ಬುಧವಾರ, ಆಗಸ್ಟ್ 17, 2022
23 °C

ಕಾಡಾನೆ ದಾಳಿ: ಬಾಳೆತೋಟ ಧ್ವಂಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿಯ ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಫಸಲಿಗೆ ಬಂದಿದ್ದ ನೂರಾರು ಬಾಳೆಮರಗಳನ್ನು ಧ್ವಂಸ ಮಾಡಿವೆ.

ಗ್ರಾಮದ ಎಚ್.ಎಂ.ಪುಟ್ಟಸ್ವಾಮಿಗೌಡ ಅವರ ನೂರಕ್ಕೂ ಹೆಚ್ಚು ಬಾಳೆಮರಗಳು, ರಾಘವೇಂದ್ರ ಅವರ ನೂರಕ್ಕೂ ಹೆಚ್ಚು ಬಾಳೆಮರಗಳನ್ನು ಆನೆಗಳು ಧ್ವಂಸ ಮಾಡಿವೆ. ಇದರ ಜೊತೆಗೆ ಅಕ್ಕಪಕ್ಕ ಜಮೀನಿನಲ್ಲಿ ಬಾಳೆ, ತೆಂಗು, ಮಾವು, ಜೋಳದ ಬೆಳೆಗಳನ್ನು ಧ್ವಂಸ ಮಾಡಿವೆ.

ಕಬ್ಬಾಳು ಅರಣ್ಯ ಪ್ರದೇಶದಿಂದ ಬಂದಿರುವ ಆನೆಗಳು ಶ್ಯಾನುಭೋಗನಹಳ್ಳಿ ಬಳಿ ಬೆಟ್ಟಗುಡ್ಡಗಳಲ್ಲಿ ಬೀಡುಬಿಟ್ಟಿದ್ದು, ರಾತ್ರಿಯ ವೇಳೆ ಬೆಟ್ಟದಿಂದ ಕೆಳಗಿಳಿದು ಅಕ್ಕಪಕ್ಕದ ಗ್ರಾಮಗಳ ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.

‘ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವು ಬೆಟ್ಟದಲ್ಲಿ ಸೇರಿ ಮತ್ತೆ ಮತ್ತೆ ದಾಳಿ ಮಾಡುತ್ತಿವೆ. ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕು. ಬೆಳೆ ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡಬೇಕು’ ಎಂದು ಗ್ರಾಮದ ಮುಖಂಡ ರಾಮಕೃಷ್ಣ ಒತ್ತಾಯಿಸಿದ್ದಾರೆ.

ಆನೆಗಳನ್ನು ಓಡಿಸಿದ ಸಿಬ್ಬಂದಿ: ಈ ಭಾಗದಲ್ಲಿ ಬೀಡುಬಿಟ್ಟು ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿರುವ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿದರು.

ತಾಲ್ಲೂಕಿನ ಕರಲಹಳ್ಳಿ, ಕೊಂಡಾಪುರ ಗ್ರಾಮದ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ 10ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ, ಪಟಾಕಿ ಸಿಡಿಸಿ, ಶಬ್ದ ಮಾಡುತ್ತಾ ಆನೆಗಳನ್ನು ಓಡಿಸುವ ಪ್ರಯತ್ನ ಮಾಡಿದರು.

ಈ ವೇಳೆ ಚದುರಿದ ಆನೆಗಳು ಹುಚ್ಚಯ್ಯನದೊಡ್ಡಿ, ಅಂಚೀಪುರ, ವಡ್ಡರಹಳ್ಳಿ ಮೂಲಕ ಬೆಟ್ಟದ ಕಡೆಗೆ ದೌಡಾಯಿಸಿದವು ಎಂದು ತಿಳಿದುಬಂದಿದೆ. ಈ ವೇಳೆ ರೈತರ ಬೆಳೆಗಳು ಧ್ವಂಸವಾದವು. ಆನೆಗಳನ್ನು ಓಡಿಸಲು ಸಿಬ್ಬಂದಿ ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು