ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ, ಲೇಖಕ, ಸಮಾಜ ಸೇವೆಗೆ ಸಂದ ಗೌರವ

ಚನ್ನಪಟ್ಟಣದ ಸಿ.ಆರ್. ಚಂದ್ರಶೇಖರ್ ಗೆ ಪದ್ಮಶ್ರೀ ಪ್ರಶಸ್ತಿ
ಎಚ್.ಎಂ.ರಮೇಶ್
Published 28 ಜನವರಿ 2024, 5:06 IST
Last Updated 28 ಜನವರಿ 2024, 5:06 IST
ಅಕ್ಷರ ಗಾತ್ರ

ಚನ್ನಪಟ್ಟಣ: ಚನ್ನಪಟ್ಟಣದ ಕುವೆಂಪುನಗರದ ಮನಃಶಾಸ್ತ್ರಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು, ತಾಲ್ಲೂಕಿನೆಲ್ಲೆಡೆ ಹರ್ಷ ವ್ಯಕ್ತವಾಗಿದೆ.

ಚನ್ನಪಟ್ಟಣ ರಾಜಾಣ್ಣಾಚಾರ್ ಚಂದ್ರಶೇಖರ್ (ಸಿ.ಆರ್.ಚಂದ್ರಶೇಖರ್) ಅವರು ನಗರದ ಕುವೆಂಪುನಗರದ ಮೂರನೇ ಅಡ್ಡರಸ್ತೆ ಎಸ್.ಪಿ.ಸರೋಜಮ್ಮ, ಬಿ.ಎಂ.ರಾಜಣ್ಣಾಚಾರ್ ದಂಪತಿ ಪುತ್ರ. ಇವರು ವೈದ್ಯರಾಗಿ, ಲೇಖಕರಾಗಿ, ಸಮಾಜಸೇವಕರಾಗಿ ಸಲ್ಲಿಸಿದ ಸೇವೆಯನ್ನು ಗುರ್ತಿಸಿ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ನೀಡಿದೆ. ಇದರೊಂದಿಗೆ ಚನ್ನಪಟ್ಟಣದ ಕೀರ್ತಿ ಹೆಚ್ಚಿಸಿದ್ದಾರೆ.

1948ರಲ್ಲಿ ಜನಿಸಿದ ಚಂದ್ರಶೇಖರ್, ನಗರದ ಪೆಟ್ಟಾ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ (ಜಿಕೆಬಿಎಂಎಸ್) ಮಾಧ್ಯಮಿಕ ಶಿಕ್ಷಣವನ್ನು, ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಪಡೆದಿದ್ದಾರೆ. 1964ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಕೀರ್ತಿ ಇವರದ್ದು.

ನಂತರ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿ, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದು ಮನಃಶಾಸ್ತ್ರ ವಿಭಾಗದಲ್ಲಿ ಎಂ.ಡಿ ಮುಗಿಸಿ, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮನೋರೋಗ ತಜ್ಞರಾಗಿ, ಹಿರಿಯ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ಅಲ್ಲಿಯೇ ನಿವೃತ್ತರಾಗಿದ್ದಾರೆ.

ಚನ್ನಪಟ್ಟಣದಲ್ಲಿ ಮೊಟ್ಟಮೊದಲ ಮುದ್ರಣಾಲಯ ಸ್ಥಾಪಿಸಿದ್ದ ರಾಜಾಣ್ಣಾಚಾರಿ ಪುತ್ರರಾದ ಚಂದ್ರಶೇಖರ್, ಬಾಲ್ಯದಿಂದಲೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದರು. ಹಲವು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಮಾನಸಿಕ ಆರೋಗ್ಯ, ಲೈಂಗಿಕ ವಿಚಾರ, ವೈಚಾರಿಕ ಸಾಹಿತ್ಯ, ಕವನ ಸಂಕಲನ, ಸಣ್ಣಕತೆ, ಕಾದಂಬರಿ, ಅನುವಾದ ಸಾಹಿತ್ಯ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಕನ್ನಡ ಹಾಗೂ ಆಂಗ್ಲಭಾಷೆಗಳಲ್ಲಿ ಪುಸ್ತಕ ಪ್ರಕಟಿಸಿರುವುದು ಇವರ ಹೆಗ್ಗಳಿಕೆ.

ಮನೋಬಲ, ಸ್ಕಿಜೋಫ್ರೀನಿಯಾ, ಕಷ್ಟ ಮನಸ್ಸಿಗೆ ಕಾಯಿಲೆ ದೇಹಕ್ಕೆ, ಆತಂಕ, ಖಿನ್ನತೆ ಮತ್ತು ಗೀಳು ಮನೋರೋಗ, ಮನಸ್ಸು ನೂರೆಂಟು ಪ್ರಶ್ನೆಗಳು, ದೇವರು ದೆವ್ವ ಇರುವುದೇ? ಮೈಮೇಲೆ ಬರುವುದೇ?, ದಾಂಪತ್ಯ ಸಮಸ್ಯೆ, ಜ್ಞಾಪಕ ಶಕ್ತಿ ವೃದ್ಧಿ ಹೇಗೆ? ಮನೋರೋಗಕ್ಕೆ ಚಿಕಿತ್ಸೆ ಏನು?, ಹದಿಹರೆಯದ ಮಾನಸಿಕ ಸಮಸ್ಯೆಗಳು, ವೃದ್ಧರ ಮನಸ್ಸು ಹೀಗೇಕೆ, ಮುಂತಾದವು ಇವರ ಕನ್ನಡದ ಪ್ರಮುಖ ಕೃತಿಗಳು.

ನೊ ಯುವರ್ ಚೈಲ್ಡ್ ಮೈಂಡ್, ಯು ಟೂ ಕ್ಯಾನ್ ದಿ ಆರ್ಟ್ ಆಫ್ ಕೌನ್ಸಲಿಂಗ್, ಮ್ಯಾನೇಜ್ ಯುವರ್ ಎಮೋಷನ್ಸ್ ಅಂಡ್ ಇಂಪ್ರೂ ಯುವರ್ ಹೆಲ್ತ್, ಮೆಂಟಲ್ ಹೆಲ್ತ್ ಪ್ರಾಬ್ಲಮ್ಸ್ ಆಫ್ ಉಮೆನ್ ಇವರ ಆಂಗ್ಲ ಕೃತಿಗಳು.

ಸದ್ಯ ನಿವೃತ್ತ ಜೀವನ ನಡೆಸುತ್ತಿರುವ ಚಂದ್ರಶೇಖರ್, ನಿವೃತ್ತಿ ಜೀವನದಲ್ಲಿಯೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಮೂಢನಂಬಿಕೆ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆಗೆ ₹1.20 ಕೋಟಿ ನೀಡಿ ಅಲ್ಲಿಯ ರೋಗಿಗಳಿಗೆ ಸೌಲಭ್ಯ ಕಲ್ಪಿಸಿದ್ದಾರೆ. ಬೆಂಗಳೂರು ಅರಕೆರೆ ಮೈಕೊ ಲೇಔಟ್ ನಲ್ಲಿ ಸಮಾಧಾನ ಮನೋವೈದ್ಯಕೀಯ ಕೇಂದ್ರ ತೆರೆದಿರುವ ಚಂದ್ರಶೇಖರ್, ಮಾನಸಿಕ ರೋಗ ಹಾಗೂ ಖಿನ್ನತೆಯಿಂದ ಬಳಲುತ್ತಿರುವ ಮಂದಿಗೆ ಉಚಿತವಾಗಿ ವೈದ್ಯಕೀಯ ಸಲಹೆ ನೀಡುತ್ತಿದ್ದಾರೆ.

ಚಂದ್ರಶೇಖರ್ ಅವರ ವೈದ್ಯಕೀಯ, ಸಾಹಿತ್ಯ ಹಾಗೂ ಸಮಾಜಸೇವೆ ಗುರ್ತಿಸಿ ಕೇಂದ್ರ ಸರ್ಕಾರ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಇದು ತಾಲ್ಲೂಕಿನ ಕೀರ್ತಿ ಹೆಚ್ಚಿಸಿದೆ. ಅವರನ್ನು ಅವರ ಅಭಿಮಾನಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ಜವಾಬ್ದಾರಿ ಹೆಚ್ಚಿಸಿದೆ ‘ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಸಂತಸ ನೀಡಿದೆ. ಮನೋ ವೈದ್ಯಕೀಯ ಕ್ಷೇತ್ರದಲ್ಲಿ ನನ್ನ ಸೇವೆಯನ್ನು ಗುರ್ತಿಸಿ ಈ ಪ್ರಶಸ್ತಿ ನೀಡಿರುವುದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಾಮಾಣಿಕ ಸೇವೆ ಮಾಡುವ ಗುರಿ ಹೊಂದಿದ್ದೇನೆ.’ ಸಿ.ಆರ್. ಚಂದ್ರಶೇಖರ್ ಪದ್ಮಶ್ರೀ ಪ್ರಶಸ್ತಿ ವಿಜೇತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT