ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಜಾನಪದ ಸುಗ್ಗಿ ಸಂಭ್ರಮ: ‘ಜನಪದ ಅಭಿವೃದ್ಧಿ ಮಂಡಳಿ ಸ್ಥಾಪಿಸಿ’

Last Updated 1 ಆಗಸ್ಟ್ 2021, 3:50 IST
ಅಕ್ಷರ ಗಾತ್ರ

ಕನಕಪುರ: ‘ರಾಮನಗರ ಜಿಲ್ಲೆಯು ಪ್ರವಾಸಿ ಸ್ಥಳಗಳ ತಾಣವಾಗಿದೆ. ಇಲ್ಲಿನ ಕಲೆ, ಸಂಸ್ಕೃತಿ, ಜೀವವೈವಿಧ್ಯವನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಇಂದಿನ ಯುವಪೀಳಿಗೆಯ ಮೇಲಿದೆ’ ಎಂದು ಜನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ಹೇಳಿದರು.

ಇಲ್ಲಿನ ರೋಟರಿ ಭವನದಲ್ಲಿ ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಜಾನಪದ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಜನಪದ ತೇರು, ಮೀನುಗಾರರು ಮತ್ತು ಸೋಬಾನೆ ಪದ ಕಲಾ ತಂಡಗಳ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಪದ ಸಾಹಿತ್ಯ ಮತ್ತು ಕಲೆಯು ನಮ್ಮ ಹಿಂದಿನ ತಲೆಮಾರಿನ ಜೀವನ ಮತ್ತು ಬದುಕಿನ ಚಿತ್ರಣವಾಗಿದೆ. ಬದಲಾದ ಪರಿಸ್ಥಿತಿಯಿಂದ ಅದು ಕ್ಷೀಣಿಸುತ್ತಿದ್ದು, ನಮ್ಮಿಂದ ಕಣ್ಮರೆಯಾಗುತ್ತಿದೆ. ಅದನ್ನು ಉಳಿಸಿ ಬೆಳೆಸುವುದರ ಜತೆಗೆ ಮುಂದಿನ ತಲೆಮಾರಿಗೆ ಪರಿಚಯಿಸಿ ಕೊಡಬೇಕಾದ ಅನಿವಾರ್ಯತೆ ನಮಗೆ ಎದುರಾಗಿದೆ ಎಂದು ತಿಳಿಸಿದರು.

ಜನಪದ ಸಾಹಿತ್ಯವನ್ನು ಉಳಿಸಲು ಸರ್ಕಾರ ಜಾನಪದ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕು. ಅದಕ್ಕೆ ಪ್ರತಿಯೊಬ್ಬ ಜನಪದ ಸಾಹಿತಿಗಳು ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ಜನಪದ ಗಾಯಕ ಜೋಗಿಲ ಸಿದ್ದರಾಜು ಮಾತನಾಡಿ, ಜನಪದ ಕಲೆಯನ್ನು ಕೊಡುವ ಮತ್ತು ತೆಗೆದುಕೊಳ್ಳುವ ವಿನಿಮಯ ಕೆಲಸವಾಗಬೇಕು. ಎಲ್ಲಾ ಕಲಾವಿದರು ಒಗ್ಗಟ್ಟಿನಿಂದ ಕಲೆಯನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ ಮಾತನಾಡಿ, ಜನಪದ ಕಲೆಯನ್ನು ಕಲಿತಿರುವ ಕಲಾವಿದರ ನಂತರದಲ್ಲಿ ಆ ಕಲೆಯು ನಶಿಸಿ ಹೋಗುತ್ತದೆ. ಅದಕ್ಕಾಗಿ ಕಲಾವಿದರು ತಾವು ಕಲಿತಿರುವ ಕಲೆಯನ್ನು ಹೊಸ ತಲೆಮಾರಿನ ಜನಕ್ಕೆ ಕಲಿಸಬೇಕು. ಯುವಕರು ಬೇರೆ ಕಲೆಯಂತೆ ಜನಪದ ಕಲೆಯನ್ನು ಆಸಕ್ತಿಯಿಂದ ಕಲಿಯಬೇಕು ಎಂದು ಸಲಹೆ ನೀಡಿದರು.

ದಮ್ಮ ದೀವಿಗೆ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ್‌, ಕಲಾವಿದ ಶಂಕರ್‌ ಭಾರತೀಪುರ ಜನಪದ ಬೆಳೆದು ಬಂದ ಹಾದಿ ಮತ್ತು ಇಂದಿನ ಪರಿಸ್ಥಿತಿ ಬಗ್ಗೆ ತಿಳಿಸಿಕೊಟ್ಟರು. ಹೇರಿಂದ್ಯಾಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ಚಿಕ್ಕರಾಜು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಸುಗ್ಗಿ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಬಿಜ್ಜಳ್ಳಿ ಕಾಳಯ್ಯ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜೂಗೌಡ, ಸದಸ್ಯ ಸನತ್‌ಕುಮಾರ್‌, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್‌, ತಾಲ್ಲೂಕು ಅಧ್ಯಕ್ಷ ನೇರಾ ಪ್ರಭಾಕರ್‌
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT