ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿಗೆ ಬಿಳಿನೊಣ ಬಾಧೆ: ರೈತರು ಕಂಗಾಲು

ಬಿಡದಿ ಭಾಗದಲ್ಲಿ ಹೆಚ್ಚು ತೊಂದರೆ: ಔಷದೋಪಚಾರಕ್ಕೆ ತೋಟಗಾರಿಕೆ ಇಲಾಖೆ ಸಲಹೆ
Last Updated 2 ನವೆಂಬರ್ 2019, 15:35 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿನ ತೆಂಗಿನ ಮರಗಳಲ್ಲಿ ಇದೀಗ ಇದೀಗ ಬಿಳಿ ನೊಣ ಕೀಟ ಬಾಧೆ ಹೆಚ್ಚುತ್ತಿದ್ದು, ಬೆಳೆಗಾರರನ್ನು ಆತಂಕಕ್ಕೆ ಈಡುಮಾಡಿದೆ.

ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಹಲವು ಕಡೆಗಳಲ್ಲಿ ಬಿಳಿ ನೊಣ ಕಾಟ ವ್ಯಾಪಿಸಿದ್ದು, ತೆಂಗಿನ ಮರಗಳ ಗರಿಗಳು ಜೋತು ಬೀಳುವ ಹಂತಕ್ಕೆ ಬಂದು ತಲುಪಿವೆ.

ಎಲ್ಲೆಲ್ಲಿ ರೋಗ: ಪ್ರಸ್ತುತ ಬಿಡದಿ ಹೋಬಳಿಯ ಬೈರಮಂಗಲ ಸುತ್ತಮುತ್ತ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇತರ ಕಡೆಗೂ ವ್ಯಾಪಿಸತೊಡಗಿದೆ. ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರದ ಕೆಲವು ಭಾಗಗಳಲ್ಲಿಯೂ ಇದರ ಲಕ್ಷಣಗಳು ಕಂಡುಬರುತ್ತಿವೆ.

ನಿಯಂತ್ರಣ ಹೇಗೆ: ಬಿಳಿ ನೋಣ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯು ಹಲವು ಕ್ರಮಗಳನ್ನು ಸೂಚಿಸಿದೆ. ಕೀಟ ಬಾಧಿತ ಗರಿಗಳನ್ನು ಕಿತ್ತು ಸುಟ್ಟು ಹಾಕುವುದು, ಹಳದಿ ಬಣ್ಣದ ಬಲೆಗಳು ಅಥವಾ ಹಳದಿ ಬಣ್ಣದ ಡ್ರಾಯಿಂಗ್ ಪೇಪರ್‌ಗೆ ಹರಳೆಣ್ಣೆ ಹಚ್ಚಿ, ತೋಟದ ಅಲ್ಲಲ್ಲಿ ನೇತು ಹಾಕಬೇಕು. ಬಣ್ಣವು ಕೀಟವನ್ನು ಆಕರ್ಷಣೆ ಮಾಡುವುದರಿಂದ ಕೀಟಗಳು ಪೇಪರ್‌ಗೆ ಅಂಟಿಕೊಳ್ಳುತ್ತವೆ.

ಬೇವಿನ ಎಣ್ಣೆಯನ್ನು ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡುವುದು, ಪ್ರತಿ ಲೀಟರ್ ನೀರಿಗೆ 2 ಎಂ.ಎಲ್ ಮೊನೋಕ್ರೋಟಪಸ್ ಅಥವಾ ಪ್ರತಿ ಲೀಟರ್ ನೀರಿಗೆ 1 ಎಂ.ಎಲ್ ಒಬೇರಾನ್ ಅನ್ನು ಮಿಶ್ರಣ ಮಾಡಿಕೊಂಡು ತೆಂಗಿನ ಗರಿಗೆ ಸಿಂಪಡಣೆ ಮಾಡಬೇಕು ಎಂದು ಇಲಾಖೆಯು ನಿರ್ದೇಶನ ನೀಡಿದೆ.

ಜೈವಿಕ ನಿಯಂತ್ರಣ: ಬಿಳಿ ನೊಣವನ್ನು ಜೈವಿಕವಾಗಿ ನಿಯಂತ್ರಿಸುವ ಪ್ರಯತ್ನಗಳು ಸಹ ನಡೆದಿವೆ. ರಾಷ್ಟ್ರೀಯ ಜೈವಿಕ ಕೀಟ ಸಂಶೋಧನಾ ಸಂಸ್ಥೆಯು ಎನ್ಕಾರ್ಸಿಯಾ ಗ್ವಾಡೆಲೊಪೆ ಹಾಗೂ ಎನ್ಕಾರ್ಸಿಯಾ ಡಿಸ್ಪರ್ಸಾ ಎಂಬ ಎರಡು ಪರಾವಲಂಬಿ ಕೀಟಗಳನ್ನು ಸಿದ್ದಪಡಿಸುತ್ತಿದೆ. ಈ ಪರಾವಲಂಬಿ ಕೀಟಗಳು ಬಿಳಿನೊಣದ ಮೊಟ್ಟೆಗಳನ್ನು ತಿಂದು ಜೀವಿಸುವುದರಿಂದ ಕೀಟಗಳ ಸಂತತಿ ಬೆಳೆಯಂತೆ ಮಾಡಬಹುದು ಎನ್ನುವ ಲೆಕ್ಕಾಚಾರ ವಿಜ್ಞಾನಿಗಳದ್ದು.

ಏನಿದು ಬಿಳಿ ನೊಣ?
ಬಿಳಿ ನೊಣದ ಮರಿಗಳು ಮತ್ತು ಪ್ರೌಢ ಕೀಟಗಳು ತೆಂಗಿನ ಗರಿಯ ತಳಭಾಗದಲ್ಲಿ ಕುಳಿತು ಸತತವಾಗಿ ರಸವನ್ನು ಹೀರಲು ಆರಂಭಿಸುತ್ತವೆ. ಇದರಿಂದ ಎಲೆಗಳು ಹಳದೀ ಬಣ್ಣಕ್ಕೆ ತಿರುಗಿ ಮುದುಡುತ್ತವೆ. ಕ್ರಮೇಣವಾಗಿ ಒಣಗಲು ಆರಂಭಿಸುತ್ತದೆ. ಕೀಟಗಳು ಸಹಿಯಾದ ಜೇನಿನ ದ್ರಾವಣವನ್ನು ವಿಸರ್ಜನೆ ಮಾಡುವುದರಿಂದ ಗರಿಗಳ ಮೇಲೆ ಬೂದು ಬಣ್ಣದ ಶಿಲೀಂದ್ರಗಳು ಬೆಳೆದು ಗರಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇದರಿಂದ ತೆಂಗಿನ ಮರ ಮತ್ತು ಗಿಡಗಳ ದ್ಯುತಿ ಸಂಶ್ಲೇಷಣ ಕ್ರಿಯೆಗೆ ಧಕ್ಕೆಯಾಗಿ ಮರಗಳ ಬೆಳವಣಿಗೆ ಕುಂಠಿತವಾಗುತ್ತವೆ. ಆದರೆ, ತೆಂಗಿನ ಉತ್ಪಾದನೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಜೈವಿಕ ವಿಧಾನಗಳ ಮೂಲಕ ನಿಯಂತ್ರಣ
ಬಿಡದಿ ಭಾಗದಲ್ಲಿ ರೋಗಬಾಧೆ ಹೆಚ್ಚಾಗಿದ್ದು, ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಲಭ್ಯವಿರುವ ಜೈವಿಕ ವಿಧಾನಗಳ ಮೂಲಕವೂ ರೋಗ ನಿಯಂತ್ರಣಕ್ಕೆ ಸಂಶೋಧನೆಗಳು ನಡೆದಿವೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕಜೆ.ಗುಣವಂತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT