ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ, ಶಾ ಗುಲಾಮರಾಗಿರುವ ರಾಜ್ಯಪಾಲ: ಶಾಸಕ ಹುಸೇನ್ ಕಿಡಿ

ಸುಳ್ಳೇ ಕುಮಾರಸ್ವಾಮಿ ಮನೆ ದೇವರು; ಹುಸೇನ್
Published 19 ಆಗಸ್ಟ್ 2024, 11:27 IST
Last Updated 19 ಆಗಸ್ಟ್ 2024, 11:27 IST
ಅಕ್ಷರ ಗಾತ್ರ

ರಾಮನಗರ: ‘ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸುಳ್ಳೇ ಮನೆ ದೇವರು. ಪದೇ ಪದೇ ಸುಳ್ಳು ಹೇಳಿ, ಅದನ್ನೇ ಸತ್ಯ ಮಾಡುವುದು ಅವರ ಕೆಲಸ. ಮುಡಾ ವಿಚಾರದಲ್ಲಿಯೂ ಅವರು ಅದನ್ನೇ ಮಾಡುತ್ತಿದ್ದಾರೆ’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಕಿಡಿಕಾರಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಖಂಡಿಸಿ ಸೋಮವಾರ ನಡೆದ ಕಾಂಗ್ರೆಸ್ ಪ್ರತಿಭಟನೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ಮುಡಾ ಹಗರಣ ಹೊರಬರಲು ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಕಾರಣ ಎಂದಿರುವ ಕುಮಾರಸ್ವಾಮಿ ಅವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ನಮ್ಮ ನಾಯಕರ ನಡುವೆ ಒಡಕುಂಟು ಮಾಡಿ, ಜನಪ್ರಿಯ ಸರ್ಕಾರಕ್ಕೆ ಕಪ್ಪುಚುಕ್ಕೆ ತರಲು ಅವರು ಈ ರೀತಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಲಾಮರಂತೆ ಕೆಲಸ: ‘ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಗುಲಾಮರಂತೆ ಕೆಲಸ ಮಾಡುತ್ತಿದ್ದಾರೆ. ರಾಜಭವನವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿ ಕಚೇರಿ ಮಾಡಿಕೊಂಡಿರುವ ಅವರು, ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಮುಂದಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಮುಡಾ ವಿಷಯವು ಹಗರಣವೇ ಅಲ್ಲ. ಅದನ್ನು ಪ್ರಾಸಿಕ್ಯೂಷನ್‌ಗೆ ಕೊಡುವ ಅಗತ್ಯವೂ ಇಲ್ಲ. ಲೋಕಾಯುಕ್ತವು ಹಲವು ಪ್ರಕರಣಗಳಲ್ಲಿ ಕೇಳಿರುವ ಅನುಮತಿಗಳನ್ನು ಸುಮ್ಮನೆ ಇಟ್ಟುಕೊಂಡಿರುವ ರಾಜ್ಯಪಾಲರು, ಸಿದ್ದರಾಮಯ್ಯ ಅವರ ವಿರುದ್ಧ ತಕ್ಷಣ ಅನುಮತಿ ನೀಡುವ ಮೂಲಕ ಬಿಜೆಪಿ–ಜೆಡಿಎಸ್‌ನವರ ದ್ವೇಷದ ರಾಜಕಾರಣಕ್ಕೆ ಕೈ ಜೋಡಿಸಿದ್ದಾರೆ. ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಸಿ.ಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT