ಶುಕ್ರವಾರ, ಮೇ 20, 2022
23 °C

ನಾಡಬಾಂಬ್‌ ಜಿಗಿದು ಹಸುವಿನ ಬಾಯಿ ಛಿದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಜಮೀನಿನಲ್ಲಿ ಮೇಯುತ್ತಿದ್ದ ಸೀಮೆ ಹಸುವೊಂದು ನಾಡಬಾಂಬ್‌ ಜಿಗಿದ ಪರಿಣಾಮ ಅದರ ಬಾಯಿ ಛಿದ್ರಗೊಂಡಿರುವ ಘಟನೆ ತಾಲ್ಲೂಕಿನ ಕೆಬ್ಬಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕೋಡಿಹಳ್ಳಿ ಹೋಬಳಿ ವ್ಯಾಪ್ತಿಯ ಕೆಬ್ಬಳ್ಳಿಯ ಕಾಶೀಗೌಡರಿಗೆ ಸೇರಿದ ಸೀಮೆಹಸು ಗಾಯಗೊಂಡಿದೆ. ಕಾಶೀಗೌಡ ಅವರು ತಮ್ಮ ಜಮೀನಿನಲ್ಲಿ ಹಸುವನ್ನು ಬೆಳಿಗ್ಗೆ ಮೇಯಲು ಬಿಟ್ಟು ಬಂದಿದ್ದಾಗ ಈ ಅವಘಡ ಸಂಭವಿಸಿದೆ.

ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ನೋಡಿಕೊಂಡು ಕಾಶೀಗೌಡ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅವರು ಕೋಡಿಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕೋಡಿಹಳ್ಳಿ ಸಾತನೂರು, ಉಯ್ಯಂಬಳ್ಳಿ ಹೋಬಳಿಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿವೆ. ಈ ಭಾಗದಲ್ಲಿ ಕಳ್ಳಬೇಟೆ ಹೆಚ್ಚಾಗಿ ನಡೆಯುತ್ತದೆ. ಬೇಟೆಗಾರರು ಅರಣ್ಯದೊಳಗೆ ಹೋಗುವ ಬದಲು ಕಾಡಂಚಿನ ಜಮೀನುಗಳಲ್ಲಿ ನಾಡಬಾಂಬ್‌ (ಮದ್ದಿನ ಉಂಡೆ) ಇಟ್ಟು ಬೇಟೆಯಾಡುತ್ತಾರೆ. ಕಾಡುಪ್ರಾಣಿಗಳ ಬೇಟೆಗಾಗಿ ಇಟ್ಟಿರುವ ಉಂಡೆಗಳನ್ನು ಹಸುಗಳು ತಿಂದಾಗ ಅವುಗಳ ಬಾಯಿ ಛಿದ್ರಗೊಳ್ಳುತ್ತದೆ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.

ಇಂತಹ ಘಟನೆಗಳು ನಡೆಯುತ್ತಿದ್ದರೂ ತಡೆಯುವಲ್ಲಿ ಅರಣ್ಯ ಮತ್ತು ಪೊಲೀಸ್‌ ಇಲಾಖೆ ವಿಫಲವಾಗಿದೆ. ಬಾಂಬ್‌ನಿಂದ ಛಿದ್ರಗೊಂಡಿರುವ ಹಸುವಿನ ಬಾಯಿಯನ್ನು ಸರಿಪಡಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಹಸು ಜೀವಂತವಾಗಿ ಉಳಿಯುವುದು ಅಸಾಧ್ಯವಾಗಿದೆ. ಈ ರೀತಿಯಾಗಿ ಮದ್ದಿನ ಉಂಡೆಯಿಟ್ಟು ಮೂಕಪ್ರಾಣಿಗಳ ಜೀವ ತೆಗೆಯುವ ಕಳ್ಳಬೇಟೆಗಾರರನ್ನು ಮಟ್ಟಹಾಕಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು