ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಕಾಟ್ಲೆಂಡ್ ವಿರುದ್ಧ ಆಸೀಸ್‌ಗೆ ರೋಚಕ ಜಯ; ಇಂಗ್ಲೆಂಡ್ ಸೂಪರ್ 8ಕ್ಕೆ ಲಗ್ಗೆ

Published 16 ಜೂನ್ 2024, 4:20 IST
Last Updated 16 ಜೂನ್ 2024, 4:20 IST
ಅಕ್ಷರ ಗಾತ್ರ

ಸೇಂಟ್ ಲೂಸಿಯಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

181 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ 19.4 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಇದರೊಂದಿಗೆ ಸ್ಕಾಟ್ಲೆಂಡ್‌ಗೆ ಸೂಪರ್ ಎಂಟರ ಹಂತಕ್ಕೆ ಪ್ರವೇಶಿಸುವ ಅವಕಾಶ ಸ್ವಲ್ಪದರಲ್ಲೇ ತಪ್ಪಿದೆ. ಮತ್ತೊಂದೆಡೆ ಈ ಫಲಿತಾಂಶದೊಂದಿಗೆ ಇಂಗ್ಲೆಂಡ್ ಸೂಪರ್ ಎಂಟರ ಹಂತಕ್ಕೆ ಲಗ್ಗೆ ಇಟ್ಟಿದೆ.

'ಬಿ' ಗುಂಪಿನಲ್ಲಿ ಎಲ್ಲ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿರುವ ಆಸ್ಟ್ರೇಲಿಯಾ ಒಟ್ಟು ಎಂಟು ಅಂಕಗಳನ್ನು ಕಲೆ ಹಾಕಿದ್ದು, ಅಗ್ರಸ್ಥಾನಿಯಾಗಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ.

ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ಸಮಾನ ಐದು ಅಂಕಗಳನ್ನು ಪಡೆದಿವೆ. ಆದರೆ ಸ್ಕಾಟ್ಲೆಂಡ್‌ಗಿಂತಲೂ (+1.255) ಉತ್ತಮ ರನ್‌ರೇಟ್ ಕಾಯ್ದುಕೊಂಡಿರುವ ಆಂಗ್ಲರ ಪಡೆ (+3.611) ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದೆ. ಇದರೊಂದಿಗೆ ಸ್ಕಾಟ್ಲೆಂಡ್ ಕನಸು ಭಗ್ನಗೊಂಡಿತು.

ಆಸೀಸ್‌ಗೆ ರೋಚಕ ಗೆಲುವು...

ಮೊದಲು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್ ಬ್ರಂಡನ್ ಮೆಕುಲೆನ್ (60) ಹಾಗೂ ನಾಯಕ ಬೆರಿಂಗ್ಟನ್ (42*) ಬಿರುಸಿನ ಆಟದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 180 ರನ್‌ಗಳ ಸವಾಲನ ಮೊತ್ತ ಪೇರಿಸಿತು.

ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 60ಕ್ಕೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಡೇವಿಡ್ ವಾರ್ನರ್ (1), ನಾಯಕ ಮಿಷೆಲ್ ಮಾರ್ಷ್ (11) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (11) ವೈಫಲ್ಯ ಅನುಭವಿಸಿದರು.

ಆದರೆ ನಾಲ್ಕನೇ ವಿಕೆಟ್‌ಗೆ 80 ರನ್‌ಗಳ ಜೊತೆಯಾಟ ಕಟ್ಟಿದ ಟ್ರಾವಿಸ್ ಹೆಡ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ತಂಡದ ಗೆಲುವನ್ನುಖಾತ್ರಿಪಡಿಸಿದರು.

ಹೆಡ್ ಹಾಗೂ ಸ್ಟೋಯಿನಿಸ್ ಆಕರ್ಷಕ ಅರ್ಧಶತಕಗಳ ಸಾಧನೆ ಮಾಡಿದರು. ಟ್ರಾವಿಸ್ ಹೆಡ್ 49 ಎಸೆತಗಳಲ್ಲಿ 68 ಹಾಗೂ ಸ್ಟೋಯಿನಿಸ್ 29 ಎಸೆತಗಳಲ್ಲಿ 59 ರನ್ ಗಳಿಸಿ ಅಬ್ಬರಿಸಿದರು.

ಕೊನೆಯ ಹಂತದಲ್ಲಿ ಟಿಮ್ ಡೇವಿಡ್ ಕೇವಲ 14 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇನ್ನೊಂದೆಡೆ ಮಳೆ ಬಾಧಿತ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಇಂಗ್ಲೆಂಡ್ ಡಕ್ವರ್ಥ್ ಲೂಯಿಸ್ ನಿಯಮದಡಿಯಲ್ಲಿ 41 ರನ್ ಅಂತರದ ಗೆಲುವು ದಾಖಲಿಸಿತ್ತು.

'ಬಿ' ಗುಂಪಿನ ಅಂಕಪಟ್ಟಿ ಇಂತಿದೆ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT