ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರದಲ್ಲಿ ಕಾಂಗ್ರೆಸ್‌, ಮಾಗಡಿಯಲ್ಲಿ ಜೆಡಿಎಸ್‌ ಮೈಲುಗೈ

ಎರಡೂ ಕಡೆ ಖಾತೆ ತೆರೆದ ಬಿಜೆಪಿ: ಪಕ್ಷೇತರರದ್ದು ಶೂನ್ಯ ಸಾಧನೆ
Last Updated 15 ನವೆಂಬರ್ 2019, 2:36 IST
ಅಕ್ಷರ ಗಾತ್ರ

ರಾಮನಗರ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಮಾಗಡಿಯಲ್ಲಿ ಜೆಡಿಎಸ್‌ ಕೈ ಮೇಲಾಗಿದೆ. ಕನಕಪುರದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್‌ ಅಧಿಕಾರ ಹಿಡಿದಿದೆ.

23 ವಾರ್ಡುಗಳನ್ನು ಹೊಂದಿರುವ ಮಾಗಡಿ ಪುರಸಭೆಯು ಜಿದ್ದಾಜಿದ್ದಿನ ಹೋರಾಟದಿಂದ ಗಮನ ಸೆಳೆದಿತ್ತು. ಅದರಲ್ಲೂ ಹಾಲಿ ಶಾಸಕ ಎ.ಮಂಜುನಾಥ್‌ ಹಾಗೂ ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಬಣಗಳ ನಡುವಿನ ನೇರ ಹಣಾಹಣಿಯಿಂದ ಸ್ಪರ್ಧೆ ಇನ್ನಷ್ಟು ತುರುಸಾಗಿತ್ತು. ಕಳೆದ ಬಾರಿ ಇಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳಲ್ಲಿ ಗೆದಿತ್ತು. ಆದರೆ ಈ ಬಾರಿ ಜೆಡಿಎಸ್‌ಗೆ ಬಹುಮತ ಸಿಕ್ಕಿದೆ. ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಕಾಂಗ್ರೆಸ್‌ಗೆ ಬಂದಿದ್ದರೂ ಅಧಿಕಾರ ಮಾತ್ರ ಸಿಕ್ಕಿಲ್ಲ.

ಅಂಕಿ–ಸಂಖ್ಯೆ ಆಟ; ಜೆಡಿಎಸ್ ಅಧಿಕಾರ ಹಿಡಿಯಲು ಸರಳ ಬಹುಮತ ಹೊಂದಿದೆಯಾದರೂ ಸಂಪೂರ್ಣ ಬಹುಮತ ಪಕ್ಷಕ್ಕೆ ಸಿಕ್ಕಿಲ್ಲ. ಪುರಸಭೆ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್‌ ಸದಸ್ಯರೂ ತಲಾ ಒಂದೊಂದು ಮತ ಚಲಾವಣೆಯ ಅವಕಾಶ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ಗೆ ಇನ್ನೂ ಅವಕಾಶ ಬಾಗಿಲು ತೆರೆದೇ ಇದೆ.

‘ಮೈತ್ರಿ’ಗೆ ನಿರೀಕ್ಷಿತ ಗೆಲುವು: ಕನಕಪುರದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್‌ ತನ್ನ ಗೆಲುವು ದಾಖಲಿಸಿದೆ. ಸ್ಪಷ್ಟ ಬಹುಮತ ಹೊಂದಿದ್ದು, ಮತ್ತೊಮ್ಮೆ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ.

ಕಳೆದ ಬಾರಿ ಇಲ್ಲಿ 27 ವಾರ್ಡುಗಳಿದ್ದು, ಕಾಂಗ್ರೆಸ್‌ 22 ಕ್ಷೇತ್ರಗಳಲ್ಲಿ ಗೆದ್ದು ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದಿತ್ತು. ಈ ಬಾರಿ ವಾರ್ಡುಗಳ ಸಂಖ್ಯೆ 31ಕ್ಕೆ ಏರಿದ್ದು, ಹೆಚ್ಚುವರಿ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. ಜೆಡಿಎಸ್‌ಗೆ ಯಾವುದೇ ನಷ್ಟವಾಗಿಲ್ಲ. ಬಿಜೆಪಿ ಮಾತ್ರ ಗೆಲವಿನ ಖಾತೆ ತೆರೆದಿದೆ.

ಕನಕಪುರವು ಕಳೆದ ಮೂರು ದಶಕಗಳಿಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ (ಹಿಂದಿನ ಜನತಾದಳ) ನಡುವಿನ ರಾಜಕೀಯ ಕದನಕ್ಕೆ ಸಾಕ್ಷಿಯಾಗುತ್ತಾ ಬಂದಿತ್ತು. ಆದರೆ ಇದೇ ಮೊದಲ ಬಾರಿಗೆ ಅಲ್ಲಿ ಮೈತ್ರಿ ಏರ್ಪಟ್ಟಿತ್ತು. ಇದರಿಂದ ಉಭಯ ಪಕ್ಷಗಳಿಗೂ ಹೆಚ್ಚಿನ ಲಾಭ–ನಷ್ಟ ಆಗಿಲ್ಲ.

ಪಕ್ಷೇತರರಿಗೆ ಒಲಿಯದ ಅದೃಷ್ಟ
ಈ ಬಾರಿ ಕೆಲವು ವಾರ್ಡುಗಳಲ್ಲಿ ಪಕ್ಷೇತರರೂ ಸ್ಪರ್ಧೆಯಲ್ಲಿ ಇದ್ದರು. ಮಾಗಡಿಯಲ್ಲಿ ಐವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಯಾರೊಬ್ಬರಿಗೂ ಗೆಲುವು ಸಾಧ್ಯವಾಗಿಲ್ಲ. ಕನಕಪುರ ನಗರಸಭೆಯಲ್ಲಿ 11 ಪಕ್ಷೇತರರು, ನಾಲ್ವರು ಬಿಎಸ್ಪಿ ಅಭ್ಯರ್ಥಿಗಳೂ ಕಣದಲ್ಲಿ ಇದ್ದರು. ಆದರೆ ಅವರಿಗೂ ಗೆಲುವು ದಕ್ಕಿಲ್ಲ.

ಬಿಜೆಪಿಗೆ ಒಂದೊಂದೇ ಗೆಲುವು
ಈ ಬಾರಿ ಮಾಗಡಿಯ ಎಲ್ಲ ವಾರ್ಡುಗಳಲ್ಲೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಕೆಲವು ಕ್ಷೇತ್ರಗಳನ್ನಾದರೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿತ್ತು. ಆದರೆ 9ನೇ ವಾರ್ಡಿನಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಭಾಗ್ಯಮ್ಮ ಮಾತ್ರ ಗೆಲುವು ಕಂಡಿದ್ದಾರೆ. ಕನಕಪುರದಲ್ಲೂ ಹಲವು ಕ್ಷೇತ್ರದಲ್ಲಿ ಬಿಜೆಪಿ ಕಣಕ್ಕೆ ಇಳಿದಿತ್ತು. ಈ ಪೈಕಿ 26ನೇ ವಾರ್ಡಿನಿಂದ ಎಂ.ಎನ್‌. ಮಾಲತಿ ಗೆಲುವು ದಾಖಲಿಸಿದ್ದಾರೆ. ಇನ್ನೂ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್‌ಗೆ ಪೈಪೋಟಿ ನೀಡಿದ್ದಾರೆ.

ಅಲ್ಪ ಅಂತರದ ಜಯ
ಮಾಗಡಿ ಪುರಸಭೆಯಲ್ಲಿ ಕೆಲವೇ ಮತಗಳ ಅಂತರದಲ್ಲಿ ಅಭ್ಯರ್ಥಿಗಳು ಗೆದ್ದು ನಿಟ್ಟುಸಿರು ಬಿಟ್ಟಿದ್ದಾರೆ. ಒಂದನೇ ವಾರ್ಡಿನಲ್ಲಿ ಜೆಡಿಎಸ್‌ನ ನಾಗರತ್ನಮ್ಮ ಕೇವಲ 2 ಮತಗಳ ಅಂತರದ ಗೆಲುವು ಕಂಡರೆ, ಕೆ.ಎಸ್. ಚೈತ್ರಾ ನಿರಾಸೆ ಅನುಭವಿಸಿದರು. ಅಂತೆಯೇ ಮೂರನೇ ವಾರ್ಡಿನಲ್ಲಿ ಕಾಂಗ್ರೆಸ್‌ನ ಶಿವಕುಮಾರ್ ಏಳು ಮತಗಳ ಅಂತರದಿಂದ ಎಂ. ನಂದಿನಿ ವಿರುದ್ಧ ಗೆಲುವು ದಾಖಲಿಸಿದ್ದಾರೆ.

ಪಕ್ಷಗಳ ಬಲಾಬಲ
ಮಾಗಡಿ ಪುರಸಭೆ
ಒಟ್ಟು ವಾರ್ಡುಗಳು–23

ಜೆಡಿಎಸ್‌–12
ಕಾಂಗ್ರೆಸ್‌–10
ಬಿಜೆಪಿ–1

ಕನಕಪುರ ನಗರಸಭೆ
ಒಟ್ಟು ವಾರ್ಡುಗಳು–31
ಕಾಂಗ್ರೆಸ್‌–26
ಜೆಡಿಎಸ್‌–4
ಬಿಜೆಪಿ–1

**
ಡಿ.ಕೆ. ಸಹೋದರರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನರು ಮತ್ತೊಮ್ಮೆ ಆಶೀರ್ವಾದ ಮಾಡಿದ್ದಾರೆ. ಜೆಡಿಎಸ್‌ ಮೈತ್ರಿಯಿಂದಲೂ ಅನುಕೂಲವಾಗಿದೆ.
-ಆರ್‌. ಕೃಷ್ಣಮೂರ್ತಿ,ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ, ಕನಕಪುರ

**
ಜನ ಜೆಡಿಎಸ್‌ ಕಾರ್ಯಗಳನ್ನು ಮೆಚ್ಚಿ ಮಾಗಡಿಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ವಿರೋಧ ಪಕ್ಷವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತೇವೆ
-ಎ.ಮಂಜುನಾಥ್‌,ಜೆಡಿಎಸ್ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT