ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಜಾಗ್ರತೆ ಕೈಗೊಳ್ಳದವರ ವಿರುದ್ಧ ಕ್ರಮ

ಮುಂಗಾರು ಪೂರ್ವಸಿದ್ಧತೆ, ಬರಗಾಲ ನಿವಾರಣೆ ಕುರಿತ ಸಭೆಯಲ್ಲಿ ಉಸ್ತುವಾರಿ ಕಾರ್ಯದರ್ಶಿ ಎಚ್ಚರಿಕೆ
Published 12 ಜೂನ್ 2024, 6:34 IST
Last Updated 12 ಜೂನ್ 2024, 6:34 IST
ಅಕ್ಷರ ಗಾತ್ರ

ರಾಮನಗರ: ‘ಜಿಲ್ಲೆಯಲ್ಲಿ ಮಳೆಯಿಂದಾಗಿ ಸಂಭವಿಸಬಹುದಾದ ಪ್ರವಾಹ ತಡೆಗಟ್ಟಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮುಂಗಾರು ಪೂರ್ವಸಿದ್ದತೆ ಹಾಗೂ ಬರಗಾಲ ನಿವಾರಣೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ‘ಹವಾಮಾನ ಇಲಾಖೆ ವರದಿಯಂತೆ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಸಂಭವವಿದೆ. ಜೂನ್ ಮತ್ತು ಜುಲೈನಲ್ಲಿ ಮುಂಗಾರು ಮಳೆಯಾಗಲಿದ್ದು, ಆಗ ಎದುರಾಗಬಹುದಾದ ಪ್ರವಾಹದ ಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಿರಬೇಕು’ ಎಂದರು.

‘ಮಳೆಗಾಲದ ಸಂದರ್ಭದಲ್ಲಿ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿಯೇ ಇರಬೇಕು. ಕಳೆದ ಬಾರಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಸ್ಥಳಗಳ ಬಗ್ಗೆ ಎಚ್ಚರ ವಹಿಸಬೇಕು. ಜನ, ಜಾನುವಾರುಗಳ ಸಂರಕ್ಷಣೆ ಹಾಗೂ ಯಾವುದೇ ಜೀವ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು. ನೆರೆಯಿಂದಾಗಿ ಮನೆಗಳು ಕುಸಿದರೆ ಕೂಡಲೇ ಅವರನ್ನು ಸ್ಥಳಾಂತರಿಸಿ, ಪರಿಹಾರ ನೀಡಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯ ತಿಪ್ಪಗೊಂಡನಹಳ್ಳಿ ಸುತ್ತಮುತ್ತಲು ಭಾರಿ ಮಳೆಯಾಗುತ್ತಿರುವುದರಿಂದ ಆ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದೆ. ಅಲ್ಲಿಂದ ನೀರು ಬಿಡುಗಡೆ ಮಾಡಿದರೆ, ಮಂಚನಬೆಲೆ ಜಲಾಶಯಕ್ಕೆ ಬರುತ್ತದೆ.ಆಗ ಮಂಚನಬೆಲೆ ಜಲಾಶಯದ ಸುತ್ತಮತ್ತಲಿನ ಪ್ರದೇಶದ ಜನರು ಪ್ರವಾಹದ ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ, ಜಲಾಶಯದ ಸುತ್ತಮುತ್ತಲ ಪ್ರದೇಶದ ಜನರಿಗೆ ಮುನ್ನೆಚ್ಚರಿಕೆ ನೀಡಬೇಕು’ ಎಂದು ಸಲಹೆ ನೀಡಿದರು.

‘ತುರ್ತು ಸಂದರ್ಭಗಳನ್ನು ನಿಭಾಯಿಸಲು ಅಗ್ನಿಶಾಮಕ ಇಲಾಖೆಯ ನುರಿತ ತಜ್ಞರು ಇದುವರೆಗೆ ಇದೂವರೆಗೆ 280 ಜನರಿಗೆ ನೆರೆ ಹಾವಳಿ ಕುರಿತ ತರಬೇತಿ ನೀಡಿದ್ದಾರೆ. ನೆರೆ ಅಥವಾ ಇತರ ಪ್ರಾಕೃತಿಕ ವಿಕೋಪ ಸ್ಥಿತಿಗಳನ್ನು ಎದುರಿಸಲು ಅಗ್ನಿಶಾಮಕ ಇಲಾಖೆಯವರು ಅಗತ್ಯವಿರುವ ಪರಿಕರಗಳೊಂದಿಗೆ ಸನ್ನದ್ದರಾಗಿರಬೇಕು’ ಎಂದು ತಿಳಿಸಿದರು.

ನೀರು ಪೂರೈಕೆಗೆ ಸೂಚನೆ: ‘ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ 2023ರ ಡಿಸೆಂಬರ್‌ನಿಂದ ಇದುವರೆಗೆ ₹1.89 ಕೋಟಿ ವೆಚ್ಚ ಮಾಡಲಾಗಿದೆ. ನೀರು ಸರಬರಾಜು ಮಾಡಲು ಪೈಪ್‌ಲೈನ್‌ಗಳು ಸಮರ್ಪಕವಾಗಿರುವ ಬಗ್ಗೆ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ದುರಸ್ತಿ ಮಾಡಿಸಬೇಕು. ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

‘ಮಾಗಡಿ ತಾಲ್ಲೂಕು ತಿಪ್ಪಸಂದ್ರ ಗ್ರಾಮದಲ್ಲಿ ಮೇವು ಸಂಸ್ಕರಣಾ ಘಟಕ ಸ್ಥಾಪಿಸಿ 34 ಸಾವಿರ ಕೆ.ಜಿ ಮೇವು ವಿತರಿಸಲಾಗಿದೆ. ಕನಕಪುರ ತಾಲ್ಲೂಕು ಹೆಗ್ಗನೂರು ಗ್ರಾಮದಲ್ಲಿ ಗೋಶಾಲೆಯನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 21,919 ದೊಡ್ಡ ಮೇವು ಕಿಟ್ ವಿತರಣೆ ಮತ್ತು 16,995 ಸಣ್ಣ ಮೇವು ಕಿಟ್ ವಿತರಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ ನಿರ್ವಾಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಉಪ ಕಾರ್ಯದರ್ಶಿ ರಾಘವೇಂದ್ರ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ಬಿತ್ತನೆ ಬೀಜ ದಾಸ್ತಾನು ಮಾಹಿತಿ ಪ್ರದರ್ಶಿಸಿ’

‘ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು. ರೈತರ ಕೋರಿಕೆಯಂತೆ ಬೀಜಗಳ ಗುಣಮಟ್ಟವನ್ನು ಪರೀಕ್ಷಿಸಿ ಪೂರೈಸಬೇಕು. ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ಇಟ್ಟುಕೊಳ್ಳಬೇಕು. ಈ ಕುರಿತು ರೈತರಿಂದ ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ಬೀಜಗಳ ದಾಸ್ತಾನು ಮಾಹಿತಿಯನ್ನು ಕಡ್ಡಾಯವಾಗಿ ರೈತರಿಗೆ ನೀಡಬೇಕು. ಅಲ್ಲದೆ ಅಂಗಡಿಗಳ ಮುಂಭಾಗದಲ್ಲಿ ಪ್ರತಿದಿನ ಪ್ರದರ್ಶಿಸಬೇಕು. ಈ ಮಾಹಿತಿಯನ್ನು ತಹಶೀಲ್ದಾರರು ಪರಿಶೀಲಿಸಬೇಕು’ ಎಂದು ರಶ್ಮಿ ಅವರು ಸೂಚಿಸಿದರು. ‘ಪ್ರಸ್ತುತ ತೊಗರಿ 31.70 ಅಲಸಂದೆ 36.75 ರಾಗಿ 315.35 ಮುಸುಕಿನ ಜೋಳ 50.28 ಮತ್ತು ನೆಲಗಡಲೆ 3.85 ಕ್ವಿಂಟಲ್ ಬಿತ್ತನೆ ಬೀಜಗಳು ದಾಸ್ತಾನಿದೆ. ಜಿಲ್ಲೆಯಲ್ಲಿ ಇದುವರೆಗೆ ಭಾರಿ ಗಾಳಿ ಮತ್ತು ಮಳೆಯಿಂದ ತೆಂಗು ಪಪ್ಪಾಯ ಬಾಳೆ ಅಡಿಕೆ ಮತ್ತು ವಿಳ್ಯದೆಲೆ ಬೆಳೆಯ 52.60 ಎಕರೆಯಷ್ಟು ಹಾನಿಯಾಗಿದೆ. 41 ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದ್ದು ಯಾವುದೇ ಜೀವಹಾನಿಯಾಗಿರುವ ವರದಿಯಾಗಿಲ್ಲ’ ಎಂದರು.

ಮಾಧ್ಯಮದವರಿಗಿಲ್ಲ ಪ್ರವೇಶ

ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಮುಂಗಾರು ಪೂರ್ವಸಿದ್ದತೆ ಹಾಗೂ ಬರಗಾಲ ನಿವಾರಣೆಯ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಇದೇ ಕಾರಣಕ್ಕೆ ಸಭೆ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು ಮಾಧ್ಯಮದವರಿಗೆ ಮಾಹಿತಿ ಕೂಡ ನೀಡಿರಲಿಲ್ಲ. ‘ಸಭೆಗೆ ಮಾಧ್ಯಮದವರನ್ನು ಆಹ್ವಾನಿಸಬೇಡಿ ಎಂದು ಉಸ್ತುವಾರಿ ಕಾರ್ಯದರ್ಶಿಯೇ ಹೇಳಿದರು. ಹಾಗಾಗಿ ನಾವು ಮಾಹಿತಿ ನೀಡಲಿಲ್ಲ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT