ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC | ನಮೀಬಿಯಾ ವಿರುದ್ಧ ಜಯ; 'ಸೂಪರ್ 8'ಕ್ಕೇರುವ ಇಂಗ್ಲೆಂಡ್ ಕನಸು ಜೀವಂತ

Published 16 ಜೂನ್ 2024, 2:23 IST
Last Updated 16 ಜೂನ್ 2024, 2:23 IST
ಅಕ್ಷರ ಗಾತ್ರ

ಅಂಟಿಗುವಾ: ನಮೀಬಿಯಾ ವಿರುದ್ಧದ ಮಳೆ ಬಾಧಿತ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಇಂಗ್ಲೆಂಡ್‌ ತಂಡ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ 'ಸೂಪರ್‌ 8' ಹಂತಕ್ಕೇರುವ ಕನಸು ಕಾಣುತ್ತಿದೆ.

‌ಭಾರಿ ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯದ ಇನಿಂಗ್ಸ್‌ಗಳನ್ನು ತಲಾ 10 ಓವರ್‌ಗಳಿಗೆ ಕಡಿತಗೊಳಿಸಲಾಯಿತು.

ಇಲ್ಲಿರುವ ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್, ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 122 ರನ್ ಗಳಿಸಿತು.

ಈ ಗುರಿ ಬೆನ್ನತ್ತಿದ ನಮೀಬಿಯಾ, 3 ವಿಕೆಟ್‌ ಕಳೆದುಕೊಂಡು 84 ರನ್ ಗಳಿಸಲಷ್ಟೇ ಶಕ್ತವಾಯಿತು. ಎಂ.ವಿ.ಲಿಂಗೆನ್‌ (33 ರನ್‌), ನಿಕೋಲಸ್‌ ಡಾವಿನ್‌ (18 ರನ್‌), ಡೇವಿಡ್‌ ವೈಸ್‌ (27 ರನ್‌) ನಡೆಸಿದ ಹೋರಾಟ ಸಾಕಾಗಲಿಲ್ಲ.

ಹೀಗಾಗಿ ಇಂಗ್ಲೆಂಡ್‌ ತಂಡವು ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ 41 ರನ್‌ ಅಂತರದ ಗೆಲುವು ಸಾಧಿಸಿತು.

ಬ್ರೂಕ್‌ ಅಬ್ಬರ
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟರ್‌ಗಳಾದ ಫಿಲ್‌ ಸಾಲ್ಟ್‌ (11) ಮತ್ತು ನಾಯಕ ಜಾಸ್‌ ಬಟ್ಲರ್‌ (0) ವೈಫಲ್ಯ ಅನುಭವಿಸಿದರು. ತಂಡದ ಮೊತ್ತ 12 ರನ್‌ ಆಗುವಷ್ಟರಲ್ಲೇ ಈ ಇಬ್ಬರೂ ಪೆವಿಲಿಯನ್‌ಗೆ ಮರಳಿದರು.

ಈ ಹಂತದಲ್ಲಿ ಜೊತೆಯಾದ ಜಾನಿ ಬೆಸ್ಟೋ ಹಾಗೂ ಹ್ಯಾರಿ ಬ್ರೂಕ್‌ 3ನೇ ವಿಕೆಟ್‌ಗೆ 56 ರನ್‌ ಸೇರಿಸಿದರು. 18 ಎಸೆತಗಳಲ್ಲಿ 31 ರನ್‌ ಗಳಿಸಿದ್ದ ಬೆಸ್ಟೋ ಔಟಾದ ಬಳಿಕವೂ ಬ್ರೂಕ್‌ ಅಬ್ಬರ ಮುಂದುವರಿಯಿತು. ಅವರು ಕೇವಲ 20 ಎಸೆತಗಳಲ್ಲಿ 47 ರನ್‌ ಬಾರಿಸಿ ಅಜೇಯವಾಗಿ ಉಳಿದರು.

ಕೊನೆಯಲ್ಲಿ ಮೋಯಿನ್‌ ಅಲಿ (6 ಎಸೆತ, 16 ರನ್‌), ಲಿಯಾಮ್‌ ಲಿವಿಂಗ್‌ಸ್ಟೊನ್‌ (4 ಎಸೆತ, 13 ರನ್‌) ಸಹ ಅಬ್ಬರಿಸಿದರು.

ನಮೀಬಿಯಾ ಪರ ಅನುಭವಿ ಬೌಲರ್‌ ಡೇವಿಡ್‌ ವೈಸ್‌ (2 ಓವರ್‌ಗಳಲ್ಲಿ 6 ರನ್‌, 1 ವಿಕೆಟ್‌) ಹೊರತುಪಡಿಸಿ ಉಳಿದೆಲ್ಲ ಬೌಲರ್‌ಗಳು ಪ್ರತಿ ಓವರ್‌ಗೆ ಸರಾಸರಿ 12ಕ್ಕಿಂತ ಹೆಚ್ಚು ರನ್‌ ಬಿಟ್ಟುಕೊಟ್ಟರು.

ಇಂಗ್ಲೆಂಡ್‌ಗೆ ಸ್ಕಾಟ್ಲೆಂಡ್ ಪೈಪೋಟಿ
ಟೂರ್ನಿಯ 'ಎ' ಗುಂಪಿನಿಂದ ಭಾರತ ಮತ್ತು ಅಮೆರಿಕ, 'ಸಿ' ಗುಂಪಿನಿಂದ ಅಫ್ಗಾನಿಸ್ತಾನ ಮತ್ತು ವೆಸ್ಟ್ ಇಂಡೀಸ್‌ 'ಸೂಪರ್‌ 8' ಹಂತಕ್ಕೇರಿವೆ. ಆದರೆ, 'ಬಿ' ಮತ್ತು 'ಡಿ' ಗುಂಪಿನಿಂದ ಒಂದೊಂದು ತಂಡಗಳಷ್ಟೇ ಮುಂದಿನ ಹಂತಕ್ಕೆ ಟಿಕೆಟ್‌ ಗಿಟ್ಟಿಸಿವೆ.

'ಬಿ' ಗುಂಪಿನಲ್ಲಿರುವ ಆಸ್ಟ್ರೇಲಿಯಾ ಹಾಗೂ 'ಡಿ' ಗುಂಪಿನಲ್ಲಿರುವ ದಕ್ಷಿಣ ಆಫ್ರಿಕಾ 'ಸೂಪರ್‌ 8' ಹಂತಕ್ಕೇರಿವೆ. ಈ ಗುಂಪುಗಳಿಂದ ಉಳಿದಿರುವ ತಲಾ ಒಂದೊಂದು ಸ್ಥಾನಕ್ಕಾಗಿ ಕ್ರಮವಾಗಿ, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌, ಬಾಂಗ್ಲಾದೇಶ ಮತ್ತು ನೆದರ್‌ಲೆಂಡ್ಸ್‌ ನಡುವೆ ಪೈಪೋಟಿ ಏರ್ಪಟ್ಟಿದೆ.

ಲೀಗ್‌ ಹಂತದಲ್ಲಿ ತನ್ನ ಪಾಲಿನ ನಾಲ್ಕೂ ಪಂದ್ಯಗಳಲ್ಲಿ ಆಡಿರುವ ಇಂಗ್ಲೆಂಡ್‌, ಎರಡರಲ್ಲಷ್ಟೇ ಗೆದ್ದು, ಒಂದರಲ್ಲಿ ಸೋಲು ಅನುಭವಿಸಿದೆ. ಉಳಿದೊಂದು ಪಂದ್ಯ ರದ್ದಾಗಿದ್ದು, ಒಂದು ಪಾಯಿಂಟ್‌ ಪಡೆದಿದೆ. ಇತ್ತ ಸ್ಕಾಟ್ಲೆಂಡ್‌ ತಂಡ, ಮೂರು ಪಂದ್ಯಗಳಲ್ಲಿ ಆಡಿರುವ ಸ್ಕಾಟ್ಲೆಂಡ್‌ ತಂಡ ಎರಡರಲ್ಲಿ ಜಯ ಸಾಧಿಸಿದೆ. ಇಂಗ್ಲೆಂಡ್‌ ವಿರುದ್ಧದ ಪಂದ್ಯ ರದ್ದಾದ ಕಾರಣ, ಪಾಯಿಂಟ್‌ ಹಂಚಿಕೊಂಡಿದೆ. ಹೀಗಾಗಿ ಈ ಎರಡೂ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಸಮಬಲ ಸಾಧಿಸಿವೆ.

ಆದರೆ, ಇಂದು ಆಸ್ಟ್ರೇಲಿಯಾ ವಿರುದ್ಧ ಆಡುತ್ತಿರುವ ಸ್ಕಾಟ್ಲೆಂಡ್‌ ಗೆದ್ದರೆ, ಮುಂದಿನ ಹಂತಕ್ಕೇರುವ ಇಂಗ್ಲೆಂಡ್‌ ಕನಸು ಕಮರಲಿದೆ.

ಬಾಂಗ್ಲಾದೇಶ ತಂಡ ಆಡಿರುವ 3 ಪಂದ್ಯಗಳಲ್ಲಿ 2 ಜಯ ಸಾಧಿಸಿದೆ. ನೆದರ್‌ಲೆಂಡ್ಸ್‌ ಸಹ ಇಷ್ಟೇ ಪಂದ್ಯ ಆಡಿ 1 ಜಯ ಸಾಧಿಸಿದೆ. ಬಾಂಗ್ಲಾ, ತನ್ನ ಮುಂದಿನ ಪಂದ್ಯದಲ್ಲಿ (ಜೂನ್‌ 16) ನೇಪಾಳ ವಿರುದ್ಧ ಆಡಲಿದೆ. ಅದರಲ್ಲಿ ಗೆದ್ದರೆ, ನೇರವಾಗಿ 'ಸೂಪರ್‌ 8' ತಲುಪಲಿದೆ. ಒಂದು ವೇಳೆ ಸೋತರೆ, ನೆದರ್‌ಲೆಂಡ್ಸ್‌ ಮತ್ತು ಶ್ರೀಲಂಕಾ ಪಂದ್ಯದ (ಜೂನ್‌ 17) ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.

ಶ್ರೀಲಂಕಾ ಎದುರು ಭಾರಿ ಅಂತರದ ಜಯ ಸಾಧಿಸಿದರೆ ಮುಂದಿನ ಹಂತಕ್ಕೇರುವ ಅವಕಾಶ ನೆದರ್‌ಲೆಂಡ್ಸ್‌ಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT