ರಾಮನಗರ: ‘ತಲೆಮಾರುಗಳಿಂದ ಕಂಠಸ್ಥವಾಗಿಯೇ ಉಳಿದುಕೊಂಡು ಬಂದಿರುವ ಜನಪದ ಕಲೆಗಳು, ಇತ್ತೀಚೆಗೆ ಕೇವಲ ಗ್ರಂಥಸ್ಥವಾಗುತ್ತಿವೆ. ಈ ಬೆಳವಣಿಗೆಯು ಜಾನಪದ ಕಲೆಗಳಿಂದ ಇಂದಿನ ತಲೆಮಾರು ದೂರಾಗುತ್ತಿರುವ ಸಂಕೇತವಾಗಿದೆ’ ಎಂದು ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಆತಂಕ ವ್ಯಕ್ತಪಡಿಸಿದರು.
ನಗರದ ಹೊರವಲಯದ ಜಾನಪದ ಲೋಕದಲ್ಲಿ ಗುರುವಾರ ನಡೆದ ವಿಶ್ವ ಜಾನಪದ ದಿನಾಚರಣೆ ಹಾಗೂ ಜನಪದ ಮಹಾಕಾವ್ಯ ಗಾಯನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಆತಂಕವನ್ನು ತೋಡಿಕೊಳ್ಳುತ್ತಲೇ ಜನಪದ ಗೀತೆಗಳ ಹೂರಣವನ್ನು ಬಿಚ್ಚಿಟ್ಟರು.
‘ಜನಪದ ಕಲೆಗಳನ್ನು ಗ್ರಂಥಸ್ಥಕ್ಕೆ ಸೀಮಿತಗೊಳಿಸದೆ, ಕಂಠಸ್ಥವಾಗಿಯೇ ಜನಮಾನಸದಲ್ಲಿ ಕಾಪಿಟ್ಟುಕೊಳ್ಳಬೇಕು. ಯುವಜನರು ಜಾನಪದದ ಎಲ್ಲಾ ಕಲಾ ಪ್ರಕಾರಗಳನ್ನು ಎದೆಗಪ್ಪಿಕೊಂಡು ಮುಂದಕ್ಕೊಯ್ಯಬೇಕು. ಅದಕ್ಕೆ ಬದ್ಧರಾಗಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು’ ಎಂದು ಕಿವಿಮಾತು ಹೇಳಿದರು.
‘ಇತ್ತೀಚೆಗೆ ಜಾನಪದ ಕಲಾವಿದರು ಕೇವಲ ಪ್ರದರ್ಶನಕ್ಕೆ ಸೀಮಿತರಾಗಿದ್ದಾರೆ. ಅವರಲ್ಲಿ ಕಲೆ ಇದೆ, ವಿಚಾರವಿಲ್ಲ. ಜಾನಪದ ಕಲೆಗಳು ಎದೆಗಿಳಿಯಬೇಕಾದರೆ, ಮೊದಲು ಅವುಗಳ ಹಿನ್ನೆಲೆ ಅರಿತು ಸೊಗಡು ಸವಿಯಬೇಕು. ಆಗಲೇ ಹಂಚುವ ಕೆಲಸ ಪರಿಣಾಮಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ನನ್ನ ಕಂಠಸ್ಥದಲ್ಲಿರುವ ಕಲೆಯನ್ನು ಧಾರೆ ಎರೆಯುವೆ’ ಎಂದ ಅವರು, ತಮ್ಮ ಬೆಳವಣಿಗೆಗೆ ಕೊಡುಗೆ ನೀಡಿದ ಪ್ರೊ. ಕಾಳೇಗೌಡ ನಾಗಾವರ ಅವರಿಗೆ ಸಮರ್ಪಿಸಿದ ತಮ್ಮ ಪುಸ್ತಕವನ್ನು ಗಣ್ಯರ ಸಮ್ಮುಖದಲ್ಲಿ ನೀಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ, ‘ಓದು–ಬರಹ ಗೊತ್ತಿಲ್ಲದಿದ್ದರೂ ತಮ್ಮ ಅನುಭವದ ಮೂಲಕವೇ ಜಾನಪದ ಸಾಹಿತ್ಯವನ್ನು ನಮ್ಮ ಹಿರಿಯರು ಕಟ್ಟಿದರು. ಎರಡೂವರೆ ಸಾವಿರ ವರ್ಷಗಳ ಚರಿತ್ರೆಯನ್ನು ಈ ಸಾಹಿತ್ಯ ಹೊಂದಿರುವ ಸಾಧ್ಯತೆ ಇದೆ. ಪ್ರಪಂಚದಲ್ಲೇ ವೈವಿಧ್ಯಮಯವಾದ ಜಾನಪದ ಪರಂಪರೆಯನ್ನು ಹೊಂದಿರುವ ದೇಶ ಭಾರತ’ ಎಂದು ಬಣ್ಣಿಸಿದರು.
‘ಕನ್ನಡದಲ್ಲಿ ಇದುವರೆಗೆ 21 ಜನಪರ ಮಹಾಕಾವ್ಯಗಳು ಪ್ರಕಟಗೊಂಡಿವೆ. ಅಷ್ಟರ ಮಟ್ಟಿಗೆ ನಾಡಿನ ಸಾಹಿತ್ಯ ಚರಿತ್ರೆಯನ್ನು ಜಾನಪದ ಪರಂಪರೆ ಶ್ರೀಮಂತಗೊಳಿಸಿದೆ. ಪಾಶ್ಚಾತ್ಯರ ಫೋಕ್ಲೋರ್ ಎಂಬ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಜಾನಪದ ಎಂದು ಕರೆಯಲಾಗುತ್ತದೆ. ಬದಲಾದ ಕಾಲಘಟ್ಟದಲ್ಲಿ ಎದುರಾಗಿರುವ ಸವಾಲುಗಳ ಮಧ್ಯೆಯೇ ಜಾನಪದವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.
ಜಾನಪದ ಲೋಕದ ಕ್ಯುರೇಟರ್ ಡಾ. ರವಿ ಯು.ಎಂ ಸ್ವಾಗತಿಸಿದರು. ಎಚ್.ಎಲ್.ಎನ್ ಸಂಶೋಧನಾ ಕೇಂದ್ರದ ಸಂಚಾಲಕ ಡಾ. ಸಂದೀಪ್ ಕೆ.ಎಸ್ ವಂದನಾರ್ಪಣೆ ಹಾಗೂ ಅಶ್ವಿನಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು, ಜಾನಪದ ಲೋಕದ ಕಾರ್ಯನಿರ್ವಹಣಾ ಅಧಿಕಾರಿ ಸರಸವಾಣಿ, ರಂಗ ಸಹಾಯಕ ಪ್ರದೀಪ್, ಜಾನಪದ ಕಲಾವಿದರು ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.