ಮಂಗಳವಾರ, ಮಾರ್ಚ್ 28, 2023
23 °C
ಸಂಘದ ರಾಜ್ಯ ಘಟಕದ ಅಧ್ಯಕ್ಷ ದೊಡ್ಡಗೊಲ್ಲರಹಟ್ಟಿ ರಾಜಣ್ಣ ಅಸಮಾಧಾನ

ಕಾಡುಗೊಲ್ಲರ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ‘ಕಾಡುಗೊಲ್ಲ ಸಮುದಾಯದ ಯುವಕರು ರಾಜಕಾರಣಿಗಳಿಗೆ ಜೈಕಾರ ಹಾಕಿದ್ದು ಸಾಕು. ಸಂಘಟಿತರಾಗಿ ಜನಪ್ರತಿನಿಧಿಗಳನ್ನು ಪ್ರಶ್ನಿಸಿ ಸವಲತ್ತು ಪಡೆಯಲು ಮುಂದಾಗಬೇಕು’ ಎಂದು ಕರ್ನಾಟಕ ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ದೊಡ್ಡಗೊಲ್ಲರಹಟ್ಟಿ ರಾಜಣ್ಣ ಸಲಹೆ ನೀಡಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕಾಡುಗೊಲ್ಲರ ತಾಲ್ಲೂಕು ಶಾಖೆಯ ಸಂಘಟನಾ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿದ್ದು ಬಿಟ್ಟರೆ, ಸವಲತ್ತು ನೀಡಿ ಮುಖ್ಯವಾಹಿನಿಗೆ ತರಲು ಯಾವ ಪಕ್ಷದ ನಾಯಕರು ಮುಂದಾಗಲಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಬುಡಕಟ್ಟು ಸಮುದಾಯವಾದ ಕಾಡುಗೊಲ್ಲರ ಹಟ್ಟಿಗಳು ಜನಪದದ ಕಣಜದಂತಿವೆ. ಒಬ್ಬ ಕಲಾವಿದರಿಗೂ ರಾಜ್ಯೋತ್ಸವ ಪ್ರಶಸ್ತಿ ಕೊಡಲಿಲ್ಲ. ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಚಾಮರಾಜನಗರ ಜಿಲ್ಲೆಯ ತನಕ ವಾಸಿಸುತ್ತಿದ್ದೇವೆ ಎಂದು ಹೇಳಿದರು.

ಅಕ್ಷರ ವಂಚಿತರು ದನ, ಕುರಿ ಮೇಯಿಸುತ್ತಾರೆ. ಹಾಲು, ಮೊಸರು, ಬೆಣ್ಣೆ, ತುಪ್ಪ ಮತ್ತು ಆಹಾರ ಧಾನ್ಯ ಬೆಳೆಯಲು ದನ, ಕುರಿ ಗೊಬ್ಬರ ನೀಡಿ ಸಮಾಜದ ಸದೃಢತೆಗೆ ದುಡಿಯುತ್ತಿದ್ದೇವೆ. ಚುನಾವಣೆ ಸಮಯದಲ್ಲಿ ಗೊಲ್ಲರಹಟ್ಟಿಯ ಪಾರಿ ಬೇಲಿ ಬಳಿ ಬರುವ ರಾಜಕಾರಣಿಗಳು ನಮ್ಮ ಕುಲದೈವಗಳಿಗೆ ಪೂಜೆ ಸಲ್ಲಿಸಿ ಒಂದು ವೀಳ್ಯದೆಲೆ, ಒಂದು ಅಡಿಕೆ ಕೊಟ್ಟು ಮತ ಕೇಳುತ್ತಿದ್ದಾರೆ ಎಂದರು.

ದೈವಗಳ ಹೆಸರು ಕೇಳಿದೊಡನೆ ಮೈದುಂಬುವ ನಮ್ಮ ಜನರು ಮತ ನೀಡಿ, ಮರಳಿ ದನ, ಕುರಿ ಮೇಯಿಸಲು ಕಾಡುಮೇಡು ಅಲೆಯುತ್ತಾರೆ. ಗೆದ್ದವರು ಕಾಡುಗೊಲ್ಲರ ಹಟ್ಟಿಗಳತ್ತ ನೋಡುವುದಿಲ್ಲ. ಯುವಜನತೆ ಜಾಗೃತರಾಗದಿದ್ದರೆ ವಿನಾಶ ಖಂಡಿತ ಎಂದು ಎಚ್ಚರಿಸಿದರು.

‘ತಾಲ್ಲೂಕಿನಲ್ಲಿ 28 ಕಾಡುಗೊಲ್ಲರ ಹಟ್ಟಿಗಳಿವೆ. ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತೇನೆ. ಸಮುದಾಯದ ಜನರು ದೈವಗಳ ಪಟ್ಟ ಕೇಳಿಯಾದರೂ ಮೌಢ್ಯ ಬಿಡಬೇಕು. ಸೂತಕದ ಮನೆ ಕಟ್ಟಿಸಿ ಕೊಡುತ್ತೇನೆ. ಸಂಘದ ಉದ್ದೇಶ ರಾಜಕೀಯವಲ್ಲ. ಹೀನಾಯ ಸ್ಥಿತಿಯಲ್ಲಿ ಇರುವ ಕಾಡುಗೊಲ್ಲರ ಅಭಿವೃದ್ಧಿಗೆ ಶ್ರಮಿಸಿ ಮುಖ್ಯವಾಹಿನಿಗೆ ತರುವುದಾಗಿದೆ’ ಎಂದು
ಹೇಳಿದರು.

ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿ ಶ್ರೀಮಾಧವ ಆಸ್ಪತ್ರೆಯ ತಜ್ಞ ವೈದ್ಯ ಡಾ.ಕಿರಣ್ ಚಿತ್ರಲಿಂಗ ಮಾತನಾಡಿ, ಕಾಡುಗೊಲ್ಲರ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸ್ವಚ್ಛತೆ ಕಾಪಾಡಿಕೊಂಡು ಮೌಢ್ಯದಿಂದ ಹೊರಬಂದು ಇತರೆ ಸಮುದಾಯದವರೊಡನೆ ಕೂಡಿ ಬಾಳಬೇಕು. ತಾಲ್ಲೂಕಿನ ಗೊಲ್ಲರಹಟ್ಟಿಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುವುದು ಎಂದು ತಿಳಿಸಿದರು.

ಹೈಕೋರ್ಟ್‌ ವಕೀಲ ದೇವರಾಜು ಮಾತನಾಡಿ, ಸಂಘದ ರಚನೆಯ ಉದ್ದೇಶ ಅರಿವು ಮೂಡಿಸುವುದಾಗಿದೆ. ರಾಜ್ಯದಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಕಾಡುಗೊಲ್ಲರಿಗೆ ಉಚಿತವಾಗಿ ಕಾನೂನು ನೆರವು ಒದಗಿಸಲಾಗುವುದು. ಶೀಲ ಮತ್ತು ದೈವತ್ವಕ್ಕೆ ಮಾರುಹೋಗಿರುವ ಜನಾಂಗವನ್ನು ನಾವೆಲ್ಲರೂ ಸೇರಿ ಜಾಗೃತಿ ಮೂಡಿಸಬೇಕಿದೆ ಎಂದರು.

ವಕೀಲರಾದ ತಿಮ್ಮೇಗೌಡನಹಟ್ಟಿ ಭಾಗ್ಯಾ ಮಾತನಾಡಿ, ನಮ್ಮ ಜನಾಂಗದಲ್ಲಿ ಬಾಲಕಿಯರಿಗೆ ಶಿಕ್ಷಣ ಕೊಡಿಸಬೇಕು. ಅಂಟುಮುಂಟು ನೆಪದಲ್ಲಿ ಮಹಿಳೆಯರ ಮೇಲಿನ ಶೋಷಣೆ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ಶಿಕ್ಷಕ ಲೋಕೇಶ್, ಸೋಲೂರಿನ ಡಾ.ಕೆಂಚಪ್ಪ ಮಾತನಾಡಿದರು. ದೇವರಹಟ್ಟಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಪೂಜಾರಿ ಅನಂತಸ್ವಾಮಿ, ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಮ್ಮ ಕೆಂಚಪ್ಪ, ಹುಲಿಯಪ್ಪನಹಟ್ಟಿ ಜುಂಜಪ್ಪಸ್ವಾಮಿ ಪೂಜಾರಿ ಮಹಲಿಂಗಯ್ಯ, ತಿಮ್ಮಪ್ಪಸ್ವಾಮಿ ಪೂಜಾರಿ ತಮ್ಮಯ್ಯಣ್ಣ, ಅಗಲಕೋಟೆ ನಾಗರಾಜು, ಅತ್ತಿಂಗೆರೆ ರಾಜಣ್ಣ, ಕುಮಾರ್, ಗೋಪಾಲ್ ಡಿ. ಕಾಂತರಾಜು, ಲೋಕೇಶ್, ಧನಂಜಯ, ಶಿವರಾಜು, ಹೇಮಂತ್ ಕುಮಾರ್, ಮತ್ತಿಕೆರೆ ಕುಮಾರ್, ಮಹಲಿಂಗಯ್ಯ, ಅಜ್ಜನಹಳ್ಳಿ ಕಾಂತರಾಜು, ದೇವರಾಜು, ದೇವರಹಟ್ಟಿ ಕಾಂತರಾಜು, ಬಸವೇನಹಳ್ಳಿ ಮಹೇಶ್, ತಟವಾಳ್ ಯೋಗೇಶ್, ಬೈಲಪ್ಪ
ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.