ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ| ಅಭ್ಯರ್ಥಿ ಕುರಿತು ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ: ಡಿಕೆಶಿ

Published 24 ಜೂನ್ 2024, 13:29 IST
Last Updated 24 ಜೂನ್ 2024, 13:29 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ‘ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತು ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಜೊತೆಗೆ ನಾನು, ಮುಖ್ಯಮಂತ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಚರ್ಚಿಸುತ್ತೇವೆ. ಬಳಿಕ, ಪಕ್ಷದ ಚುನಾವಣಾ ಸಮಿತಿಯಲ್ಲಿ ಯಾರು ಸ್ಪರ್ಧಿಸಬೇಕೆಂದು ತೀರ್ಮಾನಿಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ತಾಲ್ಲೂಕಿನ ಕೋಡಂಬಹಳ್ಳಿಯಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರಿಗೆ ಜನ ವಿಶ್ರಾಂತಿ ಕೊಟ್ಟು, ತಿದ್ದಿಕೊಳ್ಳಲು ಅವಕಾಶ ನೀಡಿದ್ದಾರೆ. ಸದ್ಯ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಆದರೆ, ಪಕ್ಷದ ಚುನಾವಣಾ ಸಮಿತಿ ನನ್ನ ಅಥವಾ ಸುರೇಶ್ ಹೆಸರನ್ನು ಸೂಚಿಸಿದರೆ ಕೇಳಲೇಬೇಕು’ ಎಂದರು.

‘ಸುರೇಶ್ ಅವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಆಸಕ್ತಿ ಇರಲಿಲ್ಲ. ಕಾರ್ಯಕರ್ತರ ಒತ್ತಾಯದ ಮೇರೆಗೆ ಅವರು ಸ್ಪರ್ಧಿಸಿದ್ದರು. ಅವರು ಎಂದಿಗೂ ಅಧಿಕಾರಕ್ಕೆ ಆಸೆಪಟ್ಟವರಲ್ಲ’ ಎಂದು ತಿಳಿಸಿದರು. ‘ಕನಕಪುರದ ಬೆದರಿಕೆ ಮತ್ತು ಭ್ರಷ್ಟಾಚಾರದ ಮಾದರಿ ನಮಗೆ ಬೇಡ’ ಎಂಬ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ, ‘ಕನಕಪುರದಲ್ಲಿ ಭ್ರಷ್ಟಾಚಾರದ ಬಗ್ಗೆ ಏನಾದರೂ ದೂರು ಬಂದಿದೆಯೇ?’ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಕುರಿತು ಕೇಳಿದಾಗ, ‘ಬಹಳ ಸಂತೋಷ, ಅವರಿಗೆ ಒಳ್ಳೆಯದಾಗಲಿ’ ಎಂದರು. ‘ರಾಮನಗರ ಅಭಿವೃದ್ಧಿ ಮಾಡಿದ್ದು ನಾನು, ಅವರು ಕಲ್ಲು ಹೊಡೆಯುತ್ತಿದ್ದರು’ ಎಂಬ ಟೀಕೆಗೆ, ‘ಹೌದು, ಕಲ್ಲು ಒಡೆಯುತ್ತಿದ್ದೇವೆ. ಈಗಲೂ ಒಡೆಯುತ್ತಿದ್ದೇವೆ’ ಎಂದು ವ್ಯಂಗ್ಯವಾಡಿದರು.

‘ಸಭೆಯಲ್ಲಿ ನಾನು ಅಧಿಕಾರಿಗಳನ್ನು ಅಧಿಕಾರಿಗಳನ್ನು ಬೆದರಿಸಿದ್ದರೆ ದೂರು ಕೊಡಲಿ’ ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪಕ್ಷದೊಳಗೆ ಎದ್ದಿರುವ ಮೂವರು ಉಪ ಮುಖ್ಯಮಂತ್ರಿ ಹುದ್ದೆ ಬೇಡಿಕೆ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ
– ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

‘ಕೈ ಬಿಟ್ಟಿರುವ ಮುಸ್ಲಿಮರ ಹೆಸರು ಸೇರಿಸಿ ಎಂದಿರುವೆ’

‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುಸ್ಲಿಮರ ಹೆಸರು ಕೈ ಬಿಡಲಾಗಿದೆ ಎಂಬ ದೂರುಗಳು ಬಂದಿದ್ದವು. ಹೀಗಾಗಿ, ಅಂತಹ ಮತದಾರರ ಮನೆಗೆ ಭೇಟಿ ನೀಡಿ ಅವರ ಹೆಸರನ್ನು ಮತ್ತೆ ಸೇರಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಹೊಸ ತಂತ್ರಜ್ಞಾನದಲ್ಲಿ ಬೇರೆ ಕಡೆ ಇರುವವರ ಹೆಸರನ್ನು ಇಲ್ಲಿಗೆ ತಂದು ಸೇರಿಸಲು ಆಗುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

‘ಡಿಕೆಶಿ ಚುನಾವಣಾ ಅಕ್ರಮ ಮಾಡುತ್ತಿದ್ದು, ಈ ಕುರಿತು ಆಯೋಗಕ್ಕೆ ಪತ್ರ ಬರೆಯುತ್ತೇನೆ’ ಎಂಬ ವಿಧಾನ ಪರಿಷತ್ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ, ‘ಕೇವಲ ಪತ್ರ ಯಾಕೆ ಬರೆಯುತ್ತಾರೆ. ಚುನಾವಣಾ ಆಯೋಗದ ಕಚೇರಿಗೆ ಹಾಸಿಗೆ, ದಿಂಬು ತೆಗೆದುಕೊಂಡು ಹೋಗಿ ಮಲಗಲಿ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT