ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ

ಜಿಲ್ಲೆಯ 252 ಉಪಕೇಂದ್ರಗಳಲ್ಲಿ ವ್ಯವಸ್ಥೆ; ಅಗತ್ಯದಷ್ಟು ದಾಸ್ತಾನು ಸಂಗ್ರಹ
Last Updated 2 ಏಪ್ರಿಲ್ 2021, 13:51 IST
ಅಕ್ಷರ ಗಾತ್ರ

ರಾಮನಗರ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಕಾರ್ಯಕ್ರಮ ಚುರುಕಾಗಿದ್ದು, 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಆರೋಗ್ಯ ಇಲಾಖೆಯು ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 3,09,929 ಮಂದಿ ಇದ್ದಾರೆ. ಈ ಎಲ್ಲರಿಗೂ ಇದೇ ತಿಂಗಳಲ್ಲಿ ಲಸಿಕೆ ಹಾಕುವ ಗುರಿಯನ್ನು ಆರೋಗ್ಯ ಇಲಾಖೆಯು ಹೊಂದಿದೆ. ಇದಕ್ಕಾಗಿ ಲಸಿಕಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಪ್ರಸ್ತುತ 73 ಸರ್ಕಾರಿ ಆಸ್ಪತ್ರೆ ಹಾಗೂ 3 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿತ್ತು. ಇದರ ಜೊತೆಗೆ ಜಿಲ್ಲೆಯ 252 ಆರೋಗ್ಯ ಉಪ ಕೇಂದ್ರಗಳಲ್ಲಿಯೂ ವೈದ್ಯರ ಲಭ್ಯತೆ ಆಧಾರದ ಮೇಲೆ ಲಸಿಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಪಡೆಯಲು ಬರುವವರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಕುಡಿಯುವ ನೀರು ಸೇರಿ ಮೂಲ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.

‘ಇದೇ 1 ರಂದು ಜಿಲ್ಲೆಯಲ್ಲಿ 102 ಲಸಿಕಾ ಕೇಂದ್ರಗಳಲ್ಲಿ ಜನರಿಗೆ ಲಸಿಕೆ ನೀಡಲಾಗಿದ್ದು, ಹಂತಹಂತವಾಗಿ ಈ ಸಂಖ್ಯೆಯಲ್ಲಿ ಏರಿಕೆ ಆಗಲಿದೆ. ಪ್ರತಿ ಕೇಂದ್ರದಲ್ಲಿ ನಿತ್ಯ ಸರಾಸರಿ 128 ಜನರು ಲಸಿಕೆ ಪಡೆದುಕೊಂಡರೆ ಏಪ್ರಿಲ್ ತಿಂಗಳಲ್ಲಿ ಗುರಿ ಸಾಧನೆ ಸಾಧ್ಯವಾಗಲಿದೆ’ ಎನ್ನುತ್ತಾರೆ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಪದ್ಮಾ.

ದಾಖಲೆ ತನ್ನಿ: ಲಸಿಕೆ ಪಡೆಯಲು ಆರೋಗ್ಯ ಕೇಂದ್ರಕ್ಕೆ ಬರುವವರು ತಮ್ಮ ವಯಸ್ಸಿನ ಕುರಿತ ದಾಖಲೆಗಳನ್ನು ತರಬೇಕು. ಆಧಾರ್ ಕಾರ್ಡ್ ಜೊತೆಗೆ ಮೊಬೈಲ್‌ ಸಂಖ್ಯೆ ಸಲ್ಲಿಸಿದಲ್ಲಿ ಲಸಿಕೆ ಸಿಗಲಿದೆ. 28 ದಿನದ ನಂತರ ಮತ್ತೊಂದು ಲಸಿಕೆ ಪಡೆಯಬೇಕಿದೆ.

88 ಸಾವಿರ ಲಸಿಕೆ: ಜಿಲ್ಲೆಯಲ್ಲಿ ಸದ್ಯ 88 ಸಾವಿರ ಜನರಿಗೆ ಸಾಕಾಗುವಷ್ಟು ಲಸಿಕೆ ಲಭ್ಯ ಇದೆ. ಇದನ್ನು ಬಳಸಿಕೊಂಡು ಒಂದು ವಾರಕ್ಕೂ ಹೆಚ್ಚು ಕಾಲ ನಿರಂತರವಾಗಿ ಲಸಿಕೆ ಕಾರ್ಯಕ್ರಮ ಆಯೋಜಿಸಬಹುದಾಗಿದೆ. ಮುಂದಿನ ದಿನಕ್ಕೂ ಬೇಡಿಕೆ ಅನುಗುಣವಾಗಿ ಲಸಿಕೆಯನ್ನು ಕೇಂದ್ರದಿಂದ ಪಡೆದುಕೊಳ್ಳಲಾಗುವುದು ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಕೆಎಸ್‌ಆರ್‌ಟಿಸಿ, ಅಂಚೆ ನೌಕರರಿಗೂ ಅವಕಾಶ

ರಾಜ್ಯ ಸರ್ಕಾರವು ಕೆ.ಎಸ್.ಆರ್.ಟಿಸಿ ಹಾಗೂ ಅಂಚೆ ಇಲಾಖೆ ನೌಕರರನ್ನು ಕೋವಿಡ್ ಸೈನಿಕರೆಂದು ಪರಿಗಣಿಸಿದೆ. ಅದರಲ್ಲೂ ಸಾರಿಗೆ ನೌಕರರು ನಿತ್ಯ ನೂರಾರು ಜನರ ಸಂಪರ್ಕದಲ್ಲಿ ಇದ್ದು, ಸೋಂಕಿನ ಅಪಾಯದ ಸಾಧ್ಯತೆ ಅತಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅವರಿಗೂ ಸರ್ಕಾರದಿಂದ ಉಚಿತವಾಗಿ ಲಸಿಕೆ ಸಿಗಲಿದೆ. ಈ ಎರಡೂ ಇಲಾಖೆಗಳ ಸಿಬ್ಬಂದಿ ತಮ್ಮ ಇಲಾಖೆಯ ಗುರುತಿನ ಚೀಟಿಯನ್ನು ಹಾಜರುಪಡಿಸಿ ಲಸಿಕೆ ಪಡೆದುಕೊಳ್ಳಬಹುದಾಗಿದೆ.

ಐದು ಪ್ರಕರಣ ದೃಢ

ಜಿಲ್ಲೆಯಲ್ಲಿ ಶುಕ್ರವಾರ ಐವರಲ್ಲಿ ಕೋವಿಡ್ ಸೋಂಕು ದೃಢವಾಗಿದೆ. ರಾಮನಗರದ 1 ಹಾಗೂ ಕನಕಪುರ ತಾಲ್ಲೂಕಿನ 4 ಮಂದಿಗೆ ಸೋಂಕು ತಗುಲಿದೆ. ಈ ದಿನ ಆಸ್ಪತ್ರೆಯಿಂದ 9 ಮಂದಿ ಗುಣಮುಖರಾಗಿ ಹೊರಬಂದಿದ್ದಾರೆ. ಜಿಲ್ಲೆಯಲ್ಲಿ 43 ಸಕ್ರಿಯ ಪ್ರಕರಣಗಳು ಇವೆ.

***
ಕೋವಿಡ್‌ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. ಜನರು ವದಂತಿಗಳಿಗೆ ಕಿವಿಗೊಡದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಬೇಕು.

- ಡಾ. ಪದ್ಮಾ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT