ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಎಸೆದರೆ, ಪ್ಲಾಸ್ಟಿಕ್ ಮಾರಿದರೆ ಬೀಳುತ್ತೆ ದಂಡ!

ಇ–ಖಾತೆ ಆಂದೋಲನಕ್ಕೆ ಉತ್ತಮ ಸಂದನೆ: ನಗರಸಭೆ ಆಯುಕ್ತೆ ಶುಭಾ
Last Updated 5 ಜುಲೈ 2019, 16:42 IST
ಅಕ್ಷರ ಗಾತ್ರ

ರಾಮನಗರ: ಜನರ ಅನುಕೂಲಕ್ಕಾಗಿ ಇ–ಆಸ್ತಿ ಖಾತೆ ಆಂದೋಲನ, ವೈಜ್ಞಾನಿಕ ಕಸ ವಿಲೇವಾರಿಗೆ ಒತ್ತು. ರಸ್ತೆಗೆ ಕಸ ಎಸೆಯುವವರ ಮೇಲೆ, ಪ್ಲಾಸ್ಟಿಕ್‌ ಮಾರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ...

ಇದು ರಾಮನಗರ ನಗರಸಭೆಯ ಸದ್ಯದ ಯೋಜನೆಗಳು. ಈ ಕುರಿತು ನಗರಸಭೆ ಆಯುಕ್ತೆ ಶುಭಾ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಕಳೆದ ಕೆಲವು ತಿಂಗಳಿಂದ ಇ–ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಒಟ್ಟು 27 ಸಾವಿರ ಆಸ್ತಿಗಳಿದ್ದು, ಇದರ ಪೈಕಿ 6,927 ಆಸ್ತಿಗಳಿಗೆ ಇ–ಖಾತೆ ನೀಡಲಾಗಿದೆ. ಕಳೆದೊಂದು ವರ್ಷದಲ್ಲಿ 1800 ಖಾತೆ ಮಾಡಿಕೊಡಲಾಗಿದೆ. ಕೆಲವು ಆಸ್ತಿಗಳಿಗೆ ಇ.ಸಿ. ಪೌತಿ ಖಾತೆ, ಸರ್ವೆ ವಿಚಾರದಲ್ಲಿ ಗೊಂದಲ ಇದ್ದು, ಅಂತಹ ಆಸ್ತಿಗಳಿಗೆ ಮಾತ್ರ ಹಿಂಬರಹ ನೀಡಲಾಗುತ್ತಿದೆ. ಸದ್ಯ 1,2,25, 26, 27, 29 ಹಾಗೂ 30ನೇ ವಾರ್ಡಿನಲ್ಲಿ ಖಾತೆ ಆಂದೋಲನ ನಡೆದಿದೆ’ ಎಂದು ಮಾಹಿತಿ ನೀಡಿದರು.

ವಿಲೇವಾರಿಗೆ ಜಾಗವಿಲ್ಲ: ಕಸ ವಿಲೇವಾರಿಗೆಂದು ನಗರಸಭೆಗೆ ಸೂಕ್ತ ಜಾಗ ಇಲ್ಲದಿರುವುದೇ ಕಸ ನಿರ್ವಹಣೆಗೆ ದೊಡ್ಡ ಸಮಸ್ಯೆಯಾಗಿದೆ. ಸದ್ಯ ಖಾಸಗಿ ಜಾಗದಲ್ಲಿ ಸುರಿಯಲಾಗುತ್ತಿದೆ. ನಗರದ ನಾಲ್ಕು ಕಡೆ ತ್ಯಾಜ್ಯ ನಿರ್ವಹಣೆ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇದಲ್ಲದೆ ಒಂದನೇ ವಾರ್ಡಿನಲ್ಲಿ ಹಸಿ ಕಸದಿಂದ ವಿದ್ಯುತ್‌ ಉತ್ಪಾದನೆ ಯೋಜನೆಯು ಚಾಲ್ತಿಯಲ್ಲಿ ಇದೆ. ಅಲ್ಲಿಯೇ 1 ಟನ್‌ ಸಾಮರ್ಥ್ಯದ ಮತ್ತೊಂದು ಘಟಕ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಮನೆಗಳಲ್ಲಿಯೇ ಹಸಿ ಮತ್ತು ಒಣ ಕಸ ವಿಂಗಡನೆ ಆಗಬೇಕಿದೆ. ಸದ್ಯ ಸಿಬ್ಬಂದಿ ಮತ್ತು ವಾಹನಗಳ ಕೊರತೆಯಿಂದ ಅದು ಸಾಧ್ಯವಾಗಿಲ್ಲ. ಜನರಿಗೆ ಕಸ ಸಂಗ್ರಹಣೆಗಾಗಿ ಪ್ರತ್ಯೇಕ ಡಸ್ಟ್‌ಬಿನ್‌ಗಳ ವಿತರಣೆಗೆ ಈ ಬಾರಿಯ ನಗರಸಭೆ ಬಜೆಟ್‌ನಲ್ಲಿ ಹಣ ಮೀಸಲಾಗಿದೆ. ಜನರು ಒಣ ಕಸ ಮತ್ತು ಹಸಿಕಸವನ್ನು ವಿಂಗಡಿಸಿ ಕೊಡಬೇಕು ಎಂದು ಮನವಿ ಮಾಡಿದರು.

ರಸ್ತೆಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಲು ಈಗಾಗಲೇ ಎರಡು ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕಸ ಎಸೆಯುವವರನ್ನು ಗುರುತಿಸಿ ದಂಡ ವಿಧಿಸಲಾಗುವುದು. ಕಟ್ಟಡ ತ್ಯಾಜ್ಯಗಳ ವಿಲೇವಾರಿಗೆ ಕ್ವಾರಿಗಳನ್ನು ಬಳಸಿಕೊಳ್ಳಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಪ್ಲಾಸ್ಟಿಕ್‌ ನೀಡಿದರೆ ದಂಡ: ‘ಪ್ಲಾಸ್ಟಿಕ್‌ ಬಳಕೆಯನ್ನು 2016ರಿಂದಲೇ ನಿಷೇಧಿಸಲಾಗಿದೆ. ಆದಾಗ್ಯೂ ಕೆಲವು ಅಂಗಡಿಗಳಲ್ಲಿ ಇನ್ನೂ ಪ್ಲಾಸ್ಟಿಕ್ ಮಾರಾಟ ನಡೆದಿದೆ. ಅಧಿಕಾರಿಗಳು ದಾಳಿ ನಡೆಸಿ ಅವುಗಳನ್ನು ವಶಪಡಿಸಿಕೊಳ್ಳುವುದಲ್ಲದೇ ದಂಡವನ್ನೂ ವಿಧಿಸಲಿದ್ದಾರೆ’ ಎಂದು ಎಚ್ಚರಿಸಿದರು.

ನಗರದ ನಾಲ್ಕು ಕಡೆ ಈಗಾಗಲೇ ಇ–ಶೌಚಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ಹೆದ್ದಾರಿಯಲ್ಲಿ ಜನರ ಬಳಕೆಗೆ ಅನುಕೂಲ ಆಗುವಂತೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖನಿಜ ನಿಧಿ ಅಡಿ ನಗರದಲ್ಲಿ ಶೌಚಾಲಯಗಳ ನಿರ್ಮಾಣ, ಗೋಡೆ ಬರಹ ಹಾಗೂ ಅರ್ಕಾವತಿ ನದಿ ಪ್ರದೇಶ ಶುದ್ಧೀಕರಣಕ್ಕೆ ಯೋಜನೆ ರೂಪಿಸಿರುವುದಾಗಿ ತಿಳಿಸಿದರು.

**
ಸ್ತ್ರೀಶಕ್ತಿ ಗುಂಪುಗಳ ಜೊತೆ ಒಪ್ಪಂದ
ನಗರದಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳ ಮೂಲಕ ಗೊಬ್ಬರ ಉತ್ಪಾದನೆಯ ಕೆಲಸವನ್ನು ಸ್ತ್ರೀಶಕ್ತಿ ಗುಂಪುಗಳಿಗೆ ವಹಿಸಲಾಗುತ್ತಿದೆ. ಈ ಸಂಬಂಧ ಗುಂಪೊಂದರ ಜೊತೆ ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಶುಭಾ ಮಾಹಿತಿ ನೀಡಿದರು.

ಮನೆಗಳಲ್ಲಿ ಸಂಗ್ರಹವಾಗುವ ಮಾತ್ರೆಗಳು, ಇನ್ಸುಲಿನ್‌ ಸಿರಿಂಜ್‌, ಬ್ಯಾಂಡೇಜ್‌ ಅನ್ನು ಜನರು ಪ್ರತ್ಯೇಕವಾಗಿ ವಿಂಗಡಿಸಿ ನೀಡಬೇಕು. ಇದಕ್ಕೆಂದೇ ವಾಟರ್ ಟ್ಯಾಂಕ್ ವೃತ್ತದಲ್ಲಿ ಪ್ರತ್ಯೇಕ ಘಟಕ ತೆರೆಯಲಾಗುವುದು ಎಂದರು.

**
ನಾಯಿ ಹಾವಳಿ ನಿಯಂತ್ರಣ ಕಷ್ಟ
ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು 2013ರಿಂದಲೇ ಟೆಂಡರ್‌ ಕರೆಯಲಾಗುತ್ತಿದೆ. ಆದರೆ ಯಾವ ಸಂಘ–ಸಂಸ್ಥೆಗಳೂ ಮುಂದೆ ಬರುತ್ತಿಲ್ಲ. ಪಶು ವೈದ್ಯ ಇಲಾಖೆಯ ಅಧಿಕಾರಿಗಳನ್ನೂ ಸಂಪರ್ಕಿಸಿದ್ದು, ಅದರಿಂದಲೂ ಹೆಚ್ಚಿನ ಪ್ರಯೋಜನ ಆಗಿಲ್ಲ ಎಂದು ಆಯುಕ್ತರು ಅಸಹಾಯಕತೆ ವ್ಯಕ್ತಪಡಿಸಿದರು.

**

ಜನರು ಮನೆಯಲ್ಲಿಯೇ ಹಸಿ ಕಸ ಒಣ ಕಸ ಬೇರ್ಪಡಿಸಿ ಕೊಟ್ಟರೆ ಸಮಸ್ಯೆ ಅರ್ಧ ಬಗೆಹರಿದಂತೆ. ತ್ಯಾಜ್ಯ ಸಂಗ್ರಹಣೆಗೆ ಅವಶ್ಯವಾದ ಸಿಬ್ಬಂದಿ, ವಾಹನಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ
ಶುಭಾ,ನಗರಸಭೆ ಆಯುಕ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT