ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ತಿದ್ದುಪಡಿಯಾದರೆ ರೈತ ಕೂಲಿಯಾಳು: ಕಾಂಗ್ರೆಸ್‌ ಮುಖಂಡರ ಆಕ್ರೋಶ

ಸರ್ಕಾರದ ತಿದ್ದುಪಡಿ ಕಾಯ್ದೆ, ಮಸೂದೆಗಳ ವಿರುದ್ಧ ಆಕ್ರೋಶ
Last Updated 29 ಸೆಪ್ಟೆಂಬರ್ 2020, 16:30 IST
ಅಕ್ಷರ ಗಾತ್ರ

ರಾಮನಗರ: ಇಡೀ ದೇಶಕ್ಕೆ ಮಾದರಿಯಾಗಿದ್ದ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಬಿಜೆಪಿ ಸರ್ಕಾರ ರೈತರನ್ನು ಮತ್ತೆ ಕೂಲಿಯಾಳುಗಳನ್ನಾಗಿ ಮಾಡಲು ಹೊರಟಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಟೀಕಿಸಿದರು.

"ದೇವರಾಜ ಅರಸು 1972-73ರಲ್ಲಿ ರಾಜ್ಯದಲ್ಲಿ ಈ ಕಾಯ್ದೆ ಜಾರಿಗೆ ತಂದರು. ಇದರಲ್ಲಿನ ಸೆಕ್ಷನ್‌ 79ಎ/ಬಿ ಗೆ ಈಗಿನ ಸರ್ಕಾರ ತಿದ್ದುಪಡಿ ಮಾಡುತ್ತಿದೆ. ಇದರಿಂದಾಗಿ ಒಂದು ಕುಟುಂಬ ಗರಿಷ್ಠ 216 ಎಕರೆ ಖುಷ್ಕಿ ಭೂಮಿ ಖರೀದಿ ಮಾಡಬಹುದು. ₨25 ಲಕ್ಷಕ್ಕಿಂತ ಹೆಚ್ಚು ಆದಾಯ ಇದ್ದವರೂ ಭೂಮಿ ಕೊಳ್ಳಬಹುದು. ಇದು ಜಾರಿಗೆ ಬಂದಲ್ಲಿ ಕೃಷಿ ಭೂಮಿ ಉಳ್ಳವರ ಪಾಲಾಗಲಿದ್ದು, ಸಣ್ಣ ಹಿಡುವಳಿದಾರರ ಬದುಕು ಬೀದಿಗೆ ಬೀಳಲಿದೆ. ರೈತ ಹಾಗೂ ಕಾರ್ಮಿಕರ ವಿರೋಧದ ನಡುವೆಯೂ ಸರ್ಕಾರ ಇಂತಹ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವುದು ಏಕೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿಗಳ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ರೈತರು ಮತ್ತು ಕಾರ್ಮಿಕರನ್ನು ದಿವಾಳಿ ಮಾಡಲು ಹೊರಟಿದೆ. ಉಳುವವನೇ ಭೂಮಿಯ ಒಡೆಯ ಆಗಬೇಕು ಎಂಬುದು ಭೂ ಸುಧಾರಣಾ ಕಾಯ್ದೆಯ ಉದ್ದೇಶವಾಗಿತ್ತು. ಆದರೆ ಈಗಿನ ಸರ್ಕಾರ ಸುಗ್ರಿವಾಜ್ಞೆಯ ಮೂಲಕ ಉಳ್ಳವನೇ ಭೂಮಿಯ ಒಡೆಯ ಆಗಬೇಕೆಂಬ ತನ್ನ ಧೋರಣೆಯನ್ನು ಸಾಬೀತುಪಡಿಸಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂದೆ ಮಧ್ಯವರ್ತಿಗಳ ಪರವಾದ ಹಿತಾಸಕ್ತಿ ಅಡಗಿದೆ ಎಂದು ಟೀಕಿಸಿದರು.

ಪರಿಷತ್ತಿನಲ್ಲಿ ಹೋರಾಟ: ವಿಧಾನಸಭೆಯಲ್ಲಿ ಪಾಸಾದ ಮಸೂದೆ ವಿಧಾನ ಪರಿಷತ್‌ನಲ್ಲಿ ಬಿದ್ದದ್ದು ಇದೇ ಮೊದಲು. ವಿಧಾನ ಪರಿಷತ್‌ನಲ್ಲಿ ಎಲ್ಲರೂ ಜೊತೆಗೂಡಿ ರಾತ್ರಿವರೆಗೂ ಒತ್ತಾಯ ಮಾಡಿ ಮತಕ್ಕೆ ಹಾಕಿಸಿದ್ದು, ಕಾರ್ಮಿಕ ತಿದ್ದುಪಡಿ ಮಸೂದೆಗೆ ಸೋಲಾಯಿತು. ಹೀಗಾಗಿ ಸಭಾಧ್ಯಕ್ಷರು ಸದನವನ್ನು ಮುಂದೂಡಿದರು ಎಂದು ವಿವರಿಸಿದರು.

ಸಿ.ಎಂ. ರಾಜೀನಾಮೆ ನೀಡಲಿ: ಕಾಂಗ್ರೆಸ್ ಮುಖಂಡ ಕೆ. ಶೇಷಾದ್ರಿ ಮಾತನಾಡಿ "ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರದ ಕುರಿತು ಮಾಧ್ಯಮ ಹಾಗೂ ಕಾಂಗ್ರೆಸ್ ದಾಖಲೆಗಳನ್ನು ಒದಗಿಸಿದೆ. ಇದರ ತನಿಖೆ ಆಗುವವರವರೆಗೆ ಬಿಎಸ್‌ವೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

"ಮುಖ್ಯಮಂತ್ರಿ ಕುಟುಂಬದವರು ₹17 ಕೋಟಿ ಲಂಚ ಪಡೆದಿವುದನ್ನು ದಾಖಲೆ ಸಮೇತ ಸಾಬೀತುಪಡಿಸಿದ ಖಾಸಗಿ ಸುದ್ದಿವಾಹಿನಿ ಪ್ರಸಾರವನ್ನೇ ಸರ್ಕಾರ ಬಂದ್ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಸಿದ್ದರಾಮಯ್ಯ ಸಹ ಬಿಜೆಪಿಗೆ ಸವಾಲು ಹಾಕಿದ್ದಾರೆ. ಸವಾಲು ಸ್ವೀಕರಿಸಿ ತನಿಖೆಗೆ ಮುಂದಾಗಬೇಕು. ಮಾಧ್ಯಮ ಸ್ವಾತಂತ್ರ ಹತ್ತಿಕ್ಕಬಾರದು’ ಎಂದು ಒತ್ತಾಯಿಸಿದರು.

ಪಕ್ಷದ ಮುಖಂಡ ಇಕ್ಬಾಲ್‌ ಹುಸೇನ್ ಮಾತನಾಡಿ "ಕೋವಿಡ್ ಪರಿಸ್ಥಿತಿ ನಿಯಂತ್ರಿಸುವಲ್ಲಿ ಇಲ್ಲಿನ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ವಿಫಲವಾಗಿದ್ದಾರೆ. 175 ಜನ ಸತ್ತಿದ್ದರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅಧಿಕಾರಿಗಳು ಹೆಣದ ಮೇಲೆ ಹಣ ಲೂಟಿ ಮಾಡುತ್ತಿದ್ದಾರೆ’ ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಶೋಕ್, ಕೆಪಿಸಿಸಿ ಕಾರ್ಯದರ್ಶಿ ಸಯ್ಯದ್ ಜಿಯಾವುಲ್ಲಾ, ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.

ಎಲ್ಲಿದೆ ಇಸ್ರೇಲ್‌ ಕೃಷಿ?

"ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಪಂಚೆ ತೊಟ್ಟು ಮಂಡ್ಯದ ಗದ್ದೆಯಲ್ಲಿ ಭತ್ತ ನಾಟಿ ಮಾಡಿದರು. 500-600 ಕಡೆ ಇಸ್ರೇಲ್‌ ಕೃಷಿ ಭಾಷಣ ಮಾಡಿದರು. ಆದರೆ ಎಲ್ಲಾದರೂ ಒಂದು ಎಕರೆಯಲ್ಲಿ ಇಸ್ರೇಲ್‌ ಮಾದರಿ ಕೃಷಿ ಮಾಡಿದ್ದನ್ನು ತೋರಿಸಿದ್ದರೆ ಅವರ ಪಾದಗಳಿಗೆ ನಮಸ್ಕರಿಸುತ್ತಿದ್ದೆ" ಎಂದು ಲಿಂಗಪ್ಪ ವ್ಯಂಗ್ಯವಾಡಿದರು. ರಾಮನಗರದ ಸ್ಥಳೀಯ ಶಾಸಕಿ ಜನರಿಂದ ದೂರವಾಗಿದ್ದಾರೆ ಎಂದು ಜನ ದೂರುತ್ತಿದ್ದಾರೆ. ಆ ಕಡೆ ಮಾಗಡಿ ಶಾಸಕರು ತಾವು ಮಾಡಿದ್ದೇ "ಆರ್ಡರ್‌’ ಎನ್ನುತ್ತಾರೆ. ನಾವಂತೂ ಏನನ್ನೂ ಹೇಳಲಾಗದು ಎಂದರು.

***
ಯಡಿಯೂರಪ್ಪ ರೈತರಿಗೆ ಪ್ರತ್ಯೇಕ ಬಜೆಟ್‌ ತರುವ ಮಾತನ್ನಾಡಿದ್ದರು. ಆದರೆ ಈಗ ಹಸಿರು ಟವಲ್‌ ತೆಗೆದು ಕೇಸರಿ ಟವಲ್‌ ಹಾಕಿಕೊಂಡಿದ್ದಾರೆ.

- ಸಿ.ಎಂ. ಲಿಂಗಪ್ಪ, ವಿಧಾನ ಪರಿಷತ್‌ ಸದಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT