ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ವಿರೋಧಿ ನಿಲುವು ಕೈಬಿಡಲು ಒತ್ತಾಯಿಸಿ ಪ್ರತಿಭಟನೆ

ಭಾರತ್‌ ಬಂದ್ ಬೆಂಬಲಿಸಿ ರೈತ ಸಂಘ ನೇತೃತ್ವ
Last Updated 26 ಮಾರ್ಚ್ 2021, 13:26 IST
ಅಕ್ಷರ ಗಾತ್ರ

ರಾಮನಗರ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಶುಕ್ರವಾರ ಕರೆ ನೀಡಿದ್ದ ಭಾರತ್ ಬಂದ್ ಬೆಂಬಲಿಸಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ರಾಮು ನೇತೃತ್ವದಲ್ಲಿ ನಗರದ ಎಪಿಎಂಸಿ ಆವರಣದಲ್ಲಿ ಸಮಾವೇಶಗೊಂಡ ರೈತರು ಅಲ್ಲಿಂದ ಐಜೂರು ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಂ. ರಾಮು ‘ಸರ್ಕಾರ ಉದ್ದೇಶಿತ ಕೃಷಿ ಕಾಯ್ದೆಗಳ ಮೂಲಕ ರೈತರನ್ನು ಬೀದಿ ಪಾಲು ಮಾಡಲು ಹೊರಟಿದೆ. ಇದನ್ನು ವಿರೋಧಿಸಿ ಇಡೀ ದೇಶದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದಾಗ್ಯೂ ರೈತ ಹೋರಾಟದ ಬಗ್ಗೆ ಪ್ರಧಾನಿಗಳು ತುಟಿ ಬಿಚ್ಚದಿರುವುದು ಸರಿಯಲ್ಲ. ಇದು ಕೇಂದ್ರ ಸರ್ಕಾರದ ವಿನಾಶಕ್ಕೆ ಕಾರಣವಾಗಲಿದೆ’ ಎಂದು ಎಚ್ಚರಿಸಿದರು.

ಸಂಘಟನೆಯ ಜಿಲ್ಲಾ ಅಧ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಆಕ್ರೋಶವನ್ನು ಲೆಕ್ಕಿಸದೇ ವಿವಾದಿತ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿರುವುದು ವಿಷಾದನೀಯ. ಕಾಯ್ದೆಗಳು ಜನತೆಯ ಒಳಿತಿಗೆ ಇರಬೇಕು. ಇದರ ಹೊರತು ಜನತೆಯನ್ನೇ ಸುಲಿಯುವ ಕೆಲಸಕ್ಕೆ ಮುಂದಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಸೇರಿದಂತೆ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳ ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಂದ್‌ ಕರೆ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲೆಡೆ ಬಂದೋಬಸ್ತ್‌ ಮಾಡಿದ್ದರು.

ನಡೆಯದ ಬಂದ್‌

ಭಾರತ್‌ ಬಂದ್ ಕರೆಯು ಜಿಲ್ಲೆಯಲ್ಲಿ ಕೇವಲ ಪ್ರತಿಭಟನೆಗಳಿಗೆ ಮಾತ್ರ ಸೀಮಿತವಾಗಿತ್ತು. ಅದನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಯಾವುದೇ ಘಟನೆಗಳು ನಡೆಯಲಿಲ್ಲ. ಜನಜೀವನ ಎಂದಿನಂತೆ ಇದ್ದು, ವ್ಯಾಪಾರ–ವಹಿವಾಟು ನಡೆಯಿತು. ವಾಹನಗಳ ಓಡಾಟವೂ ಸಹಜವಾಗಿದ್ದು, ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT