ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ರೋಗಿಗಳ ಆರೈಕೆಯಲ್ಲೇ ಸಾರ್ಥಕತೆ: ಸಿಂಧುಶ್ರೀ ಮನದ ಮಾತು

ಕೋವಿಡ್ ಆಸ್ಪತ್ರೆಯ ನರ್ಸ್‌
Last Updated 2 ಮೇ 2021, 5:10 IST
ಅಕ್ಷರ ಗಾತ್ರ

ರಾಮನಗರ: ‘ಸೋಂಕಿನಿಂದ ಗುಣಮುಖರಾಗಿ ಇಲ್ಲಿಂದ ತೆರಳುವ ವೇಳೆ ರೋಗಿಗಳು ‘ನೀನು ಜೀವನದಲ್ಲಿ ಚೆನ್ನಾಗಿರಮ್ಮ’ ಎಂದು ಹರಸಿ ಹೋಗುತ್ತಾರೆ. ಅದೇ ನಮ್ಮ ಸೇವೆಗೆ ದೊರೆಯುವ ದೊಡ್ಡ ಸಾರ್ಥಕತೆ’ ಹೀಗೆನ್ನುತ್ತಾರೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿರುವ ಸಿಂಧುಶ್ರೀ.

ಸದ್ಯ ಕೋವಿಡ್‌ ದೃಢಪಟ್ಟು ಚಿಕಿತ್ಸೆಯಲ್ಲಿರುವ ಸಿಂಧು ಕಳೆದ ಆಗಸ್ಟ್‌ನಿಂದಲೂ ಕೋವಿಡ್ ರೆಫರಲ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳನ್ನು ಆರೈಕೆ ಮಾಡುತ್ತಿದ್ದಾರೆ. ನರ್ಸಿಂಗ್‌ ವೃತ್ತಿ ಬಗ್ಗೆ ಗೌರವ ಹೊಂದಿರುವ ಈಕೆ ತಮಗೆ ಈ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎನ್ನುತ್ತಾರೆ ಅವರು.

ಸಿಂಧು ಮದ್ದೂರು ತಾಲ್ಲೂಕಿನ ವೈದ್ಯನಾಥಪುರದವರು. ಬಿಎಸ್ಸಿ ನರ್ಸಿಂಗ್‌ ಓದಿರುವ ಈಕೆ ಕೆಲ ವರ್ಷಗಳಿಂದ ನರ್ಸಿಂಗ್‌ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೋವಿಡ್‌ ಸೋಂಕು ಜಾಸ್ತಿಯಾದ ಕಾರಣಕ್ಕೆ ‘ಕೆಲಸ ಬಿಟ್ಟು ಬಂದು ಬಿಡು’ ಎಂದು ಮನೆಯವರು ಆತಂಕದಲ್ಲಿ ಹೇಳಿದ್ದುಂಟು. ಆದರೆ, ವೃತ್ತಿ ಬಿಡುವ ಯೋಚನೆ ಕೂಡ ಮಾಡಿಲ್ಲ. ಅಷ್ಟೇ ಏಕೆ ತಿಂಗಳ ಕಾಲ ರಜೆ ಇಲ್ಲದೇ ಕೆಲಸ ಮಾಡಿದ್ದಾರೆ.

‘ನಿತ್ಯ ಪಿಪಿಇ ಕಿಟ್‌ ಧರಿಸಿ ಆರು ಗಂಟೆಗೂ ಹೆಚ್ಚು ಕಾಲ ಅದೇ ಧಿರಿಸಿನಲ್ಲಿ ಕೆಲಸ ಮಾಡುವುದು ಸಾಮಾನ್ಯದ ಮಾತಲ್ಲ. ನಮ್ಮ ಉಸಿರನ್ನು ನಾವೇ ಉಸಿರಾಡುತ್ತ ರೋಗಿಗಳನ್ನು ನೋಡಿಕೊಳ್ಳಬೇಕು. ಹೀಗಿದ್ದೂ ನಮ್ಮ ಸ್ಥೈರ್ಯ ಕುಂದಿಲ್ಲ. ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳನ್ನೂ ಸಮನಾಗಿ ಕಂಡು ಅವರ ಅಗತ್ಯಗಳಿಗೆ ಸ್ಪಂದಿಸುತ್ತೇವೆ. ಕಂದಾಯ ಭವನದ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಲಭ್ಯ ಇದ್ದು, ಹಿರಿಯ ಅಧಿಕಾರಿಗಳ ಸಹಕಾರದಿಂದ ರೋಗಿಗಳಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT