ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಹೂಡಿಕೆ ಹೆಸರಲ್ಲಿ ₹17.35 ಲಕ್ಷ ವಂಚನೆ

ದುಪ್ಪಟ್ಟು ಲಾಭದ ಆಸೆಗೆ ಹಣ ಕಳೆದುಕೊಂಡ ಖಾಸಗಿ ಕಂಪನಿ ಉದ್ಯೋಗಿ
Published 25 ಜೂನ್ 2024, 16:06 IST
Last Updated 25 ಜೂನ್ 2024, 16:06 IST
ಅಕ್ಷರ ಗಾತ್ರ

ರಾಮನಗರ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ಖಾಸಗಿ ಕಂಪನಿಯ ಉದ್ಯೋಗಿಯಿಂದ, ಆನ್‌ಲೈನ್‌ನಲ್ಲಿ ಬರೋಬ್ಬರಿ ₹17.35 ಲಕ್ಷ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಆಗಿರುವ ಬಿಡದಿಯ ರೇಣುಕಾಪ್ರಸಾದ್ ವಂಚನೆಗೊಳಗಾದವರು.

ಫೇಸ್‌ಬುಕ್‌ ನೋಡುತ್ತಿದ್ದ ಪ್ರಸಾದ್ ಅವರು, ಷೇರು ಮಾರುಕಟ್ಟೆ ಕುರಿತು ತಿಳಿದುಕೊಳ್ಳಲು ಎಸ್ಸೆನ್ಸ್ ಇನ್ವೆಸ್ಟ್‌ಮೆಂಟ್ ಆ್ಯಂಡ್ ಫೈನಾನ್ಸ್ ಲಿಮಿಟೆಡ್ ಎಂಬ ಲಿಂಕ್ ಕ್ಲಿಕ್ ಮಾಡಿದ್ದಾರೆ. ಆಗ ವಾಟ್ಸ್‌ಆ್ಯಪ್ ಗ್ರೂಪ್‌ ತೆರೆದುಕೊಂಡಿದೆ. ಎರಡು ದಿನದ ಬಳಿಕ, ಓಟಿಸಿ ಖಾತೆ ತೆರೆಯುವಂತೆ ಲಿಂಕ್‌ ಬಂದಿದೆ. ಅದನ್ನು ಕ್ಲಿಕ್ ಮಾಡಿ ಮೊಬೈಲ್ ಫೋನ್ ಸಂಖ್ಯೆ ನಮೂದಿಸಿ, ಲಾಗಿನ್ ಪಾಸ್‌ವರ್ಡ್ ಹಾಕಿದಾಗ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಸೂಚನೆ ಬಂದಿದೆ.

ಅದರಂತೆ, ವೆಬ್‌ಸೈಟ್‌ನವರು ಹೇಳಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್‌ ಮೂಲಕ ಮೇ 6ರಿಂದ ಜೂನ್ 12ರವರೆಗೆ ಸುಮಾರು ₹17.35 ಲಕ್ಷ ಹೂಡಿಕೆ ಮಾಡಿದ್ದೇನೆ. ಆದರೆ, ಯಾವುದೇ ಲಾಭಾಂಶ ಮತ್ತು ಹೂಡಿಕೆ ಮೊತ್ತ ವಾಪಸ್ ಕೊಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಪ್ರಸಾದ್ ಅವರು ರಾಮನಗರ ಸಿಇಎನ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೊತ್ತಾಗದಂತೆ ಹಣ ಮಾಯ

ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ಹಣವು, ಅವರಿಗೆ ಅರಿವಿಲ್ಲದಂತೆ ₹1.94 ಲಕ್ಷ ಹಣ ಆನ್‌ಲೈನ್ ಮೂಲಕ ವರ್ಗಾವಣೆಯಾಗಿದೆ. ಈ ಕುರಿತು ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲ್ಲೂಕಿನ ಸಂಗಬಸವನದೊಡ್ಡಿಯ ರೇವಣಸಿದ್ದಪ್ಪ ಹಣ ಕಳೆದುಕೊಂಡವರು.

ಗ್ರಾನೈಟ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿರುವ ಸಿದ್ದಪ್ಪ ಅವರ ಫೋನ್‌ಪೇ ಕಾರ್ಯನಿರ್ವಹಿಸುತ್ತಿರಲಿಲ್ಲವಾದ ಕಾರಣ, ತಾವು ಖಾತೆ ಹೊಂದಿರುವ ಕೆನರಾ ಬ್ಯಾಂಕ್‌ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದಾರೆ. ಆಗ ಅವರ ಖಾತೆಯಲ್ಲಿ ಹಣವಿಲ್ಲದಿರುವುದು ಗೊತ್ತಾಗಿದೆ. ಖ್ಯಾತೆಯ ಸ್ಟೇಟ್‌ಮೆಂಟ್ ಪಡೆದು ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದಾಗ, ಖಾತೆಯಲ್ಲಿ ಹಣವಿಲ್ಲ ಎಂಬ ಪ್ರತಿಕ್ರಿಯೆ ಬಂದಿದೆ.

ಅಲ್ಲದೆ, ಬ್ಯಾಂಕ್ ಖಾತೆಯಿಂದ ಜೂನ್ 16ರಂದು ಯುಪಿಐ ಐ.ಡಿ ಮೂಲಕ ಹಂತಹಂತವಾಗಿ ₹1.94 ಲಕ್ಷ ಮೊತ್ತ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ರೇವಣಸಿದ್ದಪ್ಪ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT