ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ನೀರಿಲ್ಲದೆ ನೆಲ ಕಚ್ಚಿದ ಮೀನುಗಾರಿಕೆ

Published 2 ಮೇ 2024, 3:19 IST
Last Updated 2 ಮೇ 2024, 3:19 IST
ಅಕ್ಷರ ಗಾತ್ರ

ರಾಮನಗರ: ಬರ, ಮಳೆ ಕೊರತೆ ಹಾಗೂ ತೀವ್ರ ಬಿಸಿಲಿನಿಂದಾಗಿ ಜಿಲ್ಲೆಯಲ್ಲಿ ಮೀನುಗಾರಿಕೆ ನೆಲ ಕಚ್ಚಿದೆ. ಬದುಕಿಗಾಗಿ ಮೀನುಗಾರಿಕೆಯನ್ನೇ ನೆಚ್ಚಿಕೊಂಡು ಬಂದಿರುವ ಕುಟುಂಬಗಳು ಬತ್ತಿರುವ ಕೆರೆಗಳ ಮುಂದೆ ಕಣ್ಣೀರು ಹಾಕುವ ಸ್ಥಿತಿ ಬಂದಿದೆ. ಅತ್ತ ಮಳೆಯೂ ಇಲ್ಲದೆ, ಇತ್ತ ನೆತ್ತಿ ಸುಡುವ ಬಿಸಿಲಿಗೆ ನಲುಗಿರುವ ಮೀನುಗಾರರ ಬದುಕು ಸಂಕಷ್ಟದಲ್ಲಿದೆ.

ಜಿಲ್ಲೆಯ ಐದೂ ತಾಲ್ಲೂಕುಗಳ ಸುಮಾರು 69 ಕೆರೆಗಳನ್ನು ಮೀನುಗಾರಿಕೆ ನಡೆಯುತ್ತದೆ. ಸುಮಾರು 6,200 ಕುಟುಂಬಗಳು ತಮ್ಮ ಕುಲಕುಸಬಾದ ಮೀನುಗಾರಿಕೆಯನ್ನೇ ನೆಚ್ಚಿಕೊಂಡು ಬದುಕುತ್ತಿವೆ. ಆದರೆ, ಈ ವರ್ಷ ಮಳೆ ಕೊರತೆಯಿಂದಾಗಿ ಹಲವು ಕೆರೆಗಳು ಬತ್ತಿ ಹೋಗಿವೆ. ಕೆಲ ಕೆರೆಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವುದು ಮೀನುಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಶೇ 75ರಷ್ಟು ನಷ್ಟ: ‘ಬರಗಾಲದಿಂದಾಗಿ ಮೀನುಗಾರರು ತೀವ್ರ ಕಷ್ಟಕ್ಕೆ ಸಿಲುಕಿದ್ದೇವೆ. ಇಂತಹ ಸ್ಥಿತಿ ಎಂದಿಗೂ ಬಂದಿರಲಿಲ್ಲ. ಈ ಮಳೆ  ಇಲ್ಲದಿರುವುದರಿಂದ ಎಲ್ಲಾ ಕೆರೆಗಳಲ್ಲೂ ಶೇ 80ರಷ್ಟು ಮೀನು ಉತ್ಪಾದನೆ ಕುಸಿದಿದೆ. ಮಳೆರಾಯ ಏನಾದರೂ ಕೃಪೆ ತೋರಿದರೆ ಶೇ 20ರಷ್ಟಾದರೂ ಮೀನುಗಳು ಉಳಿಯುತ್ತವೆ. ಇಲ್ಲದಿದ್ದರೆ ಅದೂ ಇಲ್ಲ’ ಎಂದು ಮೀನುಗಾರಿಕೆ ಗುತ್ತಿಗೆದಾರ ಬಾನಂದೂರಿನ ಚರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆಗಳಷ್ಟೇ ಅಲ್ಲದೆ, ಮಳೆಯಾಶ್ರಿತ ನೀರಿನ ತೊಟ್ಟಿಗಳಲ್ಲೂ ಮೀನು ಸಾಕಾಣೆ ಮಾಡುತ್ತೇವೆ. ಆದರೆ, ಈ ಸಲ ನೀರಿಲ್ಲದಿರುವುದರಿಂದ ತೊಟ್ಟಿಗಳು ಖಾಲಿ ಬಿದ್ದಿವೆ. ಇನ್ನು ಕೆರೆಗಳಿಗೆ ಕಳೆದ ವರ್ಷ ಬಿಟ್ಟಿರುವ ಮರಿಗಳು ಸಹ ಸರಿಯಾಗಿ ಬೆಳವಣಿಗೆ ಹೊಂದದಿರುವುದರಿಂದ ಅಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಅಸಹಾಯಕತೆ ತೋಡಿಕೊಂಡರು.

ದಿಕ್ಕು ತೋಚುತ್ತಿಲ್ಲ: ‘ಎರಡು ವರ್ಷದ ಹಿಂದೆ ಉತ್ತಮ ಮಳೆಯಾಗಿ ಕೋಡಿ ಬಿದ್ದಿದ್ದ ಕೆರೆಯನ್ನು ಮೀನುಗಾರಿಕೆಗೆ ಗುತ್ತಿಗೆ ಪಡೆದಿದ್ದೆವು. 10 ಲಕ್ಷದಿಂದ 15 ಲಕ್ಷ ಮೀನುಗಳು ಮೀನುಗಳ ಉತ್ಪಾದನೆಯಾಗುವ ನಿರೀಕ್ಷೆ ಇತ್ತು. ಆದರೆ, ಮಳೆ ಇಲ್ಲದೆ ಎದುರಾದ ಭೀಕರ ಬರದಿಂದಾಗಿ ಎಲ್ಲವೂ ಹುಸಿಯಾಯಿತು’ ಎಂದು ಮಾಗಡಿ ತಾಲ್ಲೂಕಿನ ಚಿಕ್ಕಪರಂಗಿಪಾಳ್ಯದ ಮೀನುಗಾರ ಶಿವಕುಮಾರ್ ಹೇಳಿದರು.

‘ಬೆಸ್ತ ಸಮುದಾಯದವರೇ ಸೇರಿಕೊಂಡಿರುವ ಶಿವಗಂಗಾ ಬೆಸ್ತರ ಮೀನುಗಾರರ ಸಹಕಾರ ಸಂಘದಿಂದ ನಾವು ಕೆರೆಗಳನ್ನು ಗ್ರಾಮದವರು ಗುತ್ತಿಗೆ ತೆಗೆದುಕೊಂಡು ಮೀನುಗಾರಿಕೆ ಮಾಡುತ್ತೇವೆ. ಆದರೆ, ಈ ಸಲ ಎಲ್ಲರಿಗೂ ತುಂಬಾ ನಷ್ಟವಾಗಿದೆ. ಕೆಲವರು ಬದುಕಿಗಾಗಿ ವಿಧಿ ಇಲ್ಲದೆ ಬೇರೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ’ ಎಂದು ತಮ್ಮ ಪರಿಸ್ಥಿತಿ ಬಿಚ್ಚಿಟ್ಟರು.

ರಾಮನಗರ ತಾಲ್ಲೂಕಿನ ಬಾನಂದೂರಿನ ಹಿರೇಗೌಡನಕೆರೆಯ ಸದ್ಯದ ಸ್ಥಿತಿ
ರಾಮನಗರ ತಾಲ್ಲೂಕಿನ ಬಾನಂದೂರಿನ ಹಿರೇಗೌಡನಕೆರೆಯ ಸದ್ಯದ ಸ್ಥಿತಿ
ಏಪ್ರಿಲ್ 30ಕ್ಕೆ ಕೆರೆಗಳ ಗುತ್ತಿಗೆ ಅವಧಿ ಮುಗಿದಿದೆ. ಮೀನುಗಾರರು ಸಂಕಷ್ಟದಲ್ಲಿರುವುದರಿಂದ ಸರ್ಕಾರ ಪಾವತಿರಹಿತವಾಗಿ ನವೀಕರಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು
– ಚರಣ್ ಮೀನುಗಾರಿಕೆ ಗುತ್ತಿಗೆದಾರ ಬಾನಂದೂರು ರಾಮನಗರ ತಾಲ್ಲೂಕು
ಮೀನುಗಾರಿಕೆಯಿಂದ ಲಾಭವಾಗುವುದಿರಲಿ ಸಾಲ ಮಾಡಿ ಹಾಕಿರುವ ಬಂಡವಾಳವೂ ಕೈ ಸೇರಿಲ್ಲ. ಸರ್ಕಾರದವರು ನಮ್ಮ ನೆರವಿಗೆ ಬರದಿದ್ದರೆ ಬದುಕು ಬೀದಿಗೆ ಬರುವುದು ಗ್ಯಾರಂಟಿ
– ಶಿವಕುಮಾರ್ ಮೀನುಗಾರ ಪರಂಗಿಚಿಕ್ಕನಪಾಳ್ಯ ಮಾಗಡಿ ತಾಲ್ಲೂಕು

ಸಾಯುತ್ತಿವೆ ಮೀನಿನ ಮರಿಗಳು ‘

ಕೆರೆಗಳಲ್ಲಿ ನೀರಿನ ಪ್ರಮಾಣ ತೀವ್ರ ಕುಸಿದಿರುವುದರಿಂದ ಮೀನಿನ ಮರಿಗಳು ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆಯಾಗಿಲ್ಲದಿರುವುದು ಒಂದೆಡೆಯಾದರೆ ಮತ್ತೊಂದೆಡೆ ಕೆರೆಗಳು ಬತ್ತಿರುವುದರಿಂದ ಮರಿಗಳು ಸಾಯುತ್ತಿವೆ. ಸಾಮಾನ್ಯವಾಗಿ ಜೂನ್ ಜುಲೈ ಹಾಗು ಆಗಸ್ಟ್‌ನಲ್ಲಿ ಮೀನಿನ ಮರಿಗಳನ್ನು ಕೆರೆಗಳಿಗೆ ಬಿಡುತ್ತೇವೆ. ಅದಾದ ಆರೇಳು ತಿಂಗಳಲ್ಲಿ ಮರಿಗಳು ಬೆಳವಣಿಗೆ ಹೊಂದಿದ ಬಳಿಕ ಹಿಡಿಯಲಾಗುತ್ತದೆ.

ಆದರೆ ಈ ಸಲ ಎಲ್ಲವೂ ತದ್ವಿರುದ್ಧವಾಗಿದೆ’ ಎಂದು ಬಾನಂದೂರಿನ ಹಿರೇಗೌಡನಕೆರೆ ಮತ್ತು ಇಟ್ಟಮಡುವಿನ ಹೊಸಕೆರೆಯ ಗುತ್ತಿಗೆದಾರರೂ ಚರಣ್ ಜಿಲ್ಲೆಯ ಮೀನುಗಾರಿಕೆಯ ಪರಿಸ್ಥಿತಿ ಬಿಚ್ಚಿಟ್ಟರು. ₹ 55.42 ಲಕ್ಷಕ್ಕೆ ಟೆಂಡರ್ ‘ಜಿಲ್ಲೆಯ 69 ಮೀನುಗಾರಿಕೆ ಕೆರೆಗಳನ್ನು ಒಟ್ಟು ₹ 55.42 ಲಕ್ಷಕ್ಕೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಅವಧಿ ಐದು ವರ್ಷಗಳಾಗಿದ್ದು ಗುತ್ತಿಗೆದಾರರು ವರ್ಷಕ್ಕೊಮ್ಮೆ ಗುತ್ತಿಗೆ ನವೀಕರಣ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಮೇ ತಿಂಗಳಲ್ಲಿ ನವೀಕರಣಕ್ಕೆ ಅರ್ಜಿ ಕರೆಯುತ್ತೇವೆ’ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮೀನುಗಾರಿಕೆಗೆ ಆಯ್ಕೆ ಮಾಡಿರುವ ಕೆರೆಗಳ ಜೊತೆಗೆ ಮಂಚನಬೆಲೆ ಮತ್ತು ಕಣ್ವ ಜಲಾಶಯ ಕೂಡ ಸೇರುತ್ತವೆ. ಆದರೆ ಸದ್ಯ ಮಂಚನಬೆಲೆಯಲ್ಲಿ ಮಾತ್ರ ಮೀನುಗಾರಿಕೆ ನಡೆಯುತ್ತಿದೆ. ಕಣ್ವ ಜಲಾಶಯದಲ್ಲಿ ಅನುಮತಿ ಕೊಡಬೇಕೇ ಬೇಡವೇ ಎಂಬುದರ ಕುರಿತು ಆಕ್ಷೇಪ ಇರುವುದರಿಂದ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಕೆರೆಗಳನ್ನು ವರ್ಗೀಕರಿಸಿ ಟೆಂಡರ್ ಕರೆದು ಗುತ್ತಿಗೆಗೆ ಕೊಡಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT