ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಂಗಿ ಜ್ವರ ನಿರ್ಲಕ್ಷ್ಯಿಸಬೇಡಿ: ಡಾ. ಶಶಿಧರ್

ರಾಷ್ಟ್ರೀಯ ಡೆಂಗಿ ದಿನಾಚರಣೆ: ಬಸ್ ನಿಲ್ದಾಣ, ಡಿಪೊದಲ್ಲಿ ಜಾಗೃತಿ
Published 23 ಮೇ 2024, 4:42 IST
Last Updated 23 ಮೇ 2024, 4:42 IST
ಅಕ್ಷರ ಗಾತ್ರ

ರಾಮನಗರ: ‘ಮಳೆ ಸಂದರ್ಭದಲ್ಲಿ ಹೆಚ್ಚಾಗಿ ಹರಡುವ ಡೆಂಗಿ ಜ್ವರದ ಕುರಿತು ನಿರ್ಲಕ್ಷ್ಯಿಸಬಾರದು. ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಈಜಿಪ್ಟೆ ಎನ್ನುವ ಸೊಳ್ಳೆಗಳಿಂದ ಈ ಜ್ವರವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಹಾಗಾಗಿ, ಜ್ವರದ ಬಗ್ಗೆ ಜನ ಹೆಚ್ಚಿನ ಜಾಗೃತಿ ವಹಿಸಬೇಕು’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕೆ. ಶಶಿಧರ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮತ್ತು ಡಿಪೊದಲ್ಲಿ ‘ಸಮುದಾಯದೊಂದಿಗೆ ಸೇರಿ ಡೆಂಗಿ ಜ್ವರವನ್ನು ನಿಯಂತ್ರಿಸೋಣ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ಡೆಂಗಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಪರೀತ ಜ್ವರ, ಮೈ ಮೇಲೆ ಕೆಂಪು ಗಂದೆಗಳು, ಕಣ್ಣಿನ ಹಿಂಭಾಗ ನೋವು, ತಲೆ ನೋವು, ಮಾಂಸಖಂಡಗಳ ನೋವು, ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ರೋಗ ಪರಿಣಾಮ ತೀವ್ರಗೊಂಡಾಗ ರೋಗಿಯ ಬಾಯಿ, ಮೂಗು ಹಾಗೂ ವಸಡುಗಳಿಂದ ರಕ್ತಸ್ರಾವವಾಗುತ್ತದೆ. ಅಲ್ಲದೆ ಚರ್ಮದ ಅಲ್ಲಲ್ಲಿ ರಕ್ತಸ್ರಾವದ ಗುರುತು ಕಾಣಿಸಿಕೊಳ್ಳುತ್ತವೆ’ ಎಂದು ತಿಳಿಸಿದರು.

‘ರೋಗಕ್ಕೆ ಸಂಬಂಧಿಸಿದ ಇಂತಹ ಲಕ್ಷಣಗಳು ಕಂಡುಬಂದಾಗ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಒಂದು ವೇಳೆ ಡೆಂಗಿ ಇರುವುದು ದೃಢಪಟ್ಟಲ್ಲಿ, ರೋಗದ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಿ ಗುಣಪಡಿಸಸಲಾಗುತ್ತದೆ. ಡೆಂಗಿಯಿಂದ ಉಂಟಾಗುವ ಸಾವು-ನೋವುಗಳನ್ನು ತಪ್ಪಿಸಬೇಕಾದರೆ ಮುಖ್ಯವಾಗಿ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು’ ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಉಮಾ ಮಾತನಾಡಿ, ‘ಸೊಳ್ಳೆಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದೇ ರೋಗ ನಿಯಂತ್ರಣಕ್ಕಿರುವ ಪ್ರಮುಖ ದಾರಿ. ಈ ರೋಗ ಹರಡುವ ಸೊಳ್ಳೆಗಳು ನೀರು ಶೇಖರಣೆ ಪರಿಕರಗಳಾದ ಸಿಮೆಂಟ್ ತೊಟ್ಟಿ, ಬ್ಯಾರಲ್, ಮಣ್ಣಿನ ಮಡಿಕೆಗಳನ್ನು ವಾರಕೊಮ್ಮೆ ಸ್ವಚ್ಛಗೊಳಿಸಬೇಕು’ ಎಂದರು.

‘ಈಗಾಗಲೇ ಮಳೆ ಪ್ರಾರಂಭವಾಗಿದ್ದು ಘನತ್ಯಾಜ್ಯಗಳಾದ ಟೈಯರ್, ಎಳನೀರು ಚಿಪ್ಪು, ಒಡೆದ ಪ್ಲಾಸ್ಟಿಕ್ ವಸ್ತುಗಳು ಹಾಗೂ ಅನುಪಯುಕ್ತ ಒರಳುಕಲ್ಲು ಇವುಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿರುತ್ತದೆ. ಆದ್ದರಿಂದ ನೀರು ನಿಲ್ಲದಂತೆ ನೋಡಿಕೊಳ್ಳುವ ಜೊತೆಗೆ ಮನೆ ಸುತ್ತಲಿನ ಪರಿಸರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಹೇಳಿದರು.

‘ಬಸ್ ಡಿಪೊಗಳಲ್ಲಿ ಬಳಸಲು ಯೋಗ್ಯವಲ್ಲದ ಟೈಯರ್‌ಗಳು ಮತ್ತು ಇತರೆ ಘನತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಪ್ಲಾಸ್ಟಿಕ್‌ನಿಂದ ಸಂರಕ್ಷಿಸಿಡಬೇಕು. ಆಗ, ಅಲ್ಲಿ ಸೊಳ್ಳೆಗಳು ಉತ್ಪತ್ತಯಾಗಲು ಅವಕಾಶವಿರುವುದಿಲ್ಲ. ಈ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿ ಮುನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜೇಂದ್ರ, ಕೆ.ಎಸ್.ಆರ್.ಟಿ.ಸಿ ಕಾರ್ಮಿಕ ಅಧಿಕಾರಿ ಜಯರಾಂ, ಸಂಚಾರ ಅಧೀಕ್ಷಕಿ ಭಾಗ್ಯಮ್ಮ, ಕೀಟಶಾಸ್ತ್ರಜ್ಞೆ ಸೌಮ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಾಸಪ್ಪ, ವಿಠಲ್, ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT