ಭಾನುವಾರ, ಫೆಬ್ರವರಿ 28, 2021
30 °C
ನದಿಯ ಹರಿವಿನ ಪ್ರಮಾಣದಲ್ಲಿ ಭಾರಿ ಹೆಚ್ಚಳ; ಅನೇಕ ಪ್ರದೇಶಗಳು ಜಲಾವೃತ

ರಾಮನಗರ ಜಿಲ್ಲೆಯ ಗಡಿ: ಸಂಗಮ, ಮೇಕೆದಾಟಿನಲ್ಲಿ ಕಾವೇರಿ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದರೂ ಗಡಿ ಪ್ರದೇಶವಾದ ಸಂಗಮ–ಮೇಕೆದಾಟಿನಲ್ಲಿ ಇದೀಗ ಕಾವೇರಿ ಬೋರ್ಗರೆಯುತ್ತಾ ಹರಿಯತೊಡಗಿದೆ.

ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ ಸುಮಾರು 1.5 ಲಕ್ಷ ಕ್ಯೂಸೆಕ್‌್ ಪ್ರಮಾಣದ ನೀರು ಶನಿವಾರ ಕಾವೇರಿ ನದಿಗೆ ಬಿಡುಗಡೆಯಾಗಿದ್ದು, ಮುತ್ತತ್ತಿ ಮಾರ್ಗವಾಗಿ ನೀರು ಸಂಗಮಕ್ಕೆ ಹರಿದಿದೆ. ಇದರಿಂದಾಗಿ ಸುತ್ತಲಿನ ಪ್ರದೇಶ ಮುಳುಗಡೆ ಆಗಿದೆ. ಅಲ್ಲಿಂದ ಮೇಕೆದಾಟು ಭಾಗದಲ್ಲಿ ಬೃಹತ್‌ ಆದ ಬಂಡೆಗಳ ಮೇಲೆ ಕಾವೇರಿಯ ರುದ್ರನರ್ತನ ನಡೆದಿದೆ. ಮುಂದೆ ಇದೇ ನೀರು ತಮಿಳುನಾಡಿಗೆ ಹರಿಯುತ್ತದೆ.

ಕಳೆದ ವರ್ಷ ಜುಲೈನಲ್ಲಿ ಕಾವೇರಿ ನದಿಗೆ ಸುಮಾರು 1.5 ಲಕ್ಷ ಕ್ಯುಸೆಕ್‌ ನೀರು ಹರಿಸಿದ ಪರಿಣಾಮವಾಗಿ ಸಂಗಮ ಪ್ರದೇಶ ಪೂರ ಜಲಾವೃತಗೊಂಡಿತ್ತು. ಮೇಕೆದಾಟಿನ ಬೃಹತ್‌ ಆದ ಬಂಡೆಗಲ್ಲುಗಳೂ ಮುಳುಗಿದ್ದು, ಅದರ ಮೇಲೆ ನೀರು ಹರಿಯತೊಡಗಿತ್ತು. ಇದೀಗ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯತೊಡಗಿದೆ. ಹೀಗೆ ಮುಂದುವರಿದಲ್ಲಿ ಅಲ್ಲಿನ ಮಯೂರ ಹೋಟೆಲ್‌ ಸಹಿತ ಹಲವು ಭಾಗ ಜಲಾವೃತಗೊಳ್ಳುವ ಸಾಧ್ಯತೆ ಇದೆ.

ಹೆಚ್ಚಿನ ಹಾನಿಯಿಲ್ಲ: ಸಂಗಮ ಅರಣ್ಯ ಪ್ರದೇಶವು ರಕ್ಷಿತ ಅರಣ್ಯ ಪ್ರದೇಶವಾಗಿದೆ. ಇಲ್ಲಿ ಜನವಸತಿ ವಿರಳವಾಗಿರುವ ಕಾರಣ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇಲ್ಲ. ಆದರೆ ಈ ಅರಣ್ಯವು ಜೀವ ವೈವಿಧ್ಯದ ತಾಣವಾಗಿದೆ. ಮಳೆ ನೀರು ಹೆಚ್ಚಿದಷ್ಟು ಪ್ರಾಣಿ–ಪಕ್ಷಿಗಳಿಗೆ ಸಂಕಷ್ಟ ಎದುರಾಗಲಿದೆ.

ಪ್ರವಾಸಿ ತಾಣ: ಜಿಲ್ಲೆಯ ಜೀವನದಿಗಳಾದ ವೃಷಭಾವತಿ, ಅರ್ಕಾವತಿಗಳು ಈ ಪ್ರದೇಶದಲ್ಲಿ ಕಾವೇರಿಯನ್ನು ಕೂಡುವುದರಿಂದ ಇಲ್ಲಿಗೆ ಸಂಗಮ ಎನ್ನುವ ಹೆಸರು ಬಂದಿದೆ. ಬೇಸಿಗೆ ಕಾಲದಲ್ಲಿ ಈ ನದಿಯಲ್ಲಿ ಜನರು ನಡೆದೇ ಹೋಗುತ್ತಾರೆ. ನೀರು ಕೊಂಚ ಹೆಚ್ಚಿಗೆ ಇರುವ ಸಂದರ್ಭಗಳಲ್ಲಿ ಓಡಾಡಲು ತೆಪ್ಪಗಳ ವ್ಯವಸ್ಥೆ ಇದೆ.

ಸಂಗಮ ಪ್ರದೇಶವು ಅಪಾಯದ ತಾಣವೂ ಹೌದು. ಹತ್ತಾರು ಮಂದಿ ಇಲ್ಲಿ ನದಿಯ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಹೀಗೆ ಸತ್ತವರ ಹೆಸರನ್ನು ನದಿಯ ದಡದಲ್ಲೇ ಬೋರ್ಡಿನಲ್ಲಿ ಹಾಕಲಾಗಿದ್ದು, ಜನರು ನೀರಿಗೆ ಇಳಿಯದಂತೆ ಎಚ್ಚರಿಕೆ ಫಲಕವನ್ನೂ ತೂಗು ಹಾಕಲಾಗಿದೆ.

ಕಳೆದ ವರ್ಷ ಜುಲೈನಲ್ಲಿ ಮೇಕೆದಾಟುವಿನಲ್ಲಿ ಇಬ್ಬರು ಎಂಜಿನಿಯರ್‌ಗಳು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಕಾಲು ಜಾರಿ ನದಿ ಬಿದ್ದು ಮೃತಪಟ್ಟಿದ್ದರು. ಹೀಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಜನರು ನೀರಿಗೆ ಇಳಿಯದಂತೆ ಕಾವಲು ಕಾಯುತ್ತಿದ್ದಾರೆ.

ಪ್ರವಾಸಿಗರ ಹೆಚ್ಚಳ ಸಾಧ್ಯತೆ

ನದಿಯಲ್ಲಿನ ಪ್ರವಾಹ, ಮೇಕೆದಾಟಿನ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸಾಧ್ಯತೆ ಇದೆ. ಸ್ಥಳೀಯರು ಗಂಗೆ ಪೂಜೆಗಾಗಿ ಇಲ್ಲಿಗೆ ಬರುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ.

ಸಂಗಮದವರೆಗೆ ವಾಹನಗಳ ಓಡಾಟಕ್ಕೆ ವ್ಯವಸ್ಥೆ ಇದೆಯಾದರೂ ಮೇಕೆದಾಟಿಗೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ ಇದೆ. ಸ್ಥಳೀಯವಾಗಿ ಖಾಸಗಿ ಬಸ್‌ ಅನ್ನು ಓಡಾಟಕ್ಕೆ ಇಟ್ಟುಕೊಂಡಿದ್ದು, ಮೇಕೆದಾಟಿಗೆ ಇದೇ ಬಸ್‌ನಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು