ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಮ್ಮನಕೆರೆ ಒಡಲು ಮಲಿನ

ಕೆರೆಗೆ ಹರಿಯುವ ಒಳಚರಂಡಿ ನೀರು: ಜಲಚರ, ಪಕ್ಷಿಸಂಕುಲಕ್ಕೆ ಆಪತ್ತು
Last Updated 22 ಏಪ್ರಿಲ್ 2021, 6:46 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಗೌರಮ್ಮನಕೆರೆಗೆ ಒಳಚರಂಡಿಯ ಕಲುಷಿತ ನೀರು ಹರಿಯುತ್ತಿದ್ದು, ಜಲಚರಗಳು, ನೀರು ಆಶ್ರಿತ ಪಕ್ಷಿ ಸಂಕುಲಕ್ಕೆ ಆಪತ್ತು ಎದುರಾಗಿದೆ.

ಹಳೆಮಸೀದಿ ಮೊಹಲ್ಲಾದ ಮನೆಗಳ ಒಳಚರಂಡಿಯ ನೀರು 2006ರಿಂದಲೂ ಕೆರೆಗೆ ಹರಿಯುತ್ತಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದಾಗಿ ಶೌಚಾಲಯದ ಕಲುಷಿತ ಮುಂದೆ ಹರಿದು ಹೋಗುತ್ತಿಲ್ಲ.

ಕಡಿಮೆ ಗುಣಮಟ್ಟದ ಪೈಪ್‌ಗಳನ್ನು ಅಳವಡಿಸಿ, ಗುತ್ತಿಗೆದಾರರು ಕೈತೊಳೆದುಕೊಂಡಿದ್ದಾರೆ. ಮೊಹಲ್ಲಾದಿಂದ ಹರಿದು ಬರುವ ಕಲುಷಿತ ಚೇಂಬರ್‌ಗಳು ಕಟ್ಟಿಕೊಂಡು, ಸಣ್ಣ ಸೇತುವೆಯ ಪೈಪ್ ಮೂಲಕ ಹರಿದು ಕೆರೆಯ ಒಡಲು ಸೇರುತ್ತಿದೆ. ಪುರಸಭೆ ಅಧಿಕಾರಿಗಳಾಗಲಿ, ಒಳಚರಂಡಿ ಮಂಡಳಿ ಅಧಿಕಾರಿಗಳಾಗಲಿ ಕೆರೆಗೆ ಹರಿಯುತ್ತಿರುವ ಕಲುಷಿತ ನೀರು ತಡೆಯುವತ್ತ ಕಿಂಚಿತ್ತೂ ಗಮನಹರಿಸಿಲ್ಲ.

ಒಳಚರಂಡಿ ಮಂಡಳಿಯಿಂದ ಶೌಚಾಲಯದ ನೀರು ಶುದ್ಧೀಕರಿಸುವ ಯಂತ್ರ ಅಳವಡಿಸಿಲ್ಲ. ಕಲುಷಿತ ನೀರು ಸರಾಗವಾಗಿ ಹರಿದು ಹೋಗುವಂತೆ ಭೂಮಿಯ ಒಳಗೆ ಪೈಪ್ ಅಳವಡಿಸಿಲ್ಲ.

ಕೆರೆಯ ಪಶ್ಚಿಮ ದಿಕ್ಕಿನಲ್ಲಿ ರಾಜಕಾಲುವೆಗೆ ಮಣ್ಣು ತುಂಬಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿವೇಶನ ಮಾಡಿ ಮಾರಾಟ ಮಾಡಲಾಗಿದೆ. ಕಲುಷಿತ ನೀರು ಮುಂದೆ ಹರಿಯದೆ ಕೆರೆಗೆ ಹರಿಯ ಬಿಡಲಾಗಿದೆ. ಇದರಿಂದ ಕೆರೆಯ ನೀರು ಮಲಿನವಾಗಿದೆ.

ತೆಪ್ಪೋತ್ಸವ: ಹಿಂದೆ ಪಟ್ಟಣದ ಜನತೆಗೆ ಕುಡಿಯುವ ಸಿಹಿನೀರು ಒದಗಿಸುತ್ತಿದ್ದ ಗೌರಮ್ಮನಕೆರೆಯಲ್ಲಿ ರಂಗನಾಥ ಸ್ವಾಮಿ ಜಾತ್ರಾ ಸಮಯದಲ್ಲಿ ತೆಪ್ಪೋತ್ಸವ ನಡೆಯುತ್ತಿತ್ತು. ಕೆರೆಯ ದಡದಲ್ಲಿ ಇರುವ ವೆಂಕಟರಮಣಸ್ವಾಮಿ ಮತ್ತು ಪ್ರಸನ್ನರುದ್ರೇಶ್ವರಸ್ವಾಮಿ ದೇವಾಲಯಗಳಿಗೆ ಅಭಿಷೇಕಕ್ಕೆ ಕೆರೆಯ ನೀರನ್ನು ಬಳಸಲಾಗುತ್ತಿತ್ತು.

ಮಹಿಳೆಯರು ಗಂಗಾಪೂಜೆ ಮಾಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಕೆರೆಯ ನೀರನ್ನು ಪವಿತ್ರ ಗಂಗೆಯಂತೆ ಬಳಸಲಾಗುತ್ತಿತ್ತು. ವರ್ಷಪೂರ್ತಿ ತುಂಬಿರುತ್ತಿದ್ದ ಕೆರೆಯು 53 ಎಕರೆ ವಿಸ್ತೀರ್ಣವಿದೆ. ಕೆರೆಯ ದೇವಮೂಲೆಯಲ್ಲಿ ಮಡಿವಾಳ ಮಾಚಿದೇವರ ಗುಡಿ ಮತ್ತು ಅಗಸರ ಬಂಡೆ ಬೆಟ್ಟವಿದೆ. ಉತ್ತರ ದಿಕ್ಕಿನಲ್ಲಿ ಬೆಟ್ಟವಿದೆ. ಮಳೆಯ ನೀರಿನ ಜೊತೆಗೆ ಒಗತೆಯಿಂದ ಸಿಹಿನೀರು ಸಂಗ್ರಹವಾಗುತ್ತಿತ್ತು. ಕೆರೆಯ ಹಿನ್ನೀರಿನ ಪ್ರದೇಶದಲ್ಲಿ ಕಲ್ಯಾಣಿಗಳಿವೆ. ಬಡಾವಣೆ ಮಾಡುವ ಭೂದಾಹಿಗಳು ಕಲ್ಯಾಣಿಗಳನ್ನು ಮುಚ್ಚಿ ನಿವೇಶನ ಮಾಡಿ ಮಾರಿಕೊಂಡಿದ್ದಾರೆ ಎಂಬುದು ಜನರ ದೂರು.

ಈ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ಇಲಾಖೆಯ ಕಚೇರಿ ನೆಲಮಂಗಲದಲ್ಲಿದೆ.

ಇಲಾಖೆಯ ಅಧಿಕಾರಿಗಳು ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಬಹುಕೋಟಿ ಹಣ ವೆಚ್ಚ ಮಾಡಿರುವುದಾಗಿ ಹೇಳುತ್ತಾರೆ. ಆದರೆ, ಅಭಿವೃದ್ಧಿ ಕಂಡಿಲ್ಲ. ಕೆರೆಯ ಏರಿ ಮೇಲೆ ತಂತಿಬೇಲಿ ನಿರ್ಮಿಸಿರುವುದನ್ನು ಬಿಟ್ಟರೆ ಮತ್ತೆ ಯಾವುದೇ ಅಭಿವೃದ್ಧಿಯಾಗಿಲ್ಲ.ತ್ವರಿತವಾಗಿ ಕಲುಷಿತ ನೀರು ಹರಿಯದಂತೆ ತಡೆಗೆ ಅಧಿಕಾರಶಾಹಿ ಕ್ರಮವಹಿಸಬೇಕು ಎಂಬುದು ಜನರ ಆಗ್ರಹ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT