ಶನಿವಾರ, ಮೇ 8, 2021
27 °C
ಜಿಲ್ಲೆಯ ಕೋವಿಡ್‌ ಆಸ್ಪತ್ರೆಗಳಲ್ಲಿಲ್ಲ ಜಾಗ * ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆಗೆ ಅವಕಾಶ

ರಾಮನಗರ: ಹಾಸಿಗೆ ಭರ್ತಿ ‘ಪ್ರತ್ಯೇಕ ವಾಸ’ವೇ ಗತಿ!

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ದಾಖಲೆ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಹೀಗಾಗಿ ಇಲ್ಲಿನ ಕೋವಿಡ್ ಆಸ್ಪತ್ರೆಗಳೆಲ್ಲ ಭರ್ತಿಯಾಗಿದ್ದು, ಬಹುಪಾಲು ರೋಗಿಗಳಿಗೆ ಆರೋಗ್ಯ ಇಲಾಖೆ ‘ಹೋಮ್‌ ಐಸೋಲೇಷನ್‌’ಗೆ ಸೂಚನೆ ನೀಡುತ್ತಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರ ಹೋಮ್ ಐಸೋಲೇಷನ್‌ಗೆ ಅವಕಾಶ ಕಲ್ಪಿಸಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಈವರೆಗೂ ಇದಕ್ಕೆ ಅವಕಾಶ ನೀಡಿರಲಿಲ್ಲ. ಸೋಂಕಿತರಿಗೆ ಮನೆಯಲ್ಲೇ ಇರಲು ಅವಕಾಶ ದೊರೆತಲ್ಲಿ ಅವರು ಅತ್ತಿಂದಿತ್ತ ಓಡಾಡಿ ಮತ್ತೊಂದಿಷ್ಟು ಮಂದಿಗೆ ಸೋಂಕು ಹರಡಿಸಬಹುದು ಎನ್ನುವ ಆತಂಕ ಇತ್ತು. ಆದರೆ, ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟುತ್ತಿದ್ದಂತೆ ಜಿಲ್ಲಾಡಳಿತ ಅನಿವಾರ್ಯವಾಗಿ ಹೋಮ್‌ ಇಸೋಲೇಷನ್‌ಗೆ ಅನುಮತಿ ನೀಡಿದೆ.

ಏ. 23ರಿಂದ ಜಿಲ್ಲೆಯಲ್ಲಿ ಸೋಂಕಿತರಿಗೆ ಮನೆಯಲ್ಲೇ ಪ್ರತ್ಯೇಕ ವಾಸಕ್ಕೆ ಅನುಮತಿ ನೀಡಲಾಗುತ್ತಿದೆ. ಸೋಂಕಿತರು ತಾವು ಇದ್ದಲ್ಲಿಯೇ ವೈದ್ಯರ ಮಾರ್ಗದರ್ಶನ ಪಡೆದು ತಮ್ಮನ್ನು ತಾವೇ ಆರೈಕೆ ಮಾಡಿಕೊಳ್ಳಲು ಅವಕಾಶ ಸಿಕ್ಕಿದೆ. ಭಾನುವಾರದ ಅಂತ್ಯಕ್ಕೆ ಜಿಲ್ಲೆಯ 1,612 ಮಂದಿ ಈ ಅವಕಾಶ ಪಡೆದುಕೊಂಡಿದ್ದಾರೆ. ಭಾನುವಾರ ರಾಮನಗರದಲ್ಲಿ ಒಟ್ಟು 563 ಪ್ರಕರಣಗಳು ದೃಢಪಟ್ಟಿದ್ದು, ಇವರಲ್ಲಿ 457 ಮಂದಿಗೆ ಹೋಮ್‌ ಇಸೋಲೇಷನ್‌ ಆಯ್ಕೆ ನೀಡಲಾಗಿದೆ.

ಎಷ್ಟಿವೆ ಹಾಸಿಗೆ: ಆರೋಗ್ಯ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಜಿಲ್ಲೆಯಲ್ಲಿ ಕಂದಾಯ ಭವನ ಕೋವಿಡ್‌ ರೆಫರಲ್‌ ಆಸ್ಪತ್ರೆಯಲ್ಲಿ 200, ಹಾರೋಹಳ್ಳಿಯ ದಯಾನಂದ ಸಾಗರ್‌ ಆಸ್ಪತ್ರೆಯಲ್ಲಿ 100, ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ 50ರಂತೆ ಒಟ್ಟು 200 ಮತ್ತು ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 600 ಹಾಸಿಗೆಯಂತೆ 1 ಸಾವಿರ ಹಾಸಿಗೆಗಳನ್ನು ಮೀಸಲಿಡಲಾಗಿದೆ.

ಆದರೆ ವಾಸ್ತವದಲ್ಲಿ ಇಷ್ಟು ಪ್ರಮಾಣದ ಹಾಸಿಗೆಗಳು ಕೋವಿಡ್ ರೋಗಿಗಳಿಗೆ ಲಭ್ಯ ಇಲ್ಲ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಈವರೆಗೆ ಗರಿಷ್ಠ 180–200 ರೋಗಿಗಳನ್ನಷ್ಟೇ ದಾಖಲು ಮಾಡಲಾಗಿದೆ. ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಇನ್ನೂ ಸುಸಜ್ಜಿತವಾದ ವ್ಯವಸ್ಥೆಗಳಿಲ್ಲ. ಹೀಗಾಗಿ ಒಟ್ಟಾರೆ 500–600 ಹಾಸಿಗೆಗಳಷ್ಟೇ ರೋಗಿಗಳಿಗೆ ಸೇವೆ ನೀಡಲು ಸಿದ್ಧವಿದೆ ಎನ್ನಲಾಗಿದೆ.

‘ಸದ್ಯ ಆಮ್ಲಜನಕ ಪೂರೈಕೆ ವ್ಯವಸ್ಥೆ ಹೊಂದಿರುವ ಬೆಡ್‌ಗಳ ಸಂಖ್ಯೆ ತಕ್ಕಮಟ್ಟಿಗೆ ಇದೆ. ದಯಾನಂದ ಸಾಗರ್‌ ಆಸ್ಪತ್ರೆಯಲ್ಲಿ 100, ಆರ್‌.ಆರ್‌. ಆಸ್ಪತ್ರೆಯಲ್ಲಿ 150, ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ 50 ಆಕ್ಸಿನೇಟರ್ ಆಸ್ಪತ್ರೆಗಳ ವ್ಯವಸ್ಥೆ ಮಾಡಲಾಗಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಿರಂಜನ್‌.

ಖಾಸಗಿ ಆಸ್ಪತ್ರೆಗಳಲ್ಲೂ ಹಾಸಿಗೆಗಳಿಲ್ಲ: ಜಿಲ್ಲಾ ಕೇಂದ್ರವಾದ ರಾಮನಗರ ಸೇರಿದಂತೆ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿ ಸದ್ಯ ಕೋವಿಡ್ ರೋಗಿಗಳಿಗೆ ಹಾಸಿಗೆ ಲಭ್ಯವಿಲ್ಲ ಎಂಬ ಉತ್ತರವೇ ಸಿಗುತ್ತಿದೆ. ದೊಡ್ಡಮಟ್ಟದ ಖಾಸಗಿ ಆಸ್ಪತ್ರೆಗಳಲ್ಲೂ ಶೇ 50ರಷ್ಟು ಹಾಸಿಗೆಯನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡುವಂತೆ ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ.

ರೋಗ ಲಕ್ಷಣಗಳಿಲ್ಲದ, ಮನೆಯಲ್ಲೇ ಚಿಕಿತ್ಸೆ ಪಡೆಯಬಯಸುವವರು ಐಸೋಲೇಷನ್‌ ಆಯ್ಕೆ ಪಡೆದುಕೊಳ್ಳಬಹುದು. ಮನೆಯಲ್ಲಿ ಪ್ರತ್ಯೇಕ ಕೋಣೆ ಮತ್ತು ಶೌಚಾಲಯ ವ್ಯವಸ್ಥೆ ಇರಬೇಕು. ಇತರ ಸದಸ್ಯರಿಂದ ದೂರ ಉಳಿಯಬೇಕು. ಕನಿಷ್ಠ ಹತ್ತು ದಿನಗಳ ಕಾಲ ಯಾವುದೇ ಕಾರಣಕ್ಕೂ ಕೊಠಡಿ ಬಿಟ್ಟು ಹೊರಬರಬಾರದು ಎಂದು ಷರತ್ತು ವಿಧಿಸಲಾಗಿದೆ. ಹೀಗೆ ಚಿಕಿತ್ಸೆ ಪಡೆಯುವವರ ಮೇಲೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾವಹಿಸಲಿದ್ದು, ಅಗತ್ಯ ಔಷಧೋಪಚಾರ ಮತ್ತು ಮಾರ್ಗದರ್ಶನ ನೀಡಲಿದ್ದಾರೆ. ನಿತ್ಯ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿಕೊಳ್ಳಲಿದ್ದಾರೆ.

‘ಹೋಮ್‌ ಇಸೋಲೇಷನ್‌ನಲ್ಲಿ ಇರುವವರಿಗೆ ವಾರಕ್ಕೆ ಆಗುವಷ್ಟು ಔಷಧಗಳನ್ನು ಇಲಾಖೆ ನೀಡುತ್ತಿದೆ. ಜೊತೆಗೆ ಸ್ಥಳೀಯ ವೈದ್ಯರು, ಪಿಡಿಒ ಇಲ್ಲವೇ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ನೀಡುತ್ತಿದ್ದೇವೆ. ತಾಲ್ಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಅವರಿಗೆ ಕರೆ ಮಾಡಿ ವಿಚಾರಿಸಿಕೊಳ್ಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು