ಬುಧವಾರ, ಜೂಲೈ 8, 2020
25 °C
ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಪೊಲೀಸರಿಂದಲೂ ತಲೆನೋವು: ಕಳಚಿತು ರಾಮನಗರ ಹಸಿರು ವಲಯ ಕಿರೀಟ

ಎರಡು ವರ್ಷದ ಬಾಲಕನಿಗೆ ಕೋವಿಡ್-19 !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ/ಮಾಗಡಿ: ಅರವತ್ತು ದಿನಗಳ ಕಾಲ ಕೊರೊನಾ ಹಸಿರು ವಲಯವಾಗಿಯೇ ಉಳಿದುಕೊಂಡಿದ್ದ ರಾಮನಗರ ಜಿಲ್ಲೆಯ ಪಟ್ಟವೀಗ ಕಳಚಿದ್ದು, ಇಲ್ಲಿ ಮೊಟ್ಟಮೊದಲ ಕೋವಿಡ್‌-19 ಪ್ರಕರಣ ಸೋಮವಾರ ವರದಿಯಾಗಿದೆ.

ಮಾಗಡಿ ತಾಲ್ಲೂಕಿನ ಎರಡೂವರೆ ವರ್ಷದ ಬಾಲಕನಿಗೆ ಸೋಂಕು ತಗುಲಿದ್ದು, ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ತಾಯಿ ತುಂಬು ಗರ್ಭೀಣಿ. ಹೀಗಾಗಿ ಬಾಲಕನ ತಂದೆಯೇ ಆಸ್ಪತ್ರೆಯ ಹೊರಗೆ ಮಗನ ಕಾಯುತ್ತ ನಿಂತಿದ್ದಾರೆ. ಕುಟುಂಬದ ಉಳಿದ ಒಂಭತ್ತು ಮಂದಿಯನ್ನೂ ಈಗ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆಶ್ಚರ್ಯವೆಂದರೆ ಸೋಂಕಿತ ಬಾಲಕನ ಪೋಷಕರ ಕೋವಿಡ್ ಪರೀಕ್ಷೆ ವರದಿಗಳು ನೆಗೆಟಿವ್‌ ಆಗಿವೆ.

ಬಾಲಕನ ಪೋಷಕರು ಕುದೂರು ಹೋಬಳಿಯ ಮಾರಸಂದ್ರ ಗ್ರಾಮದ ನಿವಾಸಿಗಳು. ಉದ್ಯೋಗ ಅರಸಿ ತಮಿಳುನಾಡಿನ ಚೆನ್ನೈಗೆ ಹೋಗಿದ್ದರು. ಲಾ‌ಕ್‌ಡೌನ್‌ ಸಂದರ್ಭ ಅಲ್ಲಿಯೇ ಸಿಲುಕಿದ್ದರು. ಲಾಕ್‌ಡೌನ್ ಸಡಿಲಗೊಂಡ ಬಳಿಕ ಚೆನ್ನೈನಿಂದ ಟ್ಯಾಕ್ಸಿಯೊಂದರಲ್ಲಿ ಒಟ್ಟು ನಾಲ್ವರು ಇದೇ ತಿಂಗಳ 9ರಂದು ಸ್ವಗ್ರಾಮಕ್ಕೆ ವಾಪಸ್ ಆಗಿದ್ದರು. ಇವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಪರೀಕ್ಷೆಗೆ ಒಳಪಡಿಸಿದ್ದರು. ಈ ಎಲ್ಲರ ಗಂಟಲ ದ್ರವದ ಮಾದರಿಯನ್ನು ಪಡೆಯಲಾಗಿತ್ತು. ಎಲ್ಲರ ವರದಿಗಳು ನೆಗೆಟಿವ್ ಆಗಿದ್ದವು. ಮೊದಲ ಸುತ್ತಿನ ವರದಿಯಲ್ಲಿ ಬಾಲಕನ ವರದಿ ಸಹ ನೆಗೆಟಿವ್ ಆಗಿತ್ತು. ಆದರೆ ನಂತರದ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿರುವುದು ಅಧಿಕಾರಿಗಳಿಗೆ ಆಶ್ಚರ್ಯ ತಂದಿದೆ.

ಪ್ರಕರಣ ಖಾತ್ರಿಯಾಗುತ್ತಲೇ ಮಾಗಡಿ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಮಾರಸಂದ್ರಕ್ಕೆ ದೌಡಾಯಿಸಿದ್ದಾರೆ. ಸೋಮವಾರ ಸೋಂಕಿತ ಬಾಲಕನ ಕುಟುಂಬದ ಸದಸ್ಯರೆಲ್ಲರನ್ನೂ ಕರೆತಂದು ಕುದೂರಿನ ಕಟ್ಟಡವೊಂದರಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇಡೀ ಗ್ರಾಮವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಣೆ ಮಾಡಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ.

ಕಂಡಕ್ಟರ್‍ ತಂದ ತಲೆನೋವು: ತುಮಕೂರಿನ ಕೆಎಸ್‌ಆರ್‌ಟಿಸಿ ಸಿಬ್ಬಂದಿಯೊಬ್ಬರಿಗೆ ಸೋಮವಾರ ಕೋವಿಡ್-19 ಸೋಂಕು ಪತ್ತೆಯಾಗಿದ್ದು, ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಆತ ಮಾಗಡಿ ಡಿಪೊದಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದು ಇಲ್ಲಿನ ಜನರನ್ನು ಇನ್ನಷ್ಟು ಚಿಂತೆಗೀಡು ಮಾಡಿದೆ.

34 ವರ್ಷ ವಯಸ್ಸಿನ ಈ ವ್ಯಕ್ತಿ ಮಾಗಡಿ ಡಿಪೊದಲ್ಲಿ ಕಂಡಕ್ಟರ್‍ ಕಂ ಡ್ರೈವರ್‍ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೋಂಕಿನ ಲಕ್ಷಣಗಳು ಇದ್ದಾಗ್ಯೂ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದು, ಮಾಗಡಿ-ಬೆಂಗಳೂರು ನಡುವೆ ಬಸ್ ಚಾಲನೆ ಮಾಡಿದ್ದರು. ಇವರ ಸಂಪರ್ಕಕ್ಕೆ ಬಂದಿದ್ದ 68 ಪ್ರಯಾಣಿಕರ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. ಇದರಲ್ಲಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ 22 ಮಂದಿಯನ್ನು ಚಕ್ರಬಾವಿ ಬಳಿಯ ಕಟ್ಟಡವೊಂದರಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದ ವಿಷಯ ಮಾಗಡಿ ಡಿಪೊದ ಉಳಿದ ಸಿಬ್ಬಂದಿಯ ನಿದ್ದೆಕೆಡಿಸಿದೆ. ಮಂಗಳವಾರ ಇಡೀ ಡಿಪೊ ಸ್ಯಾನಿಟೈಜ್‌ ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜೊತೆಗೆ ಇಲ್ಲಿನ ಎಲ್ಲ ಸಿಬ್ಬಂದಿಯ ಗಂಟಲ ದ್ರವದ ಪರೀಕ್ಷೆ ಸಹ ಮಂಗಳವಾರ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು