ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಶತಮಾನದ ಹೊಸ್ತಿಲಲ್ಲಿರುವ ಶಾಲೆಗೆ ಹೈಟೆಕ್ ಸ್ಪರ್ಶ

ದೊಡ್ಡಗಂಗವಾಡಿ ಸರ್ಕಾರಿ ಶಾಲೆಗೆ ಹೊಸ ಸ್ವರೂಪ; ಖಾಸಗಿ ಶಾಲೆ ಮೀರಿಸುವ ಸೌಕರ್ಯಕ್ಕೆ ಮನಸೋತ ಮಕ್ಕಳು
Published 11 ಡಿಸೆಂಬರ್ 2023, 5:01 IST
Last Updated 11 ಡಿಸೆಂಬರ್ 2023, 5:01 IST
ಅಕ್ಷರ ಗಾತ್ರ

ರಾಮನಗರ: ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಶಾಲೆ ಎಂದ ತಕ್ಷಣ ಕಣ್ಣೆದುರಿಗೆ ಬರುವ ಚಿತ್ರವೇ ಬೇರೆ. ಸುಣ್ಣ–ಬಣ್ಣ ಕಾಣದೆ ವರ್ಷಗಳಷ್ಟು ಹಳೆಯದಾದ ಕಟ್ಟಡ, ಕಲಿಕಾ ಸಾಮರ್ಥ್ಯಗಳ ಬರದಲ್ಲೇ ಪಾಠ ಮಾಡುವ ಶಿಕ್ಷಕರು, ಬೆರಳೆಣಿಕೆಯ ಮಕ್ಕಳು, ಇದ್ದೂ ಇಲ್ಲದಂತಿರುವ ಕಾಂಪೌಂಡ್... ಹೀಗೆ ಹಲವು ಆಲೋಚನೆಗಳು ಮನಸ್ಸಿನಲ್ಲಿ ಮೂಡುವುದುಂಟು.

ಇದೇ ಕಾರಣಕ್ಕಾಗಿ ಹಲವು ಪೋಷಕರು ತಮಗೆ ಅಕ್ಷರ ಕಲಿಸಿ, ತಮ್ಮೂರಿನ ಸರ್ಕಾರಿ ಶಾಲೆಗಳನ್ನು ಕಡೆಗಣಿಸುವುದುಂಟು. ‘ಮಕ್ಕಳು ನಮ್ಮಂತಾಗದಿರಲಿ’ ಎಂದುಕೊಂಡು ದುಬಾರಿ ಶುಲ್ಕ ಪಾವತಿಸಿ ಖಾಸಗಿ ಶಾಲೆಗಳಿಗೆ ಸೇರಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇದರಿಂದಾಗಿಯೇ, ಗ್ರಾಮೀಣ ಭಾಗದಲ್ಲಿ ಒಂದು ಕಡೆ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದರೆ, ಮತ್ತೊಂದೆಡೆ ಖಾಸಗಿ ಶಾಲೆಗಳು ತಲೆ ಎತ್ತುತ್ತಿವೆ.

ಇಂತಹ ಬೆಳವಣಿಗೆಯ ನಡುವೆ ತಾಲ್ಲೂಕಿನ ದೊಡ್ಡಗಂಗವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು, ಖಾಸಗಿ ಶಾಲೆ ಮೀರಿಸುವಂತೆ ಗಮನ ಸೆಳೆಯುತ್ತಿದೆ. ‘ಇದು ನಮ್ಮೂರು ಶಾಲೆಯೇ’ ಎಂದು ಬೆರಗು ಕಣ್ಣುಗಳಿಂದ ಗ್ರಾಮಸ್ಥರೇ ಹುಬ್ಬೇರಿಸುವಂತೆ ಅಭಿವೃದ್ಧಿ ಕಂಡಿದೆ. ಶತಮಾನದ ಅಂಚಿನಲ್ಲಿರುವ 110 ಮಕ್ಕಳಿರುವ ಈ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿರುವುದು ಬೆಂಗಳೂರಿನ ಹೂವಿನಹೊಳೆ ಪ್ರತಿಷ್ಠಾನ.

₹18 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ:

‘ಹಳೆಯ ಸರ್ಕಾರಿ ಶಾಲೆಗಳನ್ನು ಗುರುತಿಸಿ ಅವುಗಳಿಗೆ ಹೊಸ ರೂಪ ಕೊಡುವ ಕೆಲಸವನ್ನು ಹೂವಿನಹೊಳೆ ಪ್ರತಿಷ್ಠಾನ ಮಾಡುತ್ತಾ ಬರುತ್ತಿದೆ. ಅದರಂತೆ, ದೊಡ್ಡಗಂಗವಾಡಿ ಶಾಲೆಯನ್ನು ಸುಮಾರು ₹18 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ನಂದಿ ಜೆ. ಹೂವಿನಹೊಳೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿಷ್ಠಾನದ ಈ ಕಳಕಳಿಯ ಕಾರ್ಯಕ್ಕೆ ಬೆಂಗಳೂರಿನ ಐ.ಟಿ ಕಂಪನಿ ಟೆಕ್ ಸಿಸ್ಟಮ್ಸ್ ಗ್ಲೋಬಲ್ ಸರ್ವೀಸಸ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ₹15 ಲಕ್ಷ ನೆರವು ನೀಡಿತು. ಉಳಿದ ಮೊತ್ತವನ್ನು ಪ್ರತಿಷ್ಠಾನ ಭರಿಸಿತು. ಇದೇ ಕಂಪನಿಯಲ್ಲಿ ಕೆಲಸ ಮಾಡುವ ಗ್ರಾಮದ ಲೋಕೇಶ್ ಎಂಬುವರ ಮನವಿ ಮೇರೆಗೆ, ಶಾಲೆಗೆ ಹೊಸ ಸ್ಪರ್ಶ ನೀಡಿದ್ದೇವೆ’ ಎಂದು ಹೇಳಿದರು.

2 ತಿಂಗಳ ಶ್ರಮ:

‘ಶಾಲಾ ಕಟ್ಟಡದ ದುರಸ್ತಿ, ಬಣ್ಣ ಬಳಿಯುವಿಕೆ, ಗೋಡೆಗಳಲ್ಲಿ ಆಕರ್ಷಕ ಬಣ್ಣಗಳ ಚಿತ್ತಾರದ ಕೆಲಸ ಸೇರಿದಂತೆ ಒಟ್ಟಾರೆ ಅಭಿವೃದ್ಧಿ ಕೆಲಸವು ಪೂರ್ಣಗೊಳ್ಳಲು 2 ತಿಂಗಳು ಬೇಕಾಯಿತು. ಪ್ರತಿಷ್ಠಾನದ ಸುಮಾರು 200 ಸ್ವಯಂಸೇವಕರು ಇದಕ್ಕಾಗಿ, ಹಗಲಿರುಳು ಕೆಲಸ ಮಾಡಿದ್ದಾರೆ’ ಎಂದು ನೆನೆದರು.

‘ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕೊಠಡಿ ಕೆಡವಿದ್ದೇವೆ. ಶಾಲಾವರಣದಲ್ಲಿ ಸುಂದರ ಉದ್ಯಾನ ನಿರ್ಮಿಸಿ, ಸುತ್ತಲೂ ಗ್ರಿಲ್ ಅಳವಡಿಸಿದ್ದೇವೆ. ಗಂಡು ಮತ್ತು ಹೆಣ್ಣು ಮಕ್ಕಳ ಎರಡೂ ಶೌಚಾಲಯಗಳಿಗೆ ಹೊಸ ರೂಪ ನೀಡುವ ಜೊತೆಗೆ, ಮಕ್ಕಳು ಕೈ ತೊಳೆಯುವುದಕ್ಕಾಗಿ ಎರಡು ಕಡೆ ವಾಷ್ ಬೇಸಿನ್ ನಿರ್ಮಿಸಿದ್ದೇವೆ. ಅರ್ಧಂಬರ್ಧ ನಿರ್ಮಾಣವಾಗಿದ್ದ ಶಾಲೆಯ ಕಾಂಪೌಂಡ್ (400 ಅಡಿ) ಪೂರ್ಣಗೊಳಿಸಿದ್ದೇವೆ. ಮಳೆ ನೀರು ಸೋರದಂತೆ ಎಲ್ಲಾ ಕೊಠಡಿಗಳ ಚಾವಣಿಯನ್ನು ದುರಸ್ತಿ ಮಾಡಿದ್ದೇವೆ’ ಎಂದು ತಮ್ಮ ಕಾರ್ಯಗಳ ಕುರಿತು ವಿವರಿಸಿದರು.

ಹೊಸ ದ್ವಾರ, ನಾಮಫಲಕ:

‘ಶಾಲೆಯ ಸ್ಥಳ ದಾನಿಗಳ ಸ್ಮರಣಾರ್ಥ ಇದ್ದ ಹಳೆ ಸಭಾಂಗಣವನ್ನು ಅಭಿವೃದ್ಧಿಪಡಿಸಿ, ಸುಮಾರು 500 ಜನರ ಸಾಮರ್ಥ್ಯಕ್ಕೆ ಏರಿಸಿದ್ದೇವೆ. ಸಭಾಂಗಣಕ್ಕೆ ದಾನಿಗಳಾದ ಟಿ. ಕರಿಯಪ್ಪ - ಹನುಮಯ್ಯ ಹೆಸರನ್ನು ನಾಮಕರಣ ಮಾಡಿದ್ದೇವೆ. ಬಾಗಿಲು ಮತ್ತು ಕಿಟಕಿಗಳನ್ನು ಸಹ ದುರಸ್ತಿ ಮಾಡಿದ್ದು, ಹಳೆಯ ಪೀಠೋಪಕರಣಗಳನ್ನು ಬದಲಿಸಿದ್ದೇವೆ. ಶಾಲೆಗೆ ಹೊಸ ದ್ವಾರ ನಿರ್ಮಿಸಿ, ನಾಮಫಲಕ ಅಳವಡಿಸಿದ್ದೇವೆ. ಶಾಲೆಯಲ್ಲಿರುವ ನಾಲ್ವರು ಶಿಕ್ಷಕರಿಗೆ ಹೊಸ ಮೇಜು ಮತ್ತು ಕುರ್ಚಿ ಒದಗಿಸಿದ್ದೇವೆ’ ಎಂದು ನಂದಿ ಅವರು ತಿಳಿಸಿದರು.

‘ಶಾಲೆಯಲ್ಲಿ 12 ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ತರಗತಿಗಳಿಗೆ ಗ್ರೀನ್ ಬೋರ್ಡ್ ಹಾಕಿದ್ದು, ಮಕ್ಕಳು ಕೂರುವುದಕ್ಕಾಗಿ 10 ಡೆಸ್ಕ್ ಕೊಟ್ಟಿದ್ದೇವೆ. ಕ್ರೀಡಾ ಚಟುವಟಿಕೆಗೆ ಪೂರಕವಾಗಿ ವಿವಿಧ ಉಪಕರಣಗಳ ಜೊತೆಗೆ, ಟ್ರ್ಯಾಕ್ ಸ್ಯೂಟ್ ಮತ್ತು ಸಮವಸ್ತ್ರ ವಿತರಿಸಿದ್ದೇವೆ. ಶಾಲೆಯ ಹೊರಗೆ ಮತ್ತು ತರಗತಿಗಳೊಳಗೆ ಚಿತ್ರ ಕಲಾವಿದರಾದ ಬೆಳ್ತಂಗಡಿಯ ಧನುಷ್ ಕುಮಾರ್ ಹೆಗ್ಡೆ ಮತ್ತು ಚಿಕ್ಕಬಳ್ಳಾಪುರದ ರವಿಕುಮಾರ್ ಅವರು ಅತ್ಯಾಕರ್ಷಕ ಚಿತ್ರಗಳನ್ನು ಬಿಡಿಸಿ ಮಕ್ಕಳಲ್ಲಿ ಕಲಿಕೆಗೆ ಮತ್ತಷ್ಟು ಪ್ರೇರಣೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ರಾಮನಗರ ತಾಲ್ಲೂಕಿನ ದೊಡ್ಡಗಂಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿ–ಕಲಿ ತರಗತಿ ಕೊಠಡಿ
ರಾಮನಗರ ತಾಲ್ಲೂಕಿನ ದೊಡ್ಡಗಂಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿ–ಕಲಿ ತರಗತಿ ಕೊಠಡಿ
ರಾಮನಗರ ತಾಲ್ಲೂಕಿನ ದೊಡ್ಡಗಂಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಕಂಪ್ಯೂಟರ್ ಲ್ಯಾಬ್
ರಾಮನಗರ ತಾಲ್ಲೂಕಿನ ದೊಡ್ಡಗಂಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಕಂಪ್ಯೂಟರ್ ಲ್ಯಾಬ್
ರಾಮನಗರ ತಾಲ್ಲೂಕಿನ ದೊಡ್ಡಗಂಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ರಾಮನಗರ ತಾಲ್ಲೂಕಿನ ದೊಡ್ಡಗಂಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ರಾಮನಗರ ತಾಲ್ಲೂಕಿನ ದೊಡ್ಡಗಂಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಸಜ್ಜಿತ ಸಭಾಂಗಣ
ರಾಮನಗರ ತಾಲ್ಲೂಕಿನ ದೊಡ್ಡಗಂಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಸಜ್ಜಿತ ಸಭಾಂಗಣ

ಶಾಲೆಯಲ್ಲಿರುವ ಸೌಲಭ್ಯಗಳು

  • 4 ಕಂಪ್ಯೂಟರ್‌ಗಳನ್ನು ಹೊಂದಿರುವ ಕಂಪ್ಯೂಟರ್ ಲ್ಯಾಬ್

  • ಆನ್‌ಲೈನ್ ತರಗತಿಗಳ ವೀಕ್ಷಣೆಗೆ 50 ಇಂಚಿನ ಸ್ಮಾರ್ಟ್ ಟಿ.ವಿ

  • ಶಾಲೆಯಲ್ಲಿರುವ 8 ತರಗತಿ ಮತ್ತು ಮೈದಾನಕ್ಕೆ ಸಿಸಿಟಿವಿ ಕ್ಯಾಮೆರಾ ನಿಗಾ

  • ಆನ್‌ಲೈನ್‌ ಪಾಠಕ್ಕಾಗಿ ವೆಬ್‌ಕ್ಯಾಮ್, ವೇದಿಕೆ ಕಾರ್ಯಕ್ರಮಕ್ಕೆ ಸ್ಪೀಕರ್

  • ಮಕ್ಕಳ ಚಿತ್ತಾಕರ್ಷಿಸುವ ನಲಿ–ಕಲಿ ಕೊಠಡಿ

  • ಮೂರು ಸಾವಿರ ಪುಸ್ತಕ ಸಂಗ್ರಹ ಸಾಮರ್ಥ್ಯದ ಗ್ರಂಥಾಲಯ

  • 24 ತಾಸು ವಿದ್ಯುತ್ ಬೆಳಕಿಗಾಗಿ ಯುಪಿಎಸ್‌ ವ್ಯವಸ್ಥೆ

  • 12 ಸಾವಿರ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ತೊಟ್ಟಿ

  • ವಿವಿಧ ಕ್ರೀಡಾ ಪರಿಕರಗಳು* ಮಕ್ಕಳನ್ನು ಸೆಳೆಯುವ ಚಿತ್ರಗಳು

ಅಶ್ವಿನಿ ಬಿ.ಎನ್ ಮುಖ್ಯ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಡಗಂಗವಾಡಿ
ಅಶ್ವಿನಿ ಬಿ.ಎನ್ ಮುಖ್ಯ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಡಗಂಗವಾಡಿ
ನಮ್ಮ ಶಾಲೆಗೆ ಹೊಸ ರೂಪ ಬಂದಿದೆ. ಮಕ್ಕಳು ತುಂಬಾ ಸಂಭ್ರಮದಿಂದ ಶಾಲೆಗೆ ಬರುತ್ತಾರೆ. ಇಲ್ಲಿರುವ ಹೊಸ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಿದೆ
– ಅಶ್ವಿನಿ ಬಿ.ಎನ್ ಮುಖ್ಯ ಶಿಕ್ಷಕಿ ದೊಡ್ಡಗಂಗವಾಡಿ
ಶಾಲಿನಿ ಎಸ್‌ಡಿಎಂಸಿ ಸದಸ್ಯೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಡಗಂಗವಾಡಿ
ಶಾಲಿನಿ ಎಸ್‌ಡಿಎಂಸಿ ಸದಸ್ಯೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಡಗಂಗವಾಡಿ
ನಮ್ಮೂರ ಶಾಲೆ ಹಿಂದೆ ಇದ್ದ ಸ್ಥಿತಿಗೂ ಈಗಿಗೂ ಅಜಗಜಾಂತರ ವ್ಯತ್ಯಾಸವಾಗಿದೆ. ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಪ್ರತಿಷ್ಠಾನದವರು ಇಲ್ಲಿ ಹಲವು ಸೌಲಭ್ಯಗಳನ್ನು ಒದಗಿದ್ದಾರೆ
- ಶಾಲಿನಿ ಎಸ್‌ಡಿಎಂಸಿ ಸದಸ್ಯೆ
ಗೋಪಾಲ್ ಗ್ರಾಮಸ್ಥ ದೊಡ್ಡಗಂಗವಾಡಿ
ಗೋಪಾಲ್ ಗ್ರಾಮಸ್ಥ ದೊಡ್ಡಗಂಗವಾಡಿ
ಶತಮಾನೋತ್ಸವದ ಅಂಚಿನಲ್ಲಿರುವ ನಮ್ಮೂರು ಶಾಲೆಯನ್ನು ಹೂವಿನಹೊಳೆ ಪ್ರತಿಷ್ಠಾನದವರು ಅಭಿವೃದ್ಧಿಪಡಿಸುವ ಮೂಲಕ ಶತಮಾನೋತ್ಸವಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ
– ಗೋಪಾಲ್ ಗ್ರಾಮಸ್ಥ
ನಂದಿ ಜೆ. ಹೂವಿನಹೊಳೆ ಸಂಸ್ಥಾಪಕ ಅಧ್ಯಕ್ಷ  ಹೂವಿನಹೊಳೆ ಪ್ರತಿಷ್ಠಾನ 
ನಂದಿ ಜೆ. ಹೂವಿನಹೊಳೆ ಸಂಸ್ಥಾಪಕ ಅಧ್ಯಕ್ಷ  ಹೂವಿನಹೊಳೆ ಪ್ರತಿಷ್ಠಾನ 
‘ನಿರ್ವಹಣೆಗಾಗಿ 3 ವರ್ಷ ಶಾಲೆ ದತ್ತು’
‘ಶಾಲೆಯನ್ನು ಅಭಿವೃದ್ಧಿಪಡಿಸುವ ಜೊತೆಗೆ ಮೂರು ವರ್ಷ ಅದರ ನಿರ್ವಹಣೆಗಾಗಿ ಪ್ರತಿಷ್ಠಾನವು ದತ್ತು ಪಡೆದಿದೆ. ಈಗಾಗಲೇ ಒದಗಿಸಿರುವ ಅತ್ಯಾಧುನಿಕ ಕಲಿಕಾ ಉಪಕರಣಗಳು ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳಲ್ಲಿ ಏನಾದರೂ ಸಮಸ್ಯೆಯಾದರೆ ಕೂಡಲೇ ಸ್ಪಂದಿಸುತ್ತೇವೆ. ಕಲಿಕೆಗೆ ಸಂಬಂಧಿಸಿದಂತೆ ಅಗತ್ಯ ಉಪಕರಣಗಳ ಪೂರೈಕೆ ಜೊತೆಗೆ ಕಲಿಕಾ ಗುಣಮಟ್ಟದಲ್ಲಿ ನಿರಂತರ ಏರಿಕೆ ಕುರಿತು ಸಹ ನಿಗಾ ಇಡುತ್ತೇವೆ’ ಎಂದು ನಂದಿ ಜೆ. ಹೂವಿನಹೊಳೆ ಹೇಳಿದರು. ‘ಪ್ರತಿಷ್ಠಾನವು ಇದುವರೆಗೆ ದೊಡ್ಡಗಂಗವಾಡಿ ಶಾಲೆ ಸೇರಿದಂತೆ ರಾಜ್ಯದಾದ್ಯಂತ 40 ಸರ್ಕಾರಿ ಶಾಲಾ–ಕಾಲೇಜುಗಳನ್ನು ಅಭಿವೃದ್ಧಿಪಡಿಸಿದೆ. ಈ ಪೈಕಿ ರಾಮನಗರ ಜಿಲ್ಲೆಯಲ್ಲಿ 5 ಶಾಲೆ ಮತ್ತು ಒಂದು ಕಾಲೇಜಿಗೆ ಹೊಸ ರೂಪ ಕೊಟ್ಟಿದ್ದೇವೆ. ನಮ್ಮ ಈ ಕಾಳಜಿಯ ಕಾರ್ಯಕ್ಕೆ ಟೆಕ್ ಸಿಸ್ಟಮ್ಸ್ ಗ್ಲೋಬಲ್ ಸರ್ವೀಸಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ದಯಾನಂದ್ ಕಾಮತ್ ಆಯಾ ಶಾಲಾ–ಕಾಲೇಜುಗಳ ಆಡಳಿತ ಮಂಡಳಿಯವರು ಎಸ್‌ಡಿಎಂಸಿಯವರು ಹಾಗೂ ಶಿಕ್ಷಣ ಇಲಾಖೆಯವರು ಸಹ ಕೈ ಜೋಡಿಸಿದ್ದಾರೆ. ಮುಂದೆಯೂ ಗ್ರಾಮೀಣ ಭಾಗದ ಸರ್ಕಾರಿ ಶಾಲಾ–ಕಾಲೇಜುಗಳನ್ನು ಅಭಿವೃದ್ಧಿಪಡಿಸುವ ಇರಾದೆಯನ್ನು ಪ್ರತಿಷ್ಠಾನವು ಹೊಂದಿದೆ’ ಎಂದು ತಿಳಿಸಿದರು.
ಸೋಮಲಿಂಗಯ್ಯ ಪಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ
ಸೋಮಲಿಂಗಯ್ಯ ಪಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ
‘‍ಪ್ರತಿಷ್ಠಾನದಿಂದ ಬಹುದೊಡ್ಡ ಕೊಡುಗೆ’
ದೊಡ್ಡಗಂಗವಾಡಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ಸ್ಪರ್ಶ ನೀಡಿರುವ ಹೂವಿನಹೊಳೆ ಪ್ರತಿಷ್ಠಾನದವರು ಮಕ್ಕಳ ಕಲಿಕೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಪ್ರತಿಷ್ಠಾನದವರು ಈ ಶಾಲೆಯನ್ನು ಅಭಿವೃದ್ಧಿಗೆ ಕೈ ಹಾಕಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸಿದ್ದಾರೆ. ಇದರಿಂದಾಗಿ ಶಾಲೆಯನ ಆಡಳಿತ ವೈಖರಿಯಷ್ಟೇ ಅಲ್ಲ ಮಕ್ಕಳ ಕಲಿಕಾ ಮಟ್ಟದಲ್ಲಿ ಬದಲಾವಣೆ ಕಂಡುಬರುತ್ತಿದೆ. ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಶಾಲೆಗಳತ್ತ ತಿರುಗದವರು ಇದೀಗ ಹೈಟೆಕ್ ಆಗಿರುವ ಶಾಲೆಯನ್ನು ಬೆರಗು ಕಣ್ಣುಗಳಿಂದ ನೋಡುತ್ತಿದ್ದಾರೆ. ನಂದಿ ಜೆ. ಹೂವಿನಹೊಳೆ ಅವರ ನೇತೃತ್ವದ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ’ ಎಂದು ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಪಿ. ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT