ಬುಧವಾರ, ಜನವರಿ 22, 2020
21 °C

ಚುನಾವಣೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಆದ್ಯತೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ : ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹಿಂದುಳಿದ ಜಾತಿಗಳಿಗೆ ಪ್ರಾಮುಖ್ಯತೆ ನೀಡದಿದ್ದಲ್ಲಿ ಪಕ್ಷ ಭೇದ ಮರತು ಹೋರಾಟ ನಡೆಸಲಾಗುವುದು ಎಂದು ರಾಮನಗರ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಅಧ್ಯಕ್ಷ ರೈಡ್ ಜಿ. ನಾಗರಾಜ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಿಂದುಳಿದ ಜಾತಿಗಳಿಗೆ 6 ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲಿನ ಚುನಾಯಿತ ಪ್ರತಿನಿಧಿಗಳ ಆಯ್ಕೆಯಲ್ಲಿ ಹಿಂದುಳಿದ ಜಾತಿಗಳ ಜನರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೂ ಆಡಳಿತ ನಡೆಸುವ ಪಕ್ಷಗಳು ಹಿಂದುಳಿದ ಜಾತಿಗಳನ್ನು ರಾಜಕೀಯ ಶಕ್ತಿಯಾಗಿ ಬೆಳೆಯಲು ಅವಕಾಶ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ನಿಟ್ಟಿನಲ್ಲಿ ಒಕ್ಕೂಟದ ವತಿಯಿಂದ ಹಿಂದುಳಿದ ಜಾತಿಗಳ ಸಂಘಟನೆಯನ್ನು ಮಾಡಲಾಗುವುದು. ನಮಗೆ ಹಿಂದುಳಿದ ಜಾತಿಗಳ ಸಂಘಟನೆ ಮುಖ್ಯವೆ ಹೊರೆತು, ರಾಜಕೀಯ ಪಕ್ಷಗಳಲ್ಲ. ಯಾವ ಪಕ್ಷ ಮುಂಬರುವ ಚುನಾವಣೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮನ್ನಣೆ ನೀಡುತ್ತದೆಯೊ ಅಂತಹ ಪಕ್ಷವನ್ನು ಒಕ್ಕೂಟ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಹಿಂದುಳಿದ ಜಾತಿಗಳ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದೇವೆ. ಇಲ್ಲಿನ ರೇಷ್ಮೆಗೂಡಿನ ಮಾರುಕಟ್ಟೆಯ ಬಳಿ ಒಕ್ಕೂಟದ ಕಚೇರಿಯನ್ನು ತೆರೆಯಲಾಗಿದೆ’ ಎಂದು ತಿಳಿಸಿದರು.

ಒಕ್ಕೂಟದ ಗೌರವಾಧ್ಯಕ್ಷ ಎ.ಎಚ್. ಬಸವರಾಜು ಮಾತನಾಡಿ, ರಾಜಕೀಯ ಪಕ್ಷಗಳು ಹಿಂದುಳಿದ ಜಾತಿಗಳ ಜನರನ್ನು ಚುನಾವಣಾ ಸಮಯದಲ್ಲಿ ಮಾತ್ರ ಪರಿಗಣಿಸಿ, ನಂತರ ಕಡೆಗಣಿಸುವುದು ಸರಿಯಲ್ಲ. ರಾಜಕೀಯ ಪಕ್ಷಗಳು ತಮ್ಮ ಧೋರಣೆಯನ್ನು ಸರಿಪಡಿಸಿಕೊಳ್ಳಬೇಕು. ಜತೆಗೆ ಮೂರೂ ರಾಜಕೀಯ ಪಕ್ಷಗಳು ಮುಂಬರುವ ಚುನಾವಣೆಗಳಲ್ಲಿ ಹಿಂದುಳಿದ ಜಾತಿಗಳ ಮುಖಂಡರನ್ನು ಗುರುತಿಸಿ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಹಿಂದುಳಿದ ಜಾತಿಗಳ ಜನರು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅವರಿಗೆ ತಲುಪಬೇಕಾದ ಮೂಲ ಸವಲತ್ತುಗಳನ್ನು ಒದಗಿಸುವತ್ತ ವಿಶೇಷ ಗಮನಹರಿಸುವಂತೆ ಜಿಲ್ಲೆಯ ಶಾಸಕರು ಹಾಗೂ ಸಂಸದರನ್ನು ಒಕ್ಕೂಟದ ವತಿಯಿಂದ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ, ಸರ್ಕಾರಿ ಕಚೇರಿಗಳಲ್ಲಿ ಏಜಂಟರು ಮತ್ತು ದಲ್ಲಾಳಿಗಳಿಗೆ ಕಡಿವಾಣ ಹಾಕಿ ಹಿಂದುಳಿದ ವರ್ಗಗಳ ಜನರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಲು ಅಧಿಕಾರಿ ವರ್ಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಒತ್ತಾಯಿಸಿ ಮನವಿ ಪತ್ರ ನೀಡಲಾಗುವುದು ಎಂದರು.

ಪದಾಧಿಕಾರಿಗಳು: ರಾಮನಗರ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ರೈಡ್ ಜಿ. ನಾಗರಾಜ್ ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ಎ.ಎಚ್. ಬಸವರಾಜು, ಕಾರ್ಯಾಧ್ಯಕ್ಷರಾಗಿ ಆರ್. ರಂಗಪ್ಪ, ಉಪಾಧ್ಯಕ್ಷರಾಗಿ ವೆಂಕಟಸ್ವಾಮಿ, ಕೃಷ್ಣಪ್ಪ, ಸುಗಂಧರಾಜೇ ಅರಸ್, ಸೀತಾರಾಮು, ಮುನಿರಾಜು, ಪ್ರಧಾನ ಕಾರ್ಯದರ್ಶಿಯಾಗಿ ಟಿ.ವಿ. ನಾರಾಯಣ್, ಕಾರ್ಯದರ್ಶಿಗಳಾಗಿ ಸಿ.ಎಸ್. ಸಿದ್ದರಾಜು, ವೇಣುಗೋಪಾಲ್, ಮಂಜುಳಾ, ಸಂಘಟನಾ ಕಾರ್ಯದರ್ಶಿಯಾಗಿ ಡಿ.ಟಿ. ಬಂಗಾರಶೆಟ್ಟಿ, ಖಜಾಂಚಿಯಾಗಿ ಆರ್.ಎಸ್. ಚಂದ್ರಶೇಖರ್, ಸಂಚಾಲಕರಾಗಿ ರೇವಣ್ಣ, ಆಂತರಿಕ ಲೆಕ್ಕ ಪರಿಶೋಧಕರಾಗಿ ಸಂತೋಷ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)