ಗುರುವಾರ , ಜುಲೈ 29, 2021
27 °C

ಅಂಜಿಕೆ ಬಿಟ್ಟು ಲಸಿಕೆ ಪಡೆಯಿರಿ: ಶಾಸಕಿ ಅನಿತಾ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಲಸಿಕೆ ಪಡೆದವರಿಗೆ ಕೋವಿಡ್ ಸೋಂಕು ತಗುಲಿದರೂ ಹೆಚ್ಚು ಆರೋಗ್ಯ ತೊಂದರೆ ಉಂಟಾಗದು. ಹೀಗಾಗಿ, ಪ್ರತಿಯೊಬ್ಬರೂ ತಪ್ಪದೇ ಲಸಿಕೆ ಪಡೆಯಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಉಚಿತ ಲಸಿಕಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಕೋವಿಡ್ ಮೂರನೇ ಅಲೆ ಬರುವ ಸಾಧ್ಯತೆ ಇದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಇದಕ್ಕೆ ಲಸಿಕೆಯೊಂದೇ ಸದ್ಯಕ್ಕೆ ಇರುವ ಮದ್ದು. ಪ್ರತಿಯೊಬ್ಬರು ಅವರ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆದುಕೊಳ್ಳಬೇಕು. ನಾನು ಕೂಡ ಲಸಿಕೆ ಪಡೆದಿದ್ದು ಯಾವುದೇ ತೊಂದರೆ ಉಂಟಾಗಿಲ್ಲ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ ಎಂದು ಧೈರ್ಯ ತುಂಬಿದರು.

ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯ ಜನರು ಮೈ ಮರೆಯಬಾರದು. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಪದ್ಮಾ ಮಾತನಾಡಿ, ಮೂರನೇ ಅಲೆ ಬರುವ ಮುಂಚೆಯೇ ಎಲ್ಲರಿಗೂ ಲಸಿಕೆ ನೀಡುವ ಸಲುವಾಗಿ ಸರ್ಕಾರ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. ಶಿಬಿರದಲ್ಲಿ ಭಾಗಿಯಾಗಿರುವ ಯುವಕರು ತಮ್ಮ ಸುತ್ತಮುತ್ತ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯದೇ ಇರುವವರು ಇದ್ದಲ್ಲಿ ಅಂತಹವರನ್ನು ಲಸಿಕಾ ಕೇಂದ್ರಗಳತ್ತ ಕರೆ ತರಬೇಕು ಎಂದು ಕೋರಿದರು.

ಗರ್ಭಿಣಿಯರನ್ನು ಹೊರತುಪಡಿಸಿ ಮಧುಮೇಹ, ರಕ್ತದೊತ್ತಡ ಮುಂತಾದ ಆರೋಗ್ಯ ಸಮಸ್ಯೆ ಇದ್ದವರೂ ಲಸಿಕೆಯನ್ನು ಪಡೆಯಬಹುದು. ಮಹಿಳೆಯರು ಮುಟ್ಟು, ಇತರೇ ಯಾವುದೇ ಸಮಸ್ಯೆ ಇದ್ದರೂ ಲಸಿಕೆ ಪಡೆಯಬಹುದು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಡಿ.ಎಲ್.ಓ. ಡಾ.ಮಂಜುನಾಥ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ತಾಲ್ಲೂಕು ಆರೋಗ್ಯಾಧಿಕಾರಿ ಶಶಿಕಲಾ, ಡಿ.ಎಸ್.ಓ ಕಿರಣ್ ಶಂಕರ್, ನಗರಸಭೆ ಪೌರಾಯುಕ್ತ ನಂದಕುಮಾರ್, ಅಂಬೇಡ್ಕರ್ ಭವನ ಲಸಿಕಾ ಶಿಬಿರದ ನೋಡಲ್ ಅಧಿಕಾರಿ ನಟರಾಜೇಗೌಡ, ರಮೇಶ್ ರಾಜ್, ನಾಗರಾಜ್, ವಿಜಯ್ ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು