ಮಂಗಳವಾರ, ಆಗಸ್ಟ್ 20, 2019
22 °C
ಕಾಡಂಚಿನಲ್ಲಿ ಮತ್ತೆ ಆನೆ ಹಾವಳಿ

ಕೆರೆಗಳಲ್ಲಿ ಗಜಪಡೆಯ ಚಿನ್ನಾಟ: ರೈತರಿಗೆ ಪ್ರಾಣಸಂಕಟ

Published:
Updated:
Prajavani

ರಾಮನಗರ: ನೀರು ಮತ್ತು ಮೇವಿನ ಕೊರತೆಯಿಂದಾಗಿ ಆನೆಗಳ ಹಿಂಡು ಮತ್ತೆ ಗ್ರಾಮಗಳತ್ತ ಮುಖ ಮಾಡಿದೆ. ಇದರಿಂದಾಗಿ ಕಾಡಂಚಿನ ಗ್ರಾಮಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸೋಮವಾರ ತಡರಾತ್ರಿ ಏಳು ಆನೆಗಳ ಹಿಂಡು ಚನ್ನಪಟ್ಟಣ ತಾಲ್ಲೂಕಿನ ಸುಳ್ಳೇರಿ ಕೆರೆಗೆ ಲಗ್ಗೆ ಇಟ್ಟಿದ್ದು, ಮಂಗಳವಾರ ಮುಂಜಾನೆಯೂ ಅಲ್ಲಿಯೇ ಕಾಲ ಕಳೆದವು. ಕೆರೆಯ ಸುತ್ತಲಿನ ರೈತರ ಫಸಲು ತಿಂದು ಹಾನಿ ಮಾಡಿದ್ದಲ್ಲದೆ ಸುತ್ತಲೂ ಓಡಾಡುತ್ತ ಜನರಲ್ಲಿ ಭೀತಿ ಹುಟ್ಟಿಸಿದವು. ಕಾಡಾನೆಗಳನ್ನು ಕಂಡ ಸುತ್ತಲಿನ ಗ್ರಾಮಸ್ಥರು ಗಾಬರಿಗೊಂಡಿದ್ದು, ಆನೆಗಳನ್ನು ನೋಡಲು ಮುಗಿಬಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕಾಡಾನೆಗಳನ್ನು ಓಡಿಸಲು ಹರಸಾಹಸ ಪಟ್ಟರು.

ಜಿಲ್ಲೆಯ ನಾಲ್ಕೂ ತಾಲ್ಲೂಕುಗಳ ವ್ಯಾಪ್ತಿಯಲ್ಲಿಯೂ ಆನೆಗಳ ಹಾವಳಿ ನಿರಂತರವಾಗಿದೆ. ಪೂರ್ವ ಮುಂಗಾರು ಮಳೆ ಹದವಾಗಿ ಬಿದ್ದ ಕಾರಣ ಒಂದಿಷ್ಟು ದಿನ ಅವುಗಳ ಹಾವಳಿ ತಪ್ಪಿತ್ತು. ಆದರೆ ಇದೀಗ ಮತ್ತೆ ನಾಡಿಗೆ ಬರಲು ಆರಂಭಿಸಿವೆ. ಕಳೆದ ವಾರ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಹೊಸೂರು ಸಮೀಪ ಹೀಗೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿತ್ತು. ಕೆಲವು ತಿಂಗಳ ಹಿಂದೆ ಆನೆಗಳ ಹಿಂಡು ಕೂನಗಲ್‌ ಬೆಟ್ಟ ಏರಿ ವಾಪಸ್‌ ಆಗಲು ಪರದಾಡಿತ್ತು.

ಎಲ್ಲೆಲ್ಲಿ ಹಾವಳಿ: ತಾವು ಓಡಾಡುವ ಹಾದಿಯಲ್ಲಿ ಬೆಳೆ ನಾಶ ಮಾಡುತ್ತ, ಸಿಕ್ಕಿದ್ದನ್ನು ಮೇಯುತ್ತಾ ತಿರುಗಾಡುತ್ತಿರುವ ಆನೆಗಳು ಜನರಲ್ಲಿ ಆತಂಕ ಹುಟ್ಟಿಸಿವೆ. ಅದರಲ್ಲಿಯೂ ಕಾಡಂಚಿನ ಗ್ರಾಮಗಳಲ್ಲಿ ಇವುಗಳ ಹಾವಳಿ ಸಾಮಾನ್ಯವಾಗಿದೆ. ಜಿಲ್ಲೆಯ ಗಡಿಭಾಗದಲ್ಲಿ ಇರುವ ಕಾವೇರಿ ವನ್ಯಜೀವಿ ಧಾಮದ ಸುತ್ತಲಿನ ಗ್ರಾಮಗಳಲ್ಲಿ ಗಜಪಡೆ ನಿರಂತರವಾಗಿ ಕಾಣಿಸಿಕೊಳ್ಳುತ್ತಿದೆ. ಮತ್ತೊಂದು ಗುಂಪು ತೆಂಗಿನಕಲ್ಲು, ಕಬ್ಬಾಳು, ಮುತ್ತತ್ತಿ ಸುತ್ತಮುತ್ತ ಓಡಾಡುತ್ತಿದೆ. ಆರೇಳು ಆನೆಗಳು ಒಟ್ಟೊಟ್ಟಿಗೆ ತಿಂದು, ಕೆರೆಗಳಲ್ಲಿ ಚಿನ್ನಾಟವಾಡುತ್ತಾ ಹೋಗುತ್ತಿವೆ. ರೈತರು ಮಾತ್ರ ಪ್ರಾಣ ಸಂಕಟ ಅನುಭವಿಸತೊಡಗಿದ್ದಾರೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 6,281 ಬೆಳೆ ಹಾನಿ ಪ್ರಕರಣಗಳು ದಾಖಲಾಗಿವೆ. ಅರಣ್ಯ ಇಲಾಖೆ ರೈತರಿಗೆ ₨4.6 ಕೋಟಿ ಮೊತ್ತದ ಪರಿಹಾರವನ್ನೂ ವಿತರಿಸಿದೆ. ಇವುಗಳಲ್ಲಿ ಬಹುಪಾಲು ಆನೆ ದಾಳಿಯಿಂದ ಆದ ನಷ್ಟವಾಗಿದೆ. ಇಲಾಖೆ ಕೊಡುವ ಪರಿಹಾರಕ್ಕೂ , ವಾಸ್ತವದಲ್ಲಿ ಆಗುವ ಬೆಳೆ ನಷ್ಟಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಹೀಗಾಗಿ ದಾಳಿಗೆ ಒಳಗಾದ ರೈತರಿಗೆ ಪರಿಹಾರ ಸಿಕ್ಕರೂ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ.

ರೈಲ್ವೆ ಬ್ಯಾರಿಕೇಡ್‌ ನಿರ್ಮಿಸಿ
ಕಾಡಿನ ಸುತ್ತ ಸೋಲಾರ್‌ ಬೇಲಿಗಳನ್ನು ನಿರ್ಮಿಸಿ ವನ್ಯಜೀವಿಗಳ ದಾಳಿಯನ್ನು ನಿಯಂತ್ರಿಸುವ ಅರಣ್ಯ ಇಲಾಖೆಯ ಪ್ರಯತ್ನ ಹೆಚ್ಚು ಫಲ ನೀಡಿಲ್ಲ. ಕೆಲವು ಕಡೆಗಷ್ಟೇ ಈ ಬೇಲಿ ಸೀಮಿತವಾಗಿದೆ.

ಆನೆಗಳು ಓಡಾಡುವ ಪ್ರದೇಶಗಳ ಸುತ್ತಮುತ್ತ ರೈಲು ಕಂಬಿಗಳಿಂದ ಬ್ಯಾರಿಕೇಡ್‌ ನಿರ್ಮಿಸಬೇಕು. ಈ ಮೂಲಕ ಗಜಪಡೆಯನ್ನು ಕಾಡಿನೊಳಗೇ ಬಂಧಿಸಿ ಅವುಗಳಿಗೆ ಅಲ್ಲಿಯೇ ನೀರು–ಆಹಾರ ಸಿಗುವಂತೆ ಮಾಡಬೇಕು ಎನ್ನುವುದು ರೈತರ ಒತ್ತಾಯವಾಗಿದೆ.

‘ರಾಮನಗರ ಜಿಲ್ಲೆಯಲ್ಲಿ ಆನೆಗಳ ದಾಳಿ ಸರ್ವೆ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾಡಿನ ಸುತ್ತ ರೈಲು ಕಂಬಿ ಬೇಲಿ ನಿರ್ಮಿಸಬೇಕು ಎಂದು ಒತ್ತಾಯಿಸುತ್ತಲೇ ಬರಲಾಗಿದೆ. ಆದರೆ ಅರಣ್ಯ ಇಲಾಖೆ ಅದಕ್ಕೆ ಮನಸ್ಸು ಮಾಡಿಲ್ಲ. ಕಾಡಿನಲ್ಲಿ ಮೇವು–ನೀರಿಗೆ ಕೊರತೆ ಆದಂತೆ ಎಲ್ಲ ಆನೆಗಳು ನಾಡಿಗೆ ನುಗ್ಗುತ್ತಿವೆ. ಮಾನವ–ವನ್ಯಜೀವಿ ಸಂಘರ್ಷ ತಡೆಗೆ ಅಧಿಕಾರಿಗಳು ಇನ್ನಾದರೂ ಕ್ರಮ ಕೈಗೊಳ್ಳುವ ಅಗತ್ಯ ಇದೆ’ ಎನ್ನುತ್ತಾರೆ ರೈತ ಮುಖಂಡ ಸಿ. ಪುಟ್ಟಸ್ವಾಮಿ.

*
ಆನೆಗಳ ಹಾವಳಿ ನಿಯಂತ್ರಣಕ್ಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಕಾಡಿನ ಸುತ್ತ ರೈಲ್ವೆಗಳ ಹಳಿಗಳ ಬ್ಯಾರಿಕೇಡ್‌ ನಿರ್ಮಿಸಬೇಕು.
-ಸಿ. ಪುಟ್ಟಸ್ವಾಮಿ, ರೈತ ಮುಖಂಡ

Post Comments (+)