ಶೆಟ್ಟಿಹಳ್ಳಿ ಕೆರೆ ದುಸ್ಥಿತಿ: ಪೌರಾಯುಕ್ತಗೆ ತರಾಟೆ
‘ನಗರಕ್ಕೆ ಹೊಂದಿಕೊಂಡಿರುವ ಶೆಟ್ಟಿಹಳ್ಳಿ ಕೆರೆಯನ್ನು ಸ್ವಚ್ಛ ಮತ್ತು ಸುಂದರವಾಗಿಡಲಾಗದ ನಿಮಗೆ ಏನ್ರಿ ದೊಡ್ಡರೋಗ ಬಂದಿರೋದು. ಕೆರೆಗೆ ತ್ಯಾಜ್ಯ ನೀರು ಬಿಡುವ ಜೊತೆಗೆ ಕಸ ತಂದು ಸುರಿಯುತ್ತಿದ್ದೀರಿ. ಕೆರೆ ಒತ್ತುವರಿ ತೆರವಿಗೆ ಏನು ಕ್ರಮ ಕೈಗೊಂಡಿದ್ದೀರಿ? ಸುಮಾರು ಎರಡೂವರೆ ಎಕರೆ ಒತ್ತುವರಿಯಾಗಿದ್ದರೂ ಸುಮ್ಮನಿದ್ದೀರಿ. ಒತ್ತುವರಿದಾರರಿಗೆ ಖಾತೆ ಮಾಡಿಕೊಟ್ಟಿದ್ದೀರಿ’ ಎಂದು ನಗರಸಭೆ ಪೌರಾಯುಕ್ತ ಮಹೇಂದ್ರ ಅವರನ್ನು ನ್ಯಾ. ಫಣೀಂದ್ರ ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಸ್ಥಳೀಯರು ನಗರಸಭೆಯವರೇ ಕೆರೆಯನ್ನು ಮುಚ್ಚಿದ್ದಾರೆ ಎಂದು ದೂರಿದರು. ಆಗ ಮತ್ತಷ್ಟು ಕೆಂಡಾಮಂಡಲವಾದ ಉಪ ಲೋಕಾಯುಕ್ತ ‘ಎರಡು ತಿಂಗಳೊಳಗೆ ಒತ್ತುವರಿ ತೆರವು ಸ್ವಚ್ಛತೆಗೆ ಕ್ರಮ ಕೈಗೊಂಡು ಕೆರೆಯನ್ನು ಸುಸ್ಥಿತಿಗೆ ತನ್ನಿ. ಇಲ್ಲದಿದ್ದರೆ ಕ್ರಮ ಎದುರಿಸಲು ಸಿದ್ದರಾಗಿರಿ’ ಎಂದು ಎಚ್ಚರಿಕೆ ನೀಡಿದರು. ಒತ್ತುವರಿ ಕೆರೆಯೊಡಲಿಗೆ ತ್ಯಾಜ್ಯ ತಂದು ಸುರಿಯುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕೂಪವಾಗಿರುವ ಶೆಟ್ಟಿಹಳ್ಳಿ ಕೆರೆ ದುಸ್ಥಿತಿ ಕುರಿತು ‘ಪ್ರಜಾವಾಣಿ’ಯು ಜುಲೈ 1ರಂದು ವಿಶೇಷ ವರದಿ ಪ್ರಕಟಿಸಿತ್ತು.