ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಹೊಲದಲ್ಲೇ ಉಳಿದ ಬಣ್ಣಬಣ್ಣದ ಕ್ಯಾಪ್ಸಿಕಂ

ಲಾಕ್‌ಡೌನ್‌ ಕಾರಣ ಬೇಡಿಕೆ ಕುಸಿತ: ಲಕ್ಷಾಂತರ ರೂಪಾಯಿ ನಷ್ಟದ ಭೀತಿ
Last Updated 20 ಏಪ್ರಿಲ್ 2020, 19:39 IST
ಅಕ್ಷರ ಗಾತ್ರ

ರಾಮನಗರ: ‘ಕ್ಯಾಪ್ಸಿಕಂ ಕಮಲಮ್ಮ’ ಎಂದೇ ಖ್ಯಾತಿಯಾಗಿರುವ ತಾಲ್ಲೂಕಿನ ಮಾಯಗಾನಹಳ್ಳಿಯ ಕಮಲಮ್ಮ ಅವರ ಹೊಲದಲ್ಲಿನ ಕ್ಯಾಪ್ಸಿಕಂ ಅರ್ಥಾತ್ ದಪ್ಪ ಮೆಣಸಿನಕಾಯಿ ಬೆಳೆ ಕೊಳ್ಳುವವರೇ ಇಲ್ಲದಾಗಿದೆ. ರಫ್ತು ಗುಣಮಟ್ಟದ ಉತ್ಕೃಷ್ಟ ಬೆಳೆ ಹೊಲದಲ್ಲೇ ಕೊಳೆಯುತ್ತಿದೆ.

ಕಮಲಮ್ಮ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೊ ಸಂವಾದದಲ್ಲಿ ಮಾತನಾಡುವ ಮೂಲಕ ಗಮನ ಸೆಳೆದವರು. ಅವರ 12 ಎಕರೆ ಹೊಲದಲ್ಲಿ ಅನೇಕ ಕೃಷಿ ಪ್ರಯೋಗಗಳು ನಡೆದಿವೆ. ಮುಖ್ಯವಾಗಿ ಜಮೀನಿನಲ್ಲಿನ ಪಾಲಿಹೌಸ್‌ನಲ್ಲಿ ನಾಲ್ಕೈದು ವರ್ಷದಿಂದ ದಪ್ಪ ಮೆಣಸಿನಕಾಯಿ ಬೆಳೆಯುತ್ತ ಬಂದಿದ್ದಾರೆ. ಇವರ ಹೊಲದಲ್ಲಿನ ಬಣ್ಣಬಣ್ಣದ ದಪ್ಪ ಮೆಣಸಿನಕಾಯಿ ಸ್ಥಳೀಯವಾಗಿ ಮಾರಾಟ ಆಗುವುದಕ್ಕಿಂತ ವಿದೇಶಗಳಿಗೆ ರಫ್ತಾಗುವುದೇ ಹೆಚ್ಚು. ರಫ್ತುದಾರ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಪಾಲಿಹೌಸ್‌ನಲ್ಲೇ ಪ್ಯಾಕ್‌ ಆಗಿ ಇಲ್ಲಿಂದ ರೈಲು, ವಿಮಾನ ಏರಿ ವಿವಿಧ ದೇಶಗಳಿಗೆ ರಫ್ತಾಗುತ್ತಿದೆ. ಅದರೆ, ಸದ್ಯ ವಿದೇಶಗಳಿಗೆ ರಫ್ತು ಬಂದಾಗಿರುವ ಕಾರಣ ಈ ಬಹುವರ್ಣದ ಕ್ಯಾಪ್ಸಿಕಂ ಬೇಡಿಕೆ ಕಳೆದುಕೊಂಡಿದೆ.

ಹೋಟೆಲ್‌ಗಳು ಬಂದ್‌: ಬೆಂಗಳೂರಿನಂತ ಮಹಾನಗರದ ಪಂಚತಾರ ಹೋಟೆ‌ಲ್‌ಗಳೂ ಸೇರಿದಂತೆ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಈ ದಪ್ಪಮೆಣಸಿನಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಆದರೆ, ಈಗ ದೇಶದಾದ್ಯಂತ ಹೋಟೆಲ್‌ಗಳೂ ಸಹ ಬಾಗಿಲು ಮುಚ್ಚಿವೆ. ಸ್ಥಳೀಯವಾಗಿ ಈ ಉತ್ಪನ್ನಕ್ಕೆ ಮಾರುಕಟ್ಟೆ ಇಲ್ಲ. ಹೀಗಾಗಿ ಬೆಳೆಯನ್ನು ಕೇಳುವವರೇ ಇಲ್ಲದಾಗಿದೆ. ಇದರಿಂದ ಬೇಸತ್ತ ಕಮಲಮ್ಮ ಮತ್ತು ಕುಟುಂಬದವರು ಪಾಲಿಹೌಸ್‌ನಲ್ಲೇ ಕಾಯಿಯನ್ನು ಹಾಗೆಯೇ ಬಿಟ್ಟು ಕೈಚೆಲ್ಲಿ ಕುಳಿತಿದ್ದಾರೆ.

₹4 ಲಕ್ಷ ಖರ್ಚು: 20 ಗುಂಟೆ ವಿಸ್ತಾರದಲ್ಲಿ ಇರುವ ಪಾಲಿ ಹೌಸ್‌ನಲ್ಲಿ ಈ ಬೆಳೆಯನ್ನು ಬೆಳೆಯಲಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಡಿಸೆಂಬರ್‌ಗೆ ಸಸಿ ನಾಟಿ ನಡೆದು ಮಾರ್ಚ್ ಕೊನೆಯ ವಾರ ಇಲ್ಲವೇ ಏಪ್ರಿಲ್‌ನಿಂದ ಕಟಾವು ಆರಂಭಗೊಳ್ಳುತ್ತದೆ. ಮುಂದಿನ ನಾಲ್ಕೈದು ತಿಂಗಳ ಕಾಲ ನಿರಂತರ ಕಟಾವು ನಡೆಯುತ್ತದೆ. ಈ ವರ್ಷ ಸಹ ಮಾರ್ಚ್ ಕೊನೆಗೆ ಕಟಾವು ನಿರೀಕ್ಷೆ ಇಟ್ಟುಕೊಂಡಿದ್ದ ಕಮಲಮ್ಮ ಅವರ ಕುಟುಂಬದರಿಗೆ ಲಾಕ್‌ಡೌನ್‌ ಆದೇಶದಿಂದಾಗಿ ಆಘಾತ ಅಗಿದೆ.

’ಸಸಿ ನಾಟಿಯಿಂದ ಹಿಡಿದು ಗೊಬ್ಬರ, ಔಷಧದವರೆಗೆ ಸುಮಾರು ₹4 ಲಕ್ಷದಷ್ಟು ಹಣ ಖರ್ಚು ಮಾಡಿದ್ದೇವೆ. ಮನೆ ಮಂದಿಯೆಲ್ಲ ಇದಕ್ಕಾಗಿ ದುಡಿದಿದ್ದೇವೆ. ಈ ವರ್ಷ ಲಾಕ್‌ಡೌನ್‌ ಕಾರಣಕ್ಕೆ ಈವರೆಗೆ ಒಂದು ರುಪಾಯಿಯೂ ಇದರಿಂದ ಸಿಕ್ಕಿಲ್ಲ. ಬೆಳೆಯನ್ನು ಹಾಗೆಯೇ ಒಣಗಲು ಬಿಟ್ಟಿದ್ದೇವೆ’ ಎಂದು ಕಮಲಮ್ಮ ಬೇಸರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT