಸಲಾಗುತ್ತಿದೆ’ ಎಂದರು.

ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸೋಮಶೇಖರ್ , ಸ್ಥಾಯಿ ಸಮಿತಿ ಅಧ್ಯಕ್ಷ ಅಜ್ಮತುಲ್ಲಾ ಖಾನ್, ಸದಸ್ಯರಾದ ಕೆ. ಶೇಷಾದ್ರಿ ಶಶಿ, ಫೈರೋಜ್ ಪಾಷಾ, ನಿಜಾಮುದ್ದೀನ್ ಷರೀಫ್, ದೌಲತ್ ಷರೀಫ್ , ಆಯೇಷಾ ಬಾನು, ಗಿರಿಜಮ್ಮ, ಪೌರಾಯುಕ್ತ ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ , ಅನಿಲ್ ಜೋಗಿಂದರ್, ವಸೀಂ, ನಾಗಮ್ಮ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT