ಶನಿವಾರ, ಮೇ 15, 2021
24 °C

ಕೊರೊನಾ ಸೋಂಕು ತಡೆಗೆ ವಿಫಲ: ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಟೀಕೆ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಕೋವಿಡ್‌ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿರುವುದೇ ಇಂದಿನ ಕೆಟ್ಟ ಪರಿಸ್ಥಿತಿಗೆ ಕಾರಣ. ಜನರ ಜೀವದ ಬಗ್ಗೆ ಸರ್ಕಾರ ಚೆಲ್ಲಾಟವಾಡುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ಇಲ್ಲಿನ ಸಾರ್ವಜನಿಕ (ಐಪಿಪಿ) ಆಸ್ಪತ್ರೆಗೆ ಗುರುವಾರ ದಿಢೀರ್‌ ಭೇಟಿ ನೀಡಿದ ಅವರು, ಕೋವಿಡ್‌ ನಿರ್ವಹಣಾ ಕೇಂದ್ರಕ್ಕೆ ತೆರಳಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಅಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕಿಸಿದ ಅವರು ಕೋವಿಡ್‌ ನಿರ್ವಹಣೆ ಕುರಿತು ವೈದ್ಯರಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದರು.

ರಾಜ್ಯದಲ್ಲಿ ಕೋವಿಡ್‌ 2ನೇ ಅಲೆಯು ತೀವ್ರಗತಿಯಲ್ಲಿ ಏರುತ್ತಿದೆ. ಸರ್ಕಾರ ಮೊದಲಿಂದಲೇ ಕೋವಿಡ್‌ ತಡೆಗೆ ಸರಿಯಾದ ಕ್ರಮ ಅನುಸರಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿಲ್ಲ. ಕೋವಿಡ್‌ ಬಾಧಿತರಿಗೆ ಆಮ್ಲಜನಕ ಮತ್ತು ಬೆಡ್‌ಗಳ ಕೊರತೆ ಉಂಟಾಗಿ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು.

ಕನಕಪುರ ತಾಲ್ಲೂಕಿನಲ್ಲಿ ಕೋವಿಡ್‌ ನಿಯಮವನ್ನು ಅಚ್ಚಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ. ಕೋವಿಡ್‌ ಕೇಂದ್ರಗಳಲ್ಲಿ ವೈದ್ಯರ ತಂಡ ಇರುವ ವ್ಯವಸ್ಥೆ ಮತ್ತು ಅನುಕೂಲ ಬಳಸಿಕೊಂಡು ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿಗೆ ಮೆಡಿಕಲ್‌ ಕಾಲೇಜು ಬೇಕೆಂದು ಹೋರಾಟ ನಡೆಸುತ್ತಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ದಯಾನಂದ ಸಾಗರ, ಕನಕಪುರ ಐಪಿಪಿ ಆಸ್ಪತ್ರೆ ಹಾಗೂ ರಾಮನಗರ ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಜಿಲ್ಲಾ ಕೇಂದ್ರದಲ್ಲಿ ಭಾನುವಾರ ಕೆಡಿಪಿ ಸಭೆ ನಡೆಸುತ್ತಿದ್ದು, ಕೊರೊನಾ ಸಂಬಂಧ ಇರುವ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸುತ್ತೇವೆ. ಊಟದ ವ್ಯವಸ್ಥೆ, ಕೋವಿಡ್‌ ಕೇಂದ್ರದಲ್ಲಿನ ಸಮಸ್ಯೆ ಎಲ್ಲವನ್ನು ಪರಿಹರಿಸಿ ಜನತೆಗೆ ಒಳ್ಳೆಯ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್‌, ತಾಲ್ಲೂಕು ಆರೋಗ್ಯಾಧಿಕಾರಿ, ಪೊಲೀಸ್‌ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ‘ತಾಲ್ಲೂಕಿನಲ್ಲಿ ಕೋವಿಡ್‌ ನಿರ್ವಹಣೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಬಾರದಂತೆ ಜಾಗೃತಿವಹಿಸಿ ಪ್ರಕರಣಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಕೋವಿಡ್‌ ಸೋಂಕು ತಡೆಗೆ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ. ನಂದಿನಿ, ಎಎಂಒ ಡಾ.ವಾಸು, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್‌ಬಾಬು, ನಗರಸಭೆ ಅಧ್ಯಕ್ಷ ಮಕ್ಬುಲ್‌ ಪಾಷ, ಉಪಾಧ್ಯಕ್ಷ ಗುಂಡಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಕೃಷ್ಣಮೂರ್ತಿ, ನಗರಸಭೆ ಸದಸ್ಯರಾದ ಕೋಟೆ ಕಿರಣ್‌, ಸ್ಟುಡಿಯೊ ಚಂದ್ರು, ಮೋಹನ್‌, ಕೆ.ಎನ್‌. ವೆಂಕಟೇಶ್‌ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು