ಕನಕಪುರ: ರಾಜ್ಯ ಸರ್ಕಾರವು ಸಾತನೂರು ಹೋಬಳಿ ಕೇಂದ್ರವನ್ನು ನೂತನ ತಾಲ್ಲೂಕಾಗಿ ಹಾಗೂ ಉಪ ನಗರವಾಗಿ ಎರಡು ತಿಂಗಳಲ್ಲಿ ಘೋಷಣೆ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡಳ್ಳಿ ಅನುಕುಮಾರ್ ಒತ್ತಾಯಿಸಿದರು.
ತಾಲ್ಲೂಕಿನ ಸಾತನೂರು ಹೋಬಳಿ, ಕುರುಬಳ್ಳಿ ಗ್ರಾಮದಲ್ಲಿ ನೂತನ ಗ್ರಾಮ ಶಾಖೆಯನ್ನು ಮತ್ತು ರೈತ ಸಂಘದ ನಾಮಫಲಕವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರ ಹಿಂದುಳಿದಿರುವಂತಹ ಸಾತನೂರು ಹೋಬಳಿಯನ್ನು ನೂತನ ತಾಲ್ಲೂಕಾಗಿ ರಚನೆ ಮಾಡುವಂತೆ ಹಲವು ವರ್ಷಗಳಿಂದ ಈ ಹೋರಾಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಅಸ್ತಿತ್ವಕ್ಕೆ ಬಂದ ಸರ್ಕಾರಗಳು ಸಾತನೂರು ನೂತನ ತಾಲ್ಲೂಕಾಗಿ ರಚನೆ ಮಾಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಾತನೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿ ನಿಧಿಸುತ್ತಿದ್ದ ಡಿ.ಕೆ.ಶಿವಕುಮಾರ್ ಅವರು ಈಗಿನ ರಾಜ್ಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ, ಈಗಲಾದರೂ ಅವರು ಸಾತನೂರನ್ನು ಉಪನಗರವಾಗಿ ತಾಲ್ಲೂಕು ಕೇಂದ್ರವಾಗಿ ರಚನೆ ಮಾಡಬೇಕೆಂದು ಆಗ್ರಹಿಸಿದರು.
ನೂತನ ತಾಲ್ಲೂಕಾಗಿ ರಚನೆ ಮಾಡಲು ಎರಡು ತಿಂಗಳ ಗಡುವು ನೀಡಲಾಗುವುದು, ಅಷ್ಟರೊಳಗೆ ನೂತನ ತಾಲ್ಲೂಕಿನ ರಚನೆ ಮಾಡದಿದ್ದರೆ ರೈತ ಸಂಘದಿಂದ ಸಾತನೂರು ಹೋಬಳಿ ಕೇಂದ್ರದಲ್ಲಿ ಬೃಹತ್ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಅಧ್ಯಕ್ಷ ಶಿವ ಗೂಳಿಗೌಡ, ಉಪಾಧ್ಯಕ್ಷ ಪುಟ್ಟಸ್ವಾಮಿ, ಸಾತನೂರು ಹೋಬಳಿ ಅಧ್ಯಕ್ಷ ರಮೇಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಧನಂಜಯ, ಕಸಬಾ ಅಧ್ಯಕ್ಷ ನಾರಾಯಣ್, ಸಂಘಟನಾ ಕಾರ್ಯದರ್ಶಿ ಪ್ರದೀಪ್, ಶೇಖರ್ ಸೇರಿದಂತೆ ರೈತ ಮುಖಂಡರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.