ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ನ್ಯಾಯ ಯಾತ್ರೆಗೆ ತಡೆ: ಕಾಂಗ್ರೆಸ್ ಆಕ್ರೋಶ

ರಾಮನಗರದ ಐಜೂರು ವೃತ್ತದಲ್ಲಿ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Published 24 ಜನವರಿ 2024, 7:17 IST
Last Updated 24 ಜನವರಿ 2024, 7:17 IST
ಅಕ್ಷರ ಗಾತ್ರ

ರಾಮನಗರ: ಈಶಾನ್ಯ ಅಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಾಗುತ್ತಿದ್ದ ಭಾರತ್ ಜೋಡೊ ನ್ಯಾಯ ಯಾತ್ರೆ ಬಸ್ ಅಡ್ಡಗಟ್ಟಿದ ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ತೋರಿರುವುದನ್ನು ಖಂಡಿಸಿ, ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಬೆಳಿಗ್ಗೆ ಜಮಾಯಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಅಸ್ಸಾಂ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪಕ್ಷದ ವಿವಿಧ ಮುಖಂಡರು ಬಿಜೆಪಿ ವಿರುದ್ಧ ಕಿಡಿಕಾರಿದರು.

ಶಾಂತಿಯುತವಾಗಿ ಸಾಗುತ್ತಿದ್ದ ನ್ಯಾಯಯಾತ್ರೆಗೆ ಉದ್ದೇಶ ಪೂರ್ವಕವಾಗಿಯೇ ಬಿಜೆಪಿಯವರು ತಡೆಯೊಡ್ಡಿದ್ದಾರೆ. ರಾಹುಲ್ ಅವರಿದ್ದ ಬಸ್ ಅನ್ನು ತಡೆದು ಘೋಷಣೆಗಳನ್ನು ಕೂಗಿದ್ದಾರೆ. ಇದು ಯಾತ್ರೆಯು ಉಂಟ ಮಾಡಬಹುದಾದ ಪರಿಣಾಮಗಳ ಬಗ್ಗೆ ಬಿಜೆಪಿಯವರಿಗೆ ಇರುವ ಭಯವನ್ನು ತೋರಿಸುತ್ತದೆ ಎಂದರು.

ರಾಹುಲ್ ಅವರು ಸಮಾಜ ಸುಧಾರಕ ಶ್ರೀಮಾಂತ್ ಶಂಕರದೇವ್ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಲು ಸರ್ಕಾರದಿಂದ ಅನುಮತಿ ಪಡೆದರೂ, ಕಾನೂನು ಮತ್ತು ಸುವ್ಯವಸ್ಥೆಯ ನೆಪ ನೀಡಿ, ಕೊನೆ ಗಳಿಗೆಯಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಇದು ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನಕ್ಕೆ ಎಸಗಿದ ದ್ರೋಹವಾಗಿದೆ. ಇದರೊಂದಿಗೆ ಅಸ್ಸಾಂ ಸರ್ಕಾರ ಸರ್ವಾಧಿಕಾರಿ ಧೋರಣೆ ಮೆರೆದಿದೆ ಎಂದು ಆರೋಪಿಸಿದರು.

ಅಸ್ಸಾಂನಲ್ಲಿ ನಡೆದಿರುವ ಘಟನೆಗೆ ಅಲ್ಲಿನ ಮುಖ್ಯಮಂತ್ರಿ ನೇರ ಹೊಣೆ. ಯಾತ್ರೆಯುದ್ದಕ್ಕೂ ರಾಹುಲ್ ಅವರಿಗೆ ಸಿಗುತ್ತಿರುವ ಜನಬೆಂಬಲ ಹಾಗೂ ಜನಪ್ರಿಯತೆ ಸಹಿಸೆ ಬಿಜೆಪಿ ಉದ್ದೇಶ ಪೂರ್ವಕವಾಗಿ ಇಂತಹ ಹೀನ ಕೃತ್ಯ ಮಾಡಿಸುತ್ತಿದೆ. ಯಾತ್ರೆಗೆ ಮುಂದೆಯೂ ಏನಾದರೂ ತೊಂದರೆಯಾದರೆ ಅದಕ್ಕೆ ಬಿಜೆಪಿಯೇ ಹೊಣೆಯಾಗಿರುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಯುವ ಘಟಕದ ಅಧ್ಯಕ್ಷ ಗುರುಪ್ರಸಾದ್, ನಗರಸಭೆ ಸದಸ್ಯ ಪಾರ್ವತಮ್ಮ, ಮುಖಂಡರಾದ ಗಾಣಕಲ್ ನಟರಾಜ್, ಶಿವಕುಮಾರ ಸ್ವಾಮಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT