ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾರ್ಮೆಂಟ್ ಕಾರ್ಖಾನೆ ತೆರೆಯಲು ಸಿದ್ಧತೆ’

ಬೀಡಿ ಕಾರ್ಮಿಕರ ಕಾಲೊನಿ: ಅಭಿವೃದ್ಧಿ ಕಾಮಗಾರಿಗೆ ಚಾಲನೆ
Last Updated 24 ಜೂನ್ 2019, 12:44 IST
ಅಕ್ಷರ ಗಾತ್ರ

ರಾಮನಗರ: ನಗರದಲ್ಲಿ ಗಾರ್ಮೆಂಟ್ ಕಾರ್ಖಾನೆ ತೆರೆಯಲು ಸಿದ್ಧತೆ ನಡೆದಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ₹1 ಕೋಟಿ ವೆಚ್ಚದ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಗಾರ್ಮೆಂಟ್ ಕಾರ್ಖಾನೆ ಸ್ಥಾಪನೆಯಾಗುವುದರಿಂದ ಸಾವಿರಾರು ಜನರಿಗೆ ಉದ್ಯೋಗ ದೊರೆಯುತ್ತದೆ. ಈ ವಿಚಾರವಾಗಿ ಈಗಾಗಲೇ ಗಾರ್ಮೆಂಟ್ ಕಾರ್ಖಾನೆಯ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ ಮೂರು ಸಾವಿರ ನಿವೇಶನ, ಐದು ಸಾವಿರ ಮನೆ ಕಟ್ಟಿಸಿಕೊಡಲು ಕ್ರಮ ಕೈಗೊಂಡಿದ್ದೇನೆ. ನಿವೇಶನರಹಿತ ಕೂಲಿ ಕಾರ್ಮಿಕರು, ದಲಿತರು, ಹಿಂದುಳಿದ ವರ್ಗಗಳ ಬಡ ಜನರಿಗೆ ನಿವೇಶನ ಕಲ್ಪಿಸುವ ಮತ್ತು ಅರ್ಹರಿಗೆ ಮನೆ ಕಟ್ಟಿಸಿಕೊಡುವ ಪ್ರಯತ್ನ ಕೂಡ ನಡೆಯುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮತ್ತು ಎಸ್‍ಎಫ್ ಸಿ ಯಿಂದ ತಲಾ ₹10 ಕೋಟಿ ಮಂಜೂರು ಮಾಡಿಸಿದ್ದು, ಆದ್ಯತೆಯ ಮೇರೆಗೆ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಬೀಡಿ ಕಾರ್ಮಿಕರ ಕಾಲೊನಿಯ ಜನರ ಬೇಡಿಕೆಯಂತೆ ಉದ್ಯಾನ, ಸರ್ಕಾರದ ಹೆಸರಿನಲ್ಲಿರುವ ಖಾತೆಯನ್ನು ಫಲಾನುಭವಿಗಳಿಗೆ ಹೆಸರಿಗೆ ಮಾಡಿಸಿಕೊಡುವುದು. ಕಲ್ಯಾಣ ಮಂಟಪದ ಅಭಿವೃದ್ಧಿಗೆ ಅಗತ್ಯ ಅನುದಾನ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಿಯಾಯೋಜನೆ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಮನಗರ ಟೌನ್ ಬೀಡಿ ಕಾರ್ಮಿಕರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಯ್ಯದ್ ಜಿಯಾವುಲ್ಲಾ ಮಾತನಾಡಿ ಬೀಡಿ ಕಾಲೊನಿಯಲ್ಲಿ 489 ಮನೆಗಳಿವೆ. ಈಗಲೂ ಈ ಮನೆಗಳು ರಾಜೀವ್ ಗಾಂಧಿ ವಸತಿ ನಿಗಮದ ಹೆಸರಿನಲ್ಲಿದೆ. ಅದನ್ನು ನಗರಸಭೆ ಹೆಸರಿಗೆ ಖಾತೆ ಮಾಡಿಸಿ, ಫಲಾನುಭವಿಗಳ ಹೆಸರಿಗೆ ಮಾಡಿಸುವ ಕಾರ್ಯವಾಗಬೇಕು. ಕಾಲೊನಿಯಲ್ಲಿ ನಿರ್ಮಿಸಲಾಗುತ್ತಿರುವ ಕಲ್ಯಾಣ ಮಂಟಪದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು. ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲಸೌಕರ್ಯಗಳನ್ನು ಕಲ್ಪಿಸಲು ನೆರವಾಗಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಎ. ರವಿ, ಪರ್ವೀಜ್ ಪಾಷಾ, ಬಿ. ಉಮೇಶ್, ರೈಡ್ ನಾಗರಾಜ್, ಜಯಕುಮಾರ್, ಉಮೇಶ್, ವೆಂಕಟೇಶ್, ನಗರಸಭೆ ಆಯುಕ್ತೆ ಶುಭಾ, ಬೆಸ್ಕಾಂ ನ ಶಿವಕುಮಾರ್ ಇದ್ದರು.

‘ಮೂಲ ಸೌಕರ್ಯ ಕಲ್ಪಿಸಿ’
‘ರೈಲ್ವೆ ಟ್ರ್ಯಾಕ್ ಬಳಿ ಮನೆ ಕಳೆದುಕೊಂಡಿರುವವರಿಗೆ ಕೂಡಲೆ ಮೂಲ ಸೌಕರ್ಯಗಳನ್ನು ಕಲ್ಪಿಸಿ’ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಮೋತಿನಗರದ ನೇರಳೆಕೇರಿ ಗೇಟ್ ಬಳಿ ರೈಲ್ವೆ ಟ್ರ್ಯಾಕ್ ನಿರ್ಮಾಣದಿಂದ ಮನೆ ಕಳೆದುಕೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿ ಫಲಾನುಭವಿಗಳಿಗೆ ಸಾಂತ್ವನ ಹೇಳಿದರು. ನಗರ ವ್ಯಾಪ್ತಿಯಲ್ಲಿ ಬಡವರಿಗೆ ಮೂರು ಸಾವಿರ ನಿವೇಶನಗಳನ್ನು ಕೊಡಲಾಗುವುದು. ಈ ನಿವೇಶನಗಳಲ್ಲಿ ಮೊದಲ ಆದ್ಯತೆ ನೀಡಿ ನಿವೇಶನಗಳನ್ನು ನೀಡಲಾಗುತ್ತದೆ. ನಿಮಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೆ ಟೆಂಡರ್ ಕರೆಯಲಾಗಿದೆ ಎಂದು ಅವರು ಹೇಳಿದರು.

ಮನೆ ಕಳೆದುಕೊಂಡಿರುವ ನಾಸೀರ್ ಖಾನ್, ಅಪ್ಸರ್ ಆಲಿ, ಮುನಾವರ್ ಪಾಷಾ, ಸಯ್ಯದ್, ಸಲಿಮುಲ್ಲಾ, ಪರ್ವಾಜ್ ಖಾನ್, ತಾಜುನ್ನಿಸಾ ಮಾತನಾಡಿ ‘ಇಲ್ಲಿ ವಾಸ ಮಾಡಲು ಕಷ್ಟವಾಗುತ್ತಿದೆ, ದಯವಿಟ್ಟು ನಮಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT