ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಅಭಿವೃದ್ಧಿಗೆ ಹೈನುಗಾರಿಕೆ ಸಹಕಾರಿ

Last Updated 17 ಮಾರ್ಚ್ 2020, 13:56 IST
ಅಕ್ಷರ ಗಾತ್ರ

ರಾಮನಗರ: ‘ಗ್ರಾಮೀಣ ರೈತರ ಜೀವನೋಪಾಯಕ್ಕೆ ಹೈನುಗಾರಿಕೆ ಸಹಕಾರಿ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಭಾವತಿ ಕೆ. ಶಿವಲಿಂಗಯ್ಯ ಹೇಳಿದರು.

ಇಲ್ಲಿನ ಕವಣಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಸಿದ್ದ ಬರಡು ರಾಸುಗಳ ಆರೋಗ್ಯ ತಪಾಸಣೆ ಮತ್ತು ಪಶು ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತರು ಬೆಳೆದ ಬೆಳೆಗಳು ಅನಾವೃಷ್ಟಿ, ಅತಿವೃಷ್ಟಿ, ವಾತಾವರಣದ ಬದಲಾವಣೆ, ಪ್ರಕೃತಿ ವಿಕೋಪಗಳಿಗೆ ಸಿಲುಕಿ ನಲುಗಿ ಹೋಗಿ ಸೂಕ್ತ ಮಾರುಕಟ್ಟೆ ಬೆಲೆ ಸಿಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಹೈನುಗಾರಿಕೆ ರೈತನಿಗೆ ನೆರವಾಗಿದೆ. ರೈತರು ಕಾಲಕಾಲಕ್ಕೆ ವೈದ್ಯರ ಸಲಹೆ ಪಡೆದು ಹಾಲು ಉತ್ಪಾದನೆಯಲ್ಲಿ ಹೆಚ್ಚಿನ ಲಾಭಗಳಿಸಬೇಕು’ ಎಂದರು.

ಕೈಲಾಂಚ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಅಸಾದುಲ್ಲಾ ಷರೀಫ್ ಮಾತನಾಡಿ, ‘ಜಾನುವಾರುಗಳಿಗೆ ಸಮತೋಲನ ಆಹಾರ ನೀಡದೆ ಇದ್ದಾಗ, ಜಂತುಹುಳು ಬಾಧೆಯಿಂದ ಖನಿಜ ಮಿಶ್ರಣ ಮತ್ತು ಜೀವಸತ್ವಗಳ ಕೊರತೆಯಿಂದ ರಾಸುಗಳ ಗರ್ಭದಲ್ಲಿ ಏರುಪೇರಾಗಿ ರಾಸುಗಳು ಬರಡುತನಕ್ಕೆ ಒಳಗಾಗುತ್ತವೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತದೆ. ಸೂಕ್ತ ಕಾಲದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಿ ಆಹಾರದಲ್ಲಿ ಸಮತೋಲನ ಕಾಯ್ದುಕೊಂಡಾಗ ಬರಡುತನ ನಿವಾರಿಸಬಹುದು’ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ನಾಗೇಶ್ ಮಾತನಾಡಿ, ‘ಸಂಘದ ವತಿಯಿಂದ ಹೈನುಗಾರಿಕೆ ಮಾಡುವ ರೈತರಿಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ಕಾಲಕಾಲಕ್ಕೆ ರಾಸು ತಪಾಸಣಾ ಶಿಬಿರ ನಡೆಸಲಾಗುತ್ತಿದ್ದು, ರೈತಸ್ನೇಹಿಯಾಗಿ ಸಂಘ ಕಾರ್ಯ ನಿರ್ವಹಿಸುತ್ತಿದೆ’ ಎಂದು ತಿಳಿಸಿದರು.

ಹುಲಿಕೆರೆ ಪಶು ಚಿಕಿತ್ಸಾಲಯದ ಪಶುವೈದ್ಯ ಡಾ.ಎ.ಎಂ. ನಾಗೇಶ್ ಮಾತನಾಡಿ, ‘ರೈತರು ರಾಸುಗಳು ಬೆದೆಗೆ ಬಂದ ತಕ್ಷಣ ಕೃತಕ ಗರ್ಭಧಾರಣೆ ಮಾಡಿಸುತ್ತಾರೆ. ಆದರೆ ಆ ರೀತಿ ಮಾಡಿಸಬಾರದು. ಇದರಿಂದ ರಾಸುಗಳ ಗರ್ಭ ನಿಲ್ಲುವುದಿಲ್ಲ. ಬೆದೆಗೆ ಬಂದ 15-18 ಗಂಟೆ ನಂತರ ಅಂತಹ ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಬೇಕು. ಇದರಿಂದ ರಾಸುಗಳಲ್ಲಿ ಬರಡತನ ನಿವಾರಿಸಿ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭಗಳಿಸಬಹುದು’ ಎಂದರು.

ಸಂಘದ ಅಧ್ಯಕ್ಷ ಕೆ. ಶಿವಲಿಂಗಯ್ಯ, ಉಪಾಧ್ಯಕ್ಷೆ ಮಂಗಳಮ್ಮ, ಬನ್ನಿಕುಪ್ಪೆ ಆಸ್ಪತ್ರೆ ಪಶುವೈದ್ಯ ಡಾ.ಹರೀಶ್, ಎಸ್.ಆರ್.ಎಸ್. ಬೆಟ್ಟ ಪಶುವೈದ್ಯ ಡಾ. ಸುರೇಂದ್ರ, ಸಂಘದ ನಿರ್ದೇಶಕರಾದ ಕೆ. ಧನರಾಜು, ಕೆ.ಎಸ್. ಗುರುಲಿಂಗಯ್ಯ, ದೇವರಾಜು, ಲಿಂಗರಾಜು, ವೆಂಕಟಸ್ವಾಮಿ, ನಿಂಗಮ್ಮ, ಬೆಟ್ಟಯ್ಯ ಜಾನುವಾರು ಅಧಿಕಾರಿ ಕರಿಯಪ್ಪ, ನಾರಾಯಣಸ್ವಾಮಿ, ಸಿಬ್ಬಂದಿಗಳಾದ ದೇಶಿಲಿಂಗಯ್ಯ, ವಿ. ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT