ಜಿಂದಾಲ್‌ಗೆ ಭೂಮಿ: ರೈತ ಸಂಘ ವಿರೋಧ

ಗುರುವಾರ , ಜೂಲೈ 18, 2019
22 °C

ಜಿಂದಾಲ್‌ಗೆ ಭೂಮಿ: ರೈತ ಸಂಘ ವಿರೋಧ

Published:
Updated:
Prajavani

ರಾಮನಗರ: ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ 3667 ಎಕರೆ ಪ್ರದೇಶವನ್ನು ನೀಡಿ ಲೂಟಿ ಮಾಡಲು ಮುಂದಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಎ. ಲಕ್ಷ್ಮೀನಾರಾಯಣ ಗೌಡ ಆರೋಪಿಸಿದರು.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ಜಿಂದಾಲ್ ಕಾರ್ಖಾನೆಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇದೊಂದು ಕೆಟ್ಟ ನಿರ್ಧಾರ. ರೈತರ ಹಿತಾಸಕ್ತಿಯ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ಶ್ರೀಮಂತರಾದರೇ ಏಕಾಏಕಿ ಇಷ್ಟು ಪ್ರಮಾಣದ ಭೂಮಿಯನ್ನು ಸರ್ಕಾರ ನೀಡುತ್ತದೆ. ಆದರೆ, ಬಡವರಿಗೆ ಜೀವನ ನಡೆಸಲು 1 ಎಕರೆ ಭೂಮಿ ನೀಡಲು 50 ವರ್ಷದಿಂದ ಅಲೆದಾಡುತ್ತಿರುವ ಉದಾಹರಣೆ ಇದೆ ಎಂದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತವಿದ್ದಾಗ, ಭೂಸ್ವಾಧೀನ ಕಾಯ್ದೆಯನ್ನು ರೂಪಿಸಿತ್ತು. ನಂತರ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಈ ಕಾಯ್ದೆಯ ಅಧಿಕಾರವನ್ನು ರಾಜ್ಯಗಳಿಗೆ ವಹಿಸಿದೆ. ಇದು ರೈತರನ್ನು ಶೋಷಣೆ ಮಾಡಲು ಅಸ್ತ್ರ ನೀಡಿದಂತಾಗಿದೆ. ಕೇಂದ್ರ ಸರ್ಕಾರ ಕಿಸಾನ್ ಸನ್ಮಾನ್ ಯೋಜನೆ ಜಾರಿಗೆ ತರುವ ಮೂಲಕ ರೈತರ ತುಟಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಯೋಜನೆ ಮೂಲಕ ಕಂತಿನ ರೂಪದಲ್ಲಿ ವಾರ್ಷಿಕವಾಗಿ ನೀಡಲಾಗುವ ₨6 ಸಾವಿರ ಹಣದಲ್ಲಿ ಹೊಲಕ್ಕೆ ಬೇಕಾದಷ್ಟು ರಸಗೊಬ್ಬರ ಸಹ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

2020ರಲ್ಲಿ ದೇಶದ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ರೈತರ ಅಭಿವೃದ್ಧಿ ಹಾಗೂ ಕಲ್ಯಾಣಕ್ಕೆ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಎಂದು ಅವರು ಹೇಳಿದರು.

ಮುಂದಿನ ಸೋಮವಾರ ಬೆಂಗಳೂರಿನಲ್ಲಿ ರಾಜ್ಯದಲ್ಲಿನ ವಿವಿಧ ರೈತ ಸಂಘದ ವಿಲೀನ ಕುರಿತು ಸಭೆ ಇದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ಇತರೆ ಪ್ರದೇಶಗಳ ರೈತ ಸಂಘದ ಅಧ್ಯಕ್ಷರು ಆಗಮಿಸಲಿದ್ದಾರೆ. ಇದೇ 21ರಂದು ರೈತ ಸಂಘದ ವತಿಯಿಂದ ಹಾವೇರಿ ಜಿಲ್ಲೆಯಲ್ಲಿ 39ನೇ ರೈತ ಹುತಾತ್ಮರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಹಾವೇರಿಯ ಹುಕ್ಕೇರಿ ಮಠದಿಂದ ಸಿದ್ದಪ್ಪ ಸರ್ಕಲ್ ವರೆಗೆ ಮೆರವಣಿಗೆ ಸಾಗಲಿದೆ ಎಂದು ತಿಳಿಸಿದರು.

ಈಗಾಗಲೆ ಜನರು ಮೂರು ಪಕ್ಷಗಳಿಂದ ಬೇಸತ್ತಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿರುವುದೇ ಇದಕ್ಕೆ ಉದಾಹರಣೆಯಾಗಿದೆ. ಸ್ವಾತಂತ್ರ್ಯ ಬಂದ ನಂತರವು ರೈತರ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಪ್ರಕೃತಿಯ ಮೇಲೆ ಮಾನವ ನಿರಂತರವಾಗಿ ದಬ್ಬಾಳಿಕೆ ಮಾಡುತ್ತಿರುವುದರಿಂದ ಬರಗಾಲ ಉಂಟಾಗುತ್ತಿದೆ ಎಂದರು.

ರೈತ ಸಂಘದ ಪದಾಧಿಕಾರಿಗಳಾದ ಟಿ. ಪುಟ್ಟಯ್ಯ, ದೇವರಾಜು, ಹೊನ್ನೇಗೌಡ, ಆನಂದರಾವ್, ಮಾದೇವಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !