ಬುಧವಾರ, ಫೆಬ್ರವರಿ 19, 2020
27 °C

ಸಮರ್ಥ ಅಭ್ಯರ್ಥಿಗಳ ಕೊರತೆಯಿಂದ ಸೋಲು: ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ‘ಮೀಸಲು ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಗಳು ಸಿಗದ ಕಾರಣ ಬಿಡದಿ ರೈತ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ತಂಡದ ಎಲ್ಲ ಸದಸ್ಯರ ಗೆಲುವು ಸಾಧ್ಯವಾಗಲಿಲ್ಲ’ ಎಂದು ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ ಅಭಿಪ್ರಾಯಪಟ್ಟರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಖರ್ಚನ್ನು ತಪ್ಪಿಸಿ, ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನ ನಡೆಯಿತು. ಅದು ಫಲ ಕೊಡದಿದ್ದಾಗ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಯಿತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಗೆಲುವು ಸಾಧ್ಯವಿಲ್ಲ. ಅಭ್ಯರ್ಥಿಗಳೇ ಇಲ್ಲ ಎಂದು ಕೆಲವರು ಲೇವಡಿ ಮಾಡಿದ್ದರು. ಕೆಲವು ಅಭ್ಯರ್ಥಿಗಳು ಕಡಿಮೆ ಮತಗಳಿಂದ ಸೋತಿದ್ದಾರೆ. ಪ್ರಬಲವಾದ 4 ನಿರ್ದೇಶಕರು ಸಂಘದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲಿದ್ದಾರೆ ಎಂದರು.

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮಾಡುವುದಿಲ್ಲ. ಸಂಘವನ್ನು ಆರ್ಥಿಕವಾಗಿ ಪ್ರಗತಿಯತ್ತ ಕೊಂಡೊಯ್ಯಲಾಗುವುದು ಎಂದರಲ್ಲದೆ, ನಕಲಿ ಗುರುತಿನ ಚೀಟಿ ಬಳಸಿ, ಮರಣ ಹೊಂದಿರುವ ಸದಸ್ಯರ ಹೆಸರಿನಲ್ಲಿ ಮತ ಚಲಾವಣೆಯಾಗಿದೆ ಎಂದು ದಾಖಲೆ ಪ್ರದರ್ಶಿಸಿ ಆರೋಪಿಸಿದರು.

ರಾಜ್ಯದಲ್ಲಿ ರಾಜಕೀಯ ಬದಲಾವಣೆಗಳಾದರೆ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಮಾಗಡಿಯಲ್ಲಿ ಕಾಂಗ್ರೆಸ್ ಜತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾದರೂ, ಕಾಂಗ್ರೆಸ್ ಒಪ್ಪುವುದಿಲ್ಲ. ಹಿಂದೆ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಗೆಲುವಿಗೆ ನೆರವಾದ ಡಿ.ಕೆ ಸುರೇಶ್ ಋಣವನ್ನು ಸಂಸದರ ಚುನಾವಣೆಯಲ್ಲಿ ಜೆಡಿಎಸ್‌ನವರು ತೀರಿಸಿದ್ದಾರೆ. 10 ಅಥವಾ 15 ತಿಂಗಳು ಅಧಿಕಾರಕ್ಕೆ ಬರುವ ಜೆಡಿಎಸ್ ಪಕ್ಷ ಬಿಟ್ಟು ಐದು ವರ್ಷಗಳ ಕಾಲ ಉತ್ತಮ ಸರ್ಕಾರ ನೀಡುವ ಕಾಂಗ್ರೆಸ್ಸನ್ನೇ ಜನರು ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ನೂತನವಾಗಿ ಆಯ್ಕೆಯಾದ ಮಹೇಶ್, ಜೀವನ್, ಕುಮಾರ್ ಎನ್ ಮತ್ತು ಆನಂದ್, ಗೆಲುವಿಗೆ ಶ್ರಮಿಸಿದ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟಯ್ಯ, ಎ.ಪಿ.ಎಂ.ಸಿ ನಿರ್ದೇಶಕ ರಮೇಶ್, ಮುಖಂಡರಾದ ಚಂದ್ರಶೇಖರ್ ಎಲ್, ನರಸಿಂಹಯ್ಯ, ಸಂಪತ್ ಕುಮಾರ್, ಸ್ವಾಮಿ, ಗೋಪಾಲ್ ರಾಜು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)