ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ರೈತರಿಗೆ ಪರಿಹಾರವೂ ಇಲ್ಲ, ಭೂ ಮಾಲೀಕತ್ವವೂ ಇಲ್ಲ

ಐಟಿ‌ಐ‌ಆರ್‌ಗಾಗಿ 2,100 ಎಕರೆ ಭೂಸ್ವಾಧೀನ
Last Updated 26 ಜೂನ್ 2020, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ (ಐಟಿ‌ಐ‌ಆರ್) ಸೃಷ್ಟಿಗಾಗಿ ಭೂಸ್ವಾಧೀನಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರ ದಶಕ ಕಳೆದರೂ ಪ್ರಕ್ರಿಯೆ ಪೂರ್ಣಗೊಳಿಸದೆ ರೈತರನ್ನು ಅತಂತ್ರ ಸ್ಥಿತಿಯಲ್ಲಿಯೇ ಮುಂದುವರಿಸಿದೆ.

ಪಹಣಿಯಲ್ಲಿಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ ಎಂದು ನಮೂದಾಗಿದೆ. ಆದರೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಹೀಗಾಗಿ ರೈತರಿಗೆ ಪರಿಹಾರ ಸಿಕ್ಕಿಲ್ಲ. ಹಾಗೆಂದು ಅದೇ ಭೂಮಿಯಲ್ಲಿ ಸಾಗುವಳಿ ಮುಂದುವರಿಸಿದ್ದಾರಾದರೂ ಅದಕ್ಕೆ ಸಾಲ ಸೌಲಭ್ಯ ಸಿಗುವುದಿಲ್ಲ. ಏಕೆಂದರೆ ಪಹಣಿಯಲ್ಲಿ ಮಾಲೀಕತ್ವದ ಹೆಸರೇ ಬದಲಾಗಿದೆ. ಇದೇ ತಾಂತ್ರಿಕ ಕಾರಣದಿಂದ ಬೆಳೆ ನಷ್ಟವಾದರೂ ಪರಿಹಾರ ಕೋರುವಂತೆಯೂ ಇಲ್ಲ ಎನ್ನುತ್ತಾರೆ ರೈತರು.

ಒಂದೋ ಭೂಮಾಲೀಕತ್ವ ವಾಪಸ್‌ ಮಾಡಿ. ಇಲ್ಲವಾದರೆ ಪರಿಹಾರ ಕೊಟ್ಟು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂಬ ಒತ್ತಾಯ ರೈತರದ್ದು.

ಹಿಂದಿನ ಕಥೆ:ರಾಷ್ಟ್ರೀಯ ಹೆದ್ದಾರಿ–207ರ ರಸ್ತೆ ದೇವನಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ಹಾದು ಹೋಗುವ ಕುಂದಾಣ ಹೋಬಳಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಲವು ಗ್ರಾಮಗಳು ಒಟ್ಟು 29 ಗ್ರಾಮಗಳ ವ್ಯಾಪ್ತಿಯಲ್ಲಿ 12 ಸಾವಿರ ಎಕರೆ (40 ಚದರ ಕಿಲೋಮೀಟರ್‌) ಐಟಿ‌ಐ‌ಆರ್‌ಗೆ ಸ್ವಾಧೀನಪಡಿಸಿಕೊಳ್ಳಲು ಅಂದಿನ ರಾಜ್ಯ ಸರ್ಕಾರ 2010 ಜುಲೈ 29ರಂದು ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಅಂದು ರೈತರ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಸರ್ಕಾರ ಒಂದೆರಡು ಬಾರಿ ನೋಟಿಸ್ ನೀಡಿ ರೈತರ ಅಕ್ಷೇಪಗಳಿಗೆ ತಲೆ ಕೆಡಿಸಿಕೊಳ್ಳದೆ 2,100 ಎಕರೆಗೆ ಪ್ರಾಥಮಿಕ ಹಂತದ ಭೂಸ್ವಾಧೀನಕ್ಕೆ ಮುಂದಾಗಿ ರೈತರ ಕಂದಾಯ ದಾಖಲಾತಿಯಲ್ಲಿ ಐಟಿ‌ಐ‌ಆರ್‌ಗೆ ಮೀಸಲು ಎಂದು ಸಮೂದಿಸಿತ್ತು.

ಹೀಗೆ ಸ್ವಾಧೀನಗೊಂಡ ಭೂಮಿಯಲ್ಲಿ ದೇವನಹಳ್ಳಿ ತಾಲ್ಲೂಕಿನ ಭೈರದೇನಹಳ್ಳಿಯ 427, ದೊಡ್ಡಗೊಲ್ಲಹಳ್ಳಿ 281, ಚಪ್ಪರದಹಳ್ಳಿ 217, ಆರುವನಹಳ್ಳಿ 383 ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ 792 ಎಕರೆ ಪ್ರದೇಶ ಸೇರಿವೆ.

‘ರೈತರು ಜಮೀನು ಖರೀದಿಸಲು ಬೇರೆಡೆ ಭೂಮಿ ನೋಡಿದರು. ಕೆಲವರು ಕರಾರು ಮಾಡಿಸಿಕೊಂಡರು. ಆದರೆ, ಹಾಲಿ ಭೂಮಿಗೆ ಪರಿಹಾರ ಸಿಗದ ಕಾರಣ ಅತ್ತ ಹೊಸ ಭೂಮಿ ಖರೀದಿಸಲು ಮೊತ್ತವೂ ಇಲ್ಲ. ನೀಡಿದ ಮುಂಗಡ ಹಣ ವಾಪಸ್‌ ಬರುವಂತೆಯೂ ಇಲ್ಲ’ ಎಂದು ರೈತರು ಅಳಲು ತೊಡಿಕೊಂಡರು.

ಸರ್ಕಾರ ಮೊದಲ ಹಂತದ ಸ್ವಾಧೀನ ಪ್ರಕ್ರಿಯೆ ಪ್ರತಿಯೊಂದನ್ನು ರದ್ದುಗೊಳಿಸಿ ರೈತರ ಜಮೀನು ಯಥಾಸ್ಥಿತಿ ಉಳಿಸಲು ಕಂದಾಯ ಇಲಾಖೆಯಲ್ಲಿನ ಜಮೀನಿನ ಪಹಣಿಯಲ್ಲಿ ನಮೂದಿಸಿರುವ ಐಟಿ‌ಐ‌ಆರ್ ಎಂಬುದನ್ನು ತೆರವುಗೊಳಿಸಬೇಕು. ನೋಂದಣಿ ಇಲಾಖೆಗೆ ನೀಡಿರುವ ಸುತ್ತೋಲೆಯನ್ನು ಹಿಂಪಡೆಯಬೇಕು.1 ಇಲ್ಲದಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಬೆಂಗಳೂರು ವಿಭಾಗೀಯ ಹಸಿರು ಸೇನೆ ಸಂಚಾಲಕ ಕೆ.ಎಸ್.ಹರೀಶ್ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT