ಸೋಮವಾರ, ಸೆಪ್ಟೆಂಬರ್ 20, 2021
21 °C

ರಾಮನಗರ| ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಹುಸೇನ್‌ ವಿರುದ್ಧ ಕಾರ್ಯಕರ್ತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ‘ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಹುಸೇನ್‌ ಕಳೆದ ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡಿದ್ದು, ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು’ ಎಂದು 2ನೇ ವಾರ್ಡಿನ ಪರಾಜಿತ ಅಭ್ಯರ್ಥಿ ಶಿವಕುಮಾರಸ್ವಾಮಿ ಆಗ್ರಹಿಸಿದರು.

‘2ನೇ ವಾರ್ಡ್‍ನಿಂದ ಸ್ಪರ್ಧಿಸಲು ಪಕ್ಷ ಬಿ ಫಾರ್ಮ್ ನೀಡಿತ್ತು. ಆದರೆ ಇಕ್ಬಾಲ್ ಹುಸೇನ್, ನಗರಸಭೆ ಮಾಜಿ ಸದಸ್ಯ ಡಿ.ಕೆ. ಶಿವಕುಮಾರ್, ಮಾಜಿ ಅಧ್ಯಕ್ಷೆ ರತ್ನಮ್ಮ ಅವರ ಪತಿ ಪಾಪಣ್ಣ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಇಕ್ಬಾಲ್ ಹುಸೇನ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾಗ ನಗರಸಭೆ ಸದಸ್ಯ ಶಿವಕುಮಾರ್ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಕಾರ್ಯಕರ್ತ ಚಂದ್ರು ವಿರುದ್ಧ ದೂರು ನೀಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಲು ಕಾರಣರಾಗಿದ್ದರು. ಇಂತಹವರಿಗೆ ಇಕ್ಬಾಲ್‌ ಸಹಕಾರ ನೀಡಿದ್ದಾರೆ’ ಎಂದು ದೂರಿದರು.

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರಿಗೆ ದೂರು ನೀಡಿದ್ದೇನೆ. ಆದರೆ, ಸಾಕ್ಷ್ಯದ ಕೊರತೆಯ ನೆಪವೊಡ್ಡಿ ಕ್ರಮ ಕೈಗೊಂಡಿಲ್ಲ ಎಂದರು.

2, 5, 21, 23, 24, ಮತ್ತು 27ನೇ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ವಿರೋಧಿ ಅಭ್ಯರ್ಥಿಗಳಿಗೆ ₹ 5 ಲಕ್ಷದಿಂದ ₹ 8 ಲಕ್ಷದವರೆಗೂ  ನೀಡಲಾಗಿದೆ ಎಂಬ ಆರೋಪ ಇದೆ. ಇಕ್ಬಾಲ್ ಅವರ ನಡೆಯನ್ನು ನೋಡಿದರೆ ನಮ್ಮ ಆರೋಪ ಸತ್ಯ ಎಂದು ಸಾಬೀತಾಗುತ್ತಿದೆ ಎಂದರು.

23ನೇ ವಾರ್ಡ್‍ನ ಪರಾಜಿತ ಅಭ್ಯರ್ಥಿ ಪ್ಯಾರಿ ಫಯಾಜ್, 24ನೇ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಯೀದಾ ಬಾನು ಅವರ ಪತಿ ಫಯಾಜ್ ಪಾಷಾ ಮತ್ತಿತರರು ಮಾತನಾಡಿ, ತಮ್ಮ ವಿರುದ್ಧ ಇಕ್ಬಾಲ್‌ ಹುಸೇನ್‌ ವ್ಯವಸ್ಥಿತ ಪಿತೂರಿ ನಡೆಸಿ ಸೋಲಿಸಿದ್ದಾರೆ. ಪಕ್ಷದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಹರೀಶ್, ಶಿವಲಿಂಗಯ್ಯ, ಸನಾವುಲ್ಲಾ, ಜಾವೇದ್ ಖಾನ್, ಚಂದ್ರಶೇಖರ್, ಇಲಿಯಾಸ್ ಪಾಷಾ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು