ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ದಲಿತ ಮುಖ್ಯಮಂತ್ರಿ ಘೋಷಣೆಗೆ ಒತ್ತಾಯ

Last Updated 11 ಜುಲೈ 2021, 4:09 IST
ಅಕ್ಷರ ಗಾತ್ರ

ರಾಮನಗರ: 2023ರ ವಿಧಾನಸಭೆ ಚುನಾವಣೆ ಸಂದರ್ಭ ಎಲ್ಲ ರಾಜಕೀಯ ಪಕ್ಷಗಳು ಮುಖ್ಯಮಂತ್ರಿ ಸ್ಥಾನವನ್ನು ದಲಿತ ಸಮುದಾಯಕ್ಕೆ ಮೀಸಲಿಡುವುದಾಗಿ ಘೋಷಿಸಬೇಕು. ಈ ಕುರಿತು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಧ್ವನಿ ಎತ್ತಲಾಗುವುದು ಎಂದು ಅಂಬೇಡ್ಕರ್ ದಲಿತ ಸೇನೆ ಮತ್ತು ಮೂಲ ನಿವಾಸಿ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಆರ್. ಕೇಶವಮೂರ್ತಿ ತಿಳಿಸಿದರು.

‘ಕಳೆದ ಎರಡು ವಿಧಾಸಭಾ ಚುನಾವಣೆಯಲ್ಲಿ ದಲಿತ ಮುಖ್ಯಮಂತ್ರಿ ಕೂಗು ಎದ್ದಿದ್ದ ಕಾರಣದಿಂದಲೇ ಕೊನೆಯ ಸಂದರ್ಭದಲ್ಲಿ ಈ ಸಮುದಾಯಕ್ಕೆ ಸೇರಿದವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ದಲಿತರಲ್ಲಿಯೂ ದೊಡ್ಡ ಹುದ್ದೆ ನಿರ್ವಹಣೆ ಮಾಡಿದ ಉದಾಹರಣೆ ಇದೆ. ರಾಷ್ಟ್ರಪತಿ ಕೋವಿಂದ್, ನೂತನ ರಾಜ್ಯಪಾಲರು ಹಾಗೂ ಸಚಿವರು ಸಾಕಷ್ಟು ಮಂದಿ ಬೃಹತ್ ಹುದ್ದೆಯನ್ನು ಸಮರ್ಥವಾಗಿಯೇ ನಿರ್ವಹಿಸಿದ್ದಾರೆ. ಇಷ್ಟಾದರೂ ಈತನಕ ರಾಜ್ಯದಲ್ಲಿ ಒಬ್ಬರು ದಲಿತರನ್ನು ಮುಖ್ಯಮಂತ್ರಿ ಆಗಿಸಲಿಲ್ಲ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿಷಾದಿಸಿದರು.

ದಲಿತ ಮುಖ್ಯಮಂತ್ರಿ ಅನುಷ್ಠಾನ ಮತ್ತು ಹೋರಾಟ ಸಮಿತಿ ವತಿಯಿಂದ ಮುಂದೆ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು. ಪ್ರತಿ ಜಿಲ್ಲೆಗೆ ತೆರಳಿ ಜಾಗೃತಿ ಮೂಡಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ಸಭೆ, ಸಮಾವೇಶ ಆಯೋಜನೆ ಮಾಡಲಾಗುವುದು ಎಂದರು.

ಶಿಕ್ಷಣ ನೀತಿ ಜಾರಿಯಾಗಲಿ: ರಾಜ್ಯದಲ್ಲಿ ಸಮಾನ ಶಿಕ್ಷಣ ನೀತಿ ಜಾರಿಗೆ ತಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಹಗಲು ದರೋಡೆಯನ್ನು ನಿಯಂತ್ರಿಸಬೇಕು. ಶುಲ್ಕ ಕಟ್ಟಡ ನೆಪವೊಡ್ಡಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಗೋವಿಂದಸ್ವಾಮಿ ಮಾತನಾಡಿದರು. ಲಕ್ಷ್ಮಿನರಸಿಂಹ, ನಾಗಲಿಂಗ, ರಂಗಪ್ಪ, ಎ. ಸುರೇಶ್, ಕಿರಣ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT