ಬುಧವಾರ, ಜನವರಿ 22, 2020
25 °C
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

ಬೆಳೆಹಾನಿ ಪರಿಹಾರ: ಪರಿಶೀಲನೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಪ್ರಸಕ್ತ ಸಾಲಿನಲ್ಲಿ ಹೆಚ್ಚು ಮಳೆಯಿಂದ ಉಂಟಾಗಿರುವ ಮನೆ ಹಾನಿ ಹಾಗೂ ಬೆಳೆ ಹಾನಿಗಳಿಗೆ ಪರಿಹಾರವನ್ನು ವಿತರಿಸಲಾಗಿದೆ. ವಿತರಣೆಯ ಬಗ್ಗೆ ತಹಶೀಲ್ದಾರ್ ಗಳು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಹೇಳಿದರು.

ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಗಳನ್ನು ಖಜಾನೆ ತಂತ್ರಾಂಶದ ಮೂಲಕ ಪಾವತಿಸಲಾಗುತ್ತಿದೆ. ಇದರಲ್ಲಿ ಉಂಟಾಗುತ್ತಿರುವ ಗೊಂದಲಗಳನ್ನು ಸರಿಪಡಿಸಲು ಅಧಿಕಾರಿಗಳು ವಾಟ್ಸ್ ಆ್ಯಪ್ ಗುಂಪು ರಚಿಸಿಕೊಂಡು ಆಗಿಂದಾಗಲೇ ಪರಿಹರಿಸಿಕೊಳ್ಳಿ ಎಂದು ತಿಳಿಸಿದರು.

ಬಿಡದಿ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಅವಶ್ಯಕತೆ ಇದ್ದು, ಒಂದು ದಿನ ಸ್ವಚ್ಛತಾ ಆಂದೋಲನ ನಡೆಸಬೇಕು. ನಗರ ಸ್ಥಳೀಯ ಸಂಸ್ಥೆ ವತಿಯಿಂದ ಬಿಡದಿಯಲ್ಲಿ ಸಮೂಹ ಶೌಚಾಲಯ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ. ಮಾಯಣ್ಣಗೌಡ ಮಾತನಾಡಿ, ಸಿಎಂಎಸ್ ಎಂಟಿಡಿಪಿ ಹಂತ-3 ರಡಿ 106 ಕಾಮಗಾರಿಗಳು ಮಂಜೂರಾಗಿದ್ದು 27 ಕಾಮಗಾರಿಗಳು ಪೂರ್ಣಗೊಂಡಿದೆ, 78 ಪ್ರಗತಿಯಲ್ಲಿದೆ. 14 ನೇ ಹಣಕಾಸು ಯೋಜನೆಯಡಿ 967 ಕಾಮಗಾರಿಗಳು ಮಂಜೂರಾಗಿದ್ದು, 740 ಪೂರ್ಣಗೊಂಡಿದೆ. 135 ವಾರ್ಡ್ ಗಳಲ್ಲಿ ಮನೆ ಮನೆಗೆ ತೆರಳಿ ಘನ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ ಪ್ರಗತಿ ಕಾಲೊನಿ ಯೋಜನೆಯಡಿ 51 ಪರಿಶಿಷ್ಟ ಜಾತಿ ಕಾಲೊನಿಗಳಲ್ಲಿ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ₨18.35 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಗಳಿಗೆ ಕೆ.ಆರ್.ಐ.ಡಿ.ಎಲ್ ನಿರ್ಮಾಣ ಏಜೆನ್ಸಿಯಾಗಿದ್ದು, ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಮೂರನೇ ವ್ಯಕ್ತಿ ತಪಾಸಣೆಯಾದ ನಂತರ ಹಣವನ್ನು ಏಜೆನ್ಸಿ ಅವರಿಗೆ ಪಾವತಿಸಲಾಗುವುದು ಎಂದು ತಿಳಿಸಿದರು.
ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರು ಮಾತನಾಡಿ ಭೂ ಮಾಪಕರಿಂದ ಹದ್ದುಬಸ್ತು, ಇ–-ಸ್ವತ್ತು, ದರಕಾಸ್ತು ಪ್ರಕರಣ, ವಿಲೇವಾರಿಯ ಬಗ್ಗೆ, ಪೋಡಿಮುಕ್ತ ಗ್ರಾಮ ಅಭಿಯಾನ, ಮೋಜಿನಿ, ಆರ್.ಟಿ.ಸಿ. ತಿದ್ದುಪಡಿ ಪ್ರಗತಿಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್, ಉಪವಿಭಾಗಾಧಿಕಾರಿ ಡಾ. ದಾಕ್ಷಾಯಿಣಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು