ಬುಧವಾರ, ನವೆಂಬರ್ 20, 2019
25 °C
ಡಿಕೆಶಿ ಅಭಿಮಾನಿಗಳ ನಿಯಂತ್ರಣಕ್ಕೆ ಸುರೇಶ್‌ ಪರಿಪಾಟಲು

ದೆಹಲಿಗೆ ಕಾಂಗ್ರೆಸ್‌ ಕಾರ್ಯಕರ್ತರು ದೌಡು!

Published:
Updated:

ರಾಮನಗರ: ದೆಹಲಿಯಲ್ಲಿ ಇ.ಡಿ. ಅಧಿಕಾರಿಗಳ ವಶದಲ್ಲಿ ಇದ್ದ ಕನಕಪುರ ಶಾಸಕ ಡಿ.ಕೆ. ಶಿವಕುಮಾರ್‌ ಅವರನ್ನು ಅಲ್ಲಿನ ನ್ಯಾಯಾಲಯವು 14 ದಿನ ಕಾಲ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದು, ಜಿಲ್ಲೆಯಲ್ಲಿನ ಕಾಂಗ್ರಸ್‌ ಕಾರ್ಯಕರ್ತರಲ್ಲಿ ತಲ್ಲಣ ಮೂಡಿಸಿದೆ. ಅವರನ್ನು ಕಾಣುವ ಸಲುವಾಗಿ ಹಲವರು ದೆಹಲಿ ಯಾತ್ರೆ ಕೈಗೊಳ್ಳುತ್ತಿದ್ದಾರೆ.

ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿರುವ ಡಿ.ಕೆ. ಶಿವಕುಮಾರ್ ಕಳೆದ ಕೆಲವು ವಾರಗಳಿಂದಲೂ ಇ.ಡಿ. ಅಧಿಕಾರಿಗಳ ವಶದಲ್ಲಿಯೇ ಇದ್ದಾರೆ. ಅವರ ಸಹೋದರ, ಡಿ.ಕೆ. ಸುರೇಶ್‌ ಸಹ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಅಣ್ಣನ ಬಿಡುಗಡೆಗೆ ಪ್ರಯತ್ನಿಸುತ್ತಿದ್ದಾರೆ. ಇತ್ತ ಜಿಲ್ಲೆಯ ಸಾಕಷ್ಟು ಕಾಂಗ್ರೆಸ್‌ ಕಾರ್ಯಕರ್ತರೂ ದೆಹಲಿಗೆ ದೌಡಾಯಿಸುತ್ತಿದ್ದು, ಅವರನ್ನು ನಿಯಂತ್ರಿಸುವುದು ಸ್ವತಃ ಸುರೇಶ್‌ಗೆ ತಲೆನೋವಾಗಿ ಪರಿಣಮಿಸಿದೆ.

ಶಿವಕುಮಾರ್ ಅವರನ್ನು ಕಾಣಲು ಸಿದ್ದರಾಮಯ್ಯ ಅವರಂತಹ ಘಟಾನುಘಟಿ ನಾಯಕರಿಗೇ ಇ.ಡಿ. ಅಧಿಕಾರಿಗಳು ಅವಕಾಶ ಕಲ್ಪಿಸಲಿಲ್ಲ. ಹೀಗಿದ್ದೂ ಜಿಲ್ಲೆಯ ಡಿಕೆಶಿ ಅಭಿಮಾನಿಗಳು ದೆಹಲಿಗೆ ಹೋಗುವುದು ತಪ್ಪಿಲ್ಲ. ಸುರೇಶ್ ಸ್ವತಃ ಸಾಮಾಜಿಕ ಜಾಲತಾಣಗಳ ಮೂಲಕ ಈ ಬಗ್ಗೆ ಮನವಿ ಮಾಡಿ ಯಾರೂ ದೆಹಲಿಗೆ ಬರದಂತೆ ತಾಕೀತು ಮಾಡಿದ್ದರೂ ಕಾರ್ಯಕರ್ತರ ದೆಹಲಿ ದಂಡಯಾತ್ರೆ ತಪ್ಪುತ್ತಿಲ್ಲ.

ಒಂದು ಅಂದಾಜಿನ ಪ್ರಕಾರ ಸದ್ಯ ರಾಮನಗರ ಜಿಲ್ಲೆಯ 200–300 ಮಂದಿ ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ ಎನ್ನಲಾಗಿದೆ. ಮಂಗಳವಾರ ಅಲ್ಲಿನ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯನ್ನು ನೇರವಾಗಿ ನೋಡಲು ಹಲವರು ಪ್ರಯತ್ನಿಸಿದ್ದಾರೆ. ಇನ್ನೂ ಕೆಲವರು ಸುರೇಶ್‌ ಅಣತಿಯಂತೆ ಅವರಿಗೆ ಪೂರಕವಾದ ನೆರವು ನೀಡುವಲ್ಲಿ ನಿರತರಾಗಿದ್ದಾರೆ.

ಪ್ರತಿಭಟನೆಗಳು ಬಂದ್‌: ಡಿಕೆಶಿ ಬಂಧನ ವಿರೋಧಿಸಿ ಜಿಲ್ಲೆಯಲ್ಲಿ ಎರಡು ದಿನ ಕಾಲ ಬಂದ್‌ ನಡೆದಿತ್ತು. ಸಾಲು ಸಾಲು ಪ್ರತಿಭಟನೆಗಳೂ ನಡೆದಿದ್ದವು. ಆದರೆ ಇದರಿಂದ ಶಿವಕುಮಾರ್‌ಗೆ ತೊಂದರೆಯೇ ಹೆಚ್ಚು. ಹೀಗಾಗಿ ಯಾವುದನ್ನೂ ಅತಿಯಾಗಿ ಮಾಡಬೇಡಿ ಎಂದು ಸುರೇಶ್‌ ಕಾಂಗ್ರೆಸ್ ಕಾರ್ಯಕರ್ತರಿಗೆ ಮೌಕಿಕ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸದ್ಯ ಪ್ರತಿಭಟನೆಗಳ ಕಾವು ತಣ್ಣಗಾಗಿದೆ.

ಮತ್ತೊಂದೆಡೆ ಪೊಲೀಸರು ಸಹ ಪ್ರತಿಭಟನಾಕಾರರ ಮೇಲೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಅನುಮತಿ ಇಲ್ಲದೇ ಬೀದಿಗೆ ಇಳಿದರೆ ಕೇಸು ದಾಖಲಾಗುವ ಸಾಧ್ಯತೆ ಇರುವ ಕಾರಣ ಕಾರ್ಯಕರ್ತರೂ ಹಿಂಜರಿಯುತ್ತಿದ್ದಾರೆ.

ಪ್ರತಿಕ್ರಿಯಿಸಿ (+)