ಶನಿವಾರ, ಮಾರ್ಚ್ 6, 2021
28 °C
ಟ್ರ್ಯಾಕ್ಟರ್ ಸಂಚಾರಕ್ಕೆ ಪೊಲೀಸರಿಂದ ತಡೆ; ಖಾಸಗಿ ವಾಹನಗಳಲ್ಲಿ ಪ್ರಯಾಣ

ಪೆರೇಡ್: ಜಿಲ್ಲೆಯ ರೈತರು ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬೆಂಗಳೂರಿನಲ್ಲಿ ಮಂಗಳವಾರ ನಡೆದ ಟ್ರ್ಯಾಕ್ಟರ್‌ ಪರೇಡ್‌ನಲ್ಲಿ ಜಿಲ್ಲೆಯ ನೂರಾರು ಮಂದಿ ಭಾಗಿಯಾದರು. ಆದರೆ ಪೊಲೀಸರು ಜಿಲ್ಲೆಯಿಂದ ಟ್ರ್ಯಾಕ್ಟರ್‌ಗಳ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದರು.

ನೆರೆಯ ಮೈಸೂರು, ಚಾಮರಾಜನಗರ, ಮಂಡ್ಯ ಮೊದಲಾದ ಜಿಲ್ಲೆಗಳ ಕೆಲವು ರೈತರು ಸೋಮವಾರ ರಾತ್ರಿಯೇ ತಮ್ಮ ಟ್ರ್ಯಾಕ್ಟರ್ ಹಾಗೂ ಖಾಸಗಿ ವಾಹನಗಳ ಮೂಲಕ ರಾಮನಗರದತ್ತ ಧಾವಿಸಿದ್ದರು. ಹೀಗೆ ಬಂದವರಿಗೆ ಚನ್ನಪಟ್ಟಣದ ಬೈರಾಪಟ್ಟಣ ಸರ್ಕಾರಿ ಶಾಲೆ ಆವರಣದಲ್ಲಿ ರೈತ ಸಂಘಟನೆಗಳ ಮುಖಂಡರು ಊಟ ಹಾಗೂ ವಸತಿಯ ವ್ಯವಸ್ಥೆ ಮಾಡಿದ್ದರು. ಮುಂಜಾನೆ ಇವರೊಟ್ಟಿಗೆ ನೆರೆಯ ಜಿಲ್ಲೆಗಳಿಂದ ಇನ್ನಷ್ಟು ರೈತರು ಒಗ್ಗೂಡಿದರು. ಎಲ್ಲರೂ ಒಟ್ಟಾಗಿ ಬೆಂಗಳೂರಿನತ್ತ ಹೆಜ್ಜೆ ಇಟ್ಟರು. ರೈತರ ಕೊರಳಲ್ಲಿ, ಟ್ರ್ಯಾಕ್ಟರ್‌ಗಳ ಮೇಲೆ ಹಸಿರು ಶಾಲುಗಳು ರಾರಾಜಿಸುತ್ತಿದ್ದವು. ಕೆಲವು ವಾಹನಗಳಿಗೆ ರಾಷ್ಟ್ರಧ್ವಜಗಳನ್ನು ಕಟ್ಟಲಾಗಿತ್ತು.

ಟ್ರ್ಯಾಕ್ಟರ್‌ಗಳ ಓಡಾಟಕ್ಕೆ ಪೊಲೀಸರು ನಿರ್ಬಂಧ ವಿಧಿಸಿತ್ತು. ಆದಾಗ್ಯೂ ಅನೇಕ ಮಂದಿ ತಮ್ಮ ವಾಹನದೊಂದಿಗೆ ಚನ್ನಪಟ್ಟಣದತ್ತ ಬಂದಿದ್ದರು. ಅಲ್ಲಿ ಅವರನ್ನು ತಡೆದ ಪೊಲೀಸರು ಬೆರಳೆಣಿಕೆಯ ಟ್ರ್ಯಾಕ್ಟರ್‌ಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಿದರು. ಉಳಿದವರು ಖಾಸಗಿ ವಾಹನ ಇಲ್ಲವೇ ಬಸ್‌ಗಳ ಮೂಲಕ ಪ್ರಯಾಣಿಸುವಂತೆ ರೈತರ ಮನವೊಲಿಸಿದರು. ಅಂತಿಮವಾಗಿ ಎರಡು ಕೆಎಸ್‌ಆರ್‌ಟಿಸಿ ಬಸ್, 2 ಮಿನಿ ಬಸ್, 4 ಟೆಂಪೊ ಮೂಲಕ ರೈತರು ಪ್ರಯಾಣ ಮುಂದುವರಿಸಿದರು. ಇನ್ನೂ ಕೆಲವರು ಬೈಕ್‌ ಹಾಗೂ ಕಾರ್‌ಗಳ ಮೂಲಕವೇ ಬೆಂಗಳೂರಿನತ್ತ ಹೊರಟರು.

ಮಂಡ್ಯ, ಚನ್ನಪಟ್ಟಣ ಗಡಿ ದಾಟಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಕೆಲವು ರೈತರು ಬೆಂಗಳೂರಿನತ್ತ ತಮ್ಮ ಟ್ರ್ಯಾಕ್ಟರ್ ಸಂಚಾರ ಮುಂದುವರಿಸಿದರು. ಅಂತಹವರನ್ನು ಪೊಲೀಸರು ಬಿಡದಿಯ ಬೈರಮಂಗಲ ವೃತ್ತದ ಬಳಿ ತಡೆದರು. ಮುಂದೆ ರೈತರು ಅನಿವಾರ್ಯವಾಗಿ ಖಾಸಗಿ ವಾಹನಗಳ ಮೂಲಕ ಬೆಂಗಳೂರಿನ ಫ್ರೀಡಂ ಪಾರ್ಕಿನತ್ತ ಪ್ರಯಾಣ ಬೆಳೆಸಿದರು.

ಕಾರ್ಮಿಕರ ಬೆಂಬಲ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ನೌಕರರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಇದೇ ವೇಳೆ ಕಾರ್ಮಿಕರು ರೈತರಿಗೆ ಉಪಾಹಾರದ ವ್ಯವಸ್ಥೆ ಮಾಡಿದ್ದರು. ಉಪಾಹಾರದ ನಂತರ ಕಾರ್ಮಿಕರು ಸಹ ರೈತರ ಜೊತೆಗೂಡಿ ಬೆಂಗಳೂರಿಗೆ ತೆರಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು